ಶಿಕ್ಷಣ ಮನಸ್ಸಿಗೆ ಸಂತಸ ನೀಡುವಂತಿರಬೇಕು: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

ಹಂಚಿಕೊಳ್ಳಿ

ಧಾರವಾಡ: ಶಿಕ್ಷಣ ಎಂದರೆ ಕೇವಲ ಕಲಿಯುವುದು ಹಾಗೂ ಜ್ಞಾನ ಸಂಪಾದಿಸುವುದಷ್ಟೇ ಅಲ್ಲ. ನಮ್ಮ ಮನಸ್ಸಿನಲ್ಲಿ ಅಡಗಿರುವ ಕೆಟ್ಟ ವಿಚಾರಗಳನ್ನು ತೊಡೆದುಹಾಕಿ, ಮನಸ್ಸನ್ನು ದೋಷಮುಕ್ತಗೊಳಿಸುವುದು ಹಾಗೂ ದುರ್ಗುಣಗಳನ್ನು ದೂರ ಮಾಡಿಕೊಳ್ಳುವುದೂ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ಧಾರವಾಡದ ವಿದ್ಯಾಗಿರಿಯಲ್ಲಿರುವ ಜನತಾ ಶಿಕ್ಷಣ ಸಮಿತಿಗೆ ಬುಧವಾರ ಆಗಮಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣವು ನಮ್ಮಲ್ಲಿ ಜ್ಞಾನ, ಶಿಸ್ತು, ಆತ್ಮವಿಶ್ವಾಸ, ಸಂಸ್ಕಾರ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬೇಕು. ಅಪರಿಗ್ರಹ ಸೇರಿದಂತೆ ದುರ್ಗುಣಗಳನ್ನು ತ್ಯಜಿಸುವ ಮೂಲಕ ಅಂತರಾತ್ಮವನ್ನು ಶುದ್ಧೀಕರಿಸಿಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿರುವ ದೋಷಗಳು ನಿವಾರಣೆಯಾಗುತ್ತವೆ ಎಂದರು.

ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಅಥವಾ ಯಶಸ್ಸು ಸಾಧಿಸಲು ಸೀಮಿತವಾಗಬಾರದು. ಕಲಿಯುವ ವಿಷಯ ಮುಗಿದ ತಕ್ಷಣ ‘ಇಷ್ಟು ಬೇಗ ಮುಗಿಯಬಾರದಿತ್ತು’ ಎಂಬ ಭಾವನೆ ಮೂಡಬೇಕು. ಕಲಿಕೆಯಿಂದ ಮನಸ್ಸಿಗೆ ಸಂತೋಷ ಹಾಗೂ ತೃಪ್ತಿ ದೊರೆಯಬೇಕು. ಅಂತಹ ಶಿಕ್ಷಣವೇ ನಿಜವಾದ ಶಿಕ್ಷಣ ಎಂದು ಶ್ರೀಗಳು ತಿಳಿಸಿದರು.

ಮೌಲ್ಯಾಧಾರಿತ ಶಿಕ್ಷಣವನ್ನು ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಜೆ.ಎಸ್.ಎಸ್. ಸಂಸ್ಥೆಯು ದೇಶದ ವಿವಿಧ ಭಾಗಗಳಲ್ಲಿ ನೀಡುತ್ತಿದೆ. ಈ ಸಂಸ್ಥೆಗಳ ಮೂಲಕ ಮಾನವಕುಲದ ಉನ್ನತಿಗೆ ಮಹತ್ವದ ಕೊಡುಗೆ ದೊರೆಯಲಿದೆ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಮಾತನಾಡಿ, ಪೂಜ್ಯರ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಜೆ.ಎಸ್.ಎಸ್. ಸಂಸ್ಥೆಗಳು ನೈತಿಕ ನೆಲೆಗಟ್ಟಿನ ಮೇಲೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿವೆ. ಇಂದು ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರು ನಮ್ಮ ಸಂಸ್ಥೆಗೆ ಆಗಮಿಸುವ ಮೂಲಕ ಅವರ ಪಾದಸ್ಪರ್ಶದಿಂದ ಆವರಣ ಪಾವನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರಿಗೆ ಶ್ರೀಕೃಷ್ಣ ಪರಮಾತ್ಮನ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಜೆ.ಎಸ್.ಎಸ್. ಆಡಳಿತ ಮಂಡಳಿ ಸದಸ್ಯರಾದ ಶ್ರೀಕಾಂತ ಕೆಮ್ತೂರ, ಡಾ. ಎಂ.ಎನ್. ತಾವರಗೇರಿ, ಆಡಳಿತಾಧಿಕಾರಿ ಅರಿಹಂತ ಪ್ರಸಾದ್, ಮಹಾವೀರ ಉಪಾಧ್ಯಾಯ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *