ನಾಗೋಯಾ
ಏಷ್ಯನ್ ಕ್ರೀಡಾಕೂಟದ ೨೦ನೇ ಆವೃತ್ತಿಯಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳ ಕೊನೆಯ ದಿನವಾಗಿದ್ದ ಮಂಗಳವಾರದಂದು ಭಾರತ ಚಿನ್ನದ ಪದಕದೊಂದಿಗೆ ತನ್ನ ಅಥ್ಲೆಟಿಕ್ಸ್ ಅಭಿಯಾನಕ್ಕೆ ತೆರೆ ಎಳೆಯಿತು.
ವಿಥ್ಯಾ ರಾಮರಾಜ್ ಸಾರಥ್ಯದ ಮಹಿಳೆಯರ ೪ ಷ ೪೦೦ ಮೀಟರ್ ರೀಲೆ ತಂಡ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಪ್ರಸಕ್ತ ಕ್ರೀಡೆಗಳ ಆರನೇ ಚಿನ್ನದ ಪದಕ ತಂದಿತ್ತಿತು.
ಕಿರಣ್ ಪಹಲ್, ಅನುಭವಿ ಎಂ.ಆರ್. ಪೂವಮ್ಮ, ಪ್ರಾಚಿ ಹಾಗೂ ವಿಥ್ಯಾ ರಾಮರಾಜ್ ಅವರಿಂದ ಕೂಡಿದ್ದ ಭಾರತ ತಂಡ ೩ ನಿಮಿಷ ೨೯.೬೯ ಸೆಕಂದುಗಳಲ್ಲಿ ಗುರಿ ತಲುಪಿ ಹೊನ್ನಿನ ಪದಕದ ಮೇಲೆ ತನ್ನ ಹಕ್ಕು ಜಮಾಯಿಸಿತು. ಚಿನ್ನ ಗೆದ್ದೇ ಬಿಡುತ್ತದೆಯೆಂದೆನಿಸಿದ್ದ ಬಹ್ರೇನ್ ೩ ನಿಮಿಷ ೩೦.೨೧ ಸೆಕಂದುಗಳ ಸಮಯದೊಂದಿಗೆ ಬೆಳ್ಳಿಯ ಪದಕಕ್ಕೆ ಕೊರಳು ನೀಡಿದರೆ, ಚೀನಾ(ಸಮಯ: ೩ ನಿಮಿಷ ೩೧.೦೨ ಸೆಕಂದುಗಳು) ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
೬ನೇ ಲೇನ್ನಿಂದ ಸ್ಪರ್ಧೆಯನ್ನಾರಂಭಿಸಿದ ಭಾರತದ ಪರ ಮೊದಲ ಲ್ಯಾಪ್ ಓಡಿದ ಕಿರಣ್ ಪಹಲ್ ಮೂರನೇ ಸ್ಥಾನದಲ್ಲಿ ಬ್ಯಾಟನ್ ಹಸ್ತಾಂತರಿಸಿದರು. ಅಂತರ ಕಡಿಮೆ ಮಾಡುವ ಜವಾಬ್ದಾರಿ ಹೊತ್ತ ಪೂವಮ್ಮ ಬಲಿಷ್ಠ ಎರಡನೇ ಲೆಗ್ನಲ್ಲಿ ಸೆಣಸಿ ಭಾರತವನ್ನು ಮುಂಚೂಣಿಗೆ ತಂದು ಪ್ರಾಚಿ ಅವರಿಗೆ ಬ್ಯಾಟನ್ ನೀಡಿದರು.
ಮಹಿಳೆಯರ ೪೦೦ ಮೀ. ಓಟದಲ್ಲೀಗಾಗಲೇ ಕಂಚು ಗೆದ್ದಿರುವ ಪ್ರಾಚಿ, ಪದಕದ ಸ್ಪರ್ಧೆಯಲ್ಲಿ ಭಾರತದ ಸ್ಥಾನವನ್ನು ಭದ್ರ ಪಡಿಸಿದರಲ್ಲದೇ, ಸ್ಪರ್ಧಾತ್ಮಕ ಸ್ಥಾನದಲ್ಲಿ ಆ್ಯಂಕರ್ ಲೆಗ್ ಓಡುತ್ತಿದ್ದ ವಿಥ್ಯಾಗೆ ಬ್ಯಾಟನ್ ಹಸ್ತಾಂತರಿಸಿದರು.
ಬೇಗನೇ ತಮ್ಮ ಓಟದ ಲಯ ಕಂಡುಕೊಂಡ ವಿಥ್ಯಾ ತಮ್ಮ ಮುಂದಿದ್ದ ಓಟಗಾರ್ತಿಯರಿಗಿದ್ದ ಅಂತರವನ್ನು ಕಡಿಮೆ ಮಾಡಲಾರಂಭಿಸಿದರಲ್ಲದೇ ೨೦೦ ಮೀ. ಬಾಕಿಯಿರುವಂತೆಯೇ ಗೇರ್’ ಬದಲಾವಣೆ ಮಾಡಿದರು. ಕಣದಲ್ಲಿದ್ದ ಅತ್ಯಂತ ಪ್ರಬಲಫಿನಿಷರ್’ಗಳಲ್ಲಿ ಒಬ್ಬರಾದ ಬಹ್ರೇನ್ನ ಸಲ್ವಾ ಈದ್ ನಾಸರ್ ಅವರನ್ನೂ ಹಿಂದಿಕ್ಕಿ ಮೊದಲಿಗರಾಗಿ ಮುಕ್ತಾಯದ ಗೆರೆ ದಾಟುತ್ತಿದ್ದಂತೆಯೇ ಭಾರತದ ಶಿಬಿರದಲ್ಲಿ ಸಂಭ್ರಮ-ಸಡಗರ ಮನೆ ಮಾಡಿತ್ತು.
ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಈ ಸ್ಪರ್ಧೆಯಲ್ಲಿ ಬೆಳ್ಳಿ ಬಾಚಿಕೊಂಡಿದ್ದ ಭಾರತ ಈ ಸಲ ಚಿನ್ನಕ್ಕೆ ಮುತ್ತಿಕ್ಕಿದ್ದು ಭವಿಷ್ಯದ ದೃಷ್ಟಿಯಿಂದ ಒಂದು ಅತ್ಯುತ್ತಮ ಬೆಳವಣಿಗೆ. ವಿಥ್ಯಾ ಈ ಪದಕದೊಂದಿಗೆ ಪ್ರಸಕ್ತ ಕೂಟದಲ್ಲಿ ಗಳಿಸಿದ ಪದಕಗಳ ಸಂಖ್ಯೆ ಮೂರಕ್ಕೇರಿತು.
ಆತಿಥೇಯ ಜಪಾನ ೩ ನಿಮಿಷ ೩೧.೪೪ ಸೆಕಂದುಗಳ ಸಮಯದೊಂದಿಗೆ ನಾಲ್ಕನೇಯದಾದರೆ, ವಿಯೆಟ್ನಾಮ್, ಕಜಾಕಿಸ್ತಾನ, ಶ್ರೀಲಂಕಾ ಹಾಗೂ ಚೈನೀಸ್ ತೈಪೆ ಅನುಕ್ರಮವಾಗಿ ಐದರಿಂದ ಎಂಟನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದವು.

