ಕಲಘಟಗಿ
ಕೃಷಿಯಲ್ಲಿ ಶಿಸ್ತು, ಸಮಯ ಪಾಲನೆ ಅಳವಡಿಸಿಕೊಳ್ಳುವುದರಿಂದ ಲಾಭ ಸಾಧ್ಯ ಎಂದು ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಮಂಜಯ್ಯ ಅಣ್ಣಿಗೇರಿ ಹೇಳಿದರು.
ಧಾರವಾಡ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಬುಧವಾರ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೃಷಿಯನ್ನು ಒಂದು ನೌಕರಿಯಂತೆ ಪರಿಗಣಿಸಿ ಶಿಸ್ತು ಅಳವಡಿಸಕೊಂಡು ಸಮಯ ವ್ಯರ್ಥ ಮಾಡದೆ ಕಾಯಕ ನಿರ್ವಹಿಸಿದರೆ ಆದಾಯ ಗಳಿಸಬಹುದು ಎಂದರು.
ಕೇವಲ ಒಂದೇ ಬೆಳೆಯನ್ನು ನಂಬಿಕೊಂಡು ಕುಳಿತುಕೊಳ್ಳುವ ಬದಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಸದ್ಯ ನಾವು ಎದುರಿಸುತ್ತಿರುವ ಬರದಂತಹ ಸ್ಥಿತಿಗಳನ್ನು ಎದುರಿಸಲು ಸೂಕ್ತ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಹಿಂದಿನ ಕಾಲದ ಪದ್ಧತಿಗಳ ಜೊತೆಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಮನಸ್ಸು ಮಾಡಿದರೆ ಒಂದು ಎಕರೆ ಪ್ರದೇಶದಲ್ಲಿ ೩೦ ಲಕ್ಷ ಆದಾಯವನ್ನು ರೈತರು ಗಳಿಸಬಹುದು. ಬೆರಳೆಣಿಕೆ ಬೆಳೆಗಳಿಗೆ ಸಿಮೀತವಾಗಿರುವ ಕಾರಣ ನಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳ, ಭತ್ತ ಹೊರತಾಗಿ ಮೆಣಸು, ಏಲಕ್ಕಿ, ಅಡಿಕೆ, ನಿರಂತರ ಕಾಯಿ ನೀಡುವ ಮಾವು, ಕಲ್ಲಂಗಡಿಯಂತಹ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಕೃಷಿ ಪ್ರವಾಸ ಕೈಗೊಳ್ಳಬೇಕು. ಬೇರೆ ಬೇರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳ ಅಧ್ಯಯನ ಮಾಡಬೇಕು. ತಜ್ಞರ ಮಾರ್ಗದರ್ಶನ ಪಡೆದು ಕೃಷಿಯಲ್ಲಿ ನಿರಂತರ ಪ್ರಯತ್ನಗಳನ್ನು ಅನ್ನದಾತರು ಮಾಡುತ್ತಲೇ ಇರಬೇಕು. ಸಮಸ್ಯೆಗಳ ನೆಪದಲ್ಲಿ ಕೃಷಿಯಿಂದ ವಿಮುಖರಾಗುವುದರ ಬದಲಾಗಿ ಕೃಷಿ ನಂಬಿ ಯಶಸ್ಸು ಕಾಣುವಂತವರಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಮ್ಮಿಗಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಶ್ರೀನಿವಾಸ, ಗ್ರಾಮಸ್ಥರಾದ ಶಂಕ್ರಪ್ಪ ವಾಲಿ, ಶಂಕ್ರಪ್ಪ ಹೆಗ್ಗಣ್ಣವರ, ಪರಪ್ಪ ಜವಳಿ, ಆನಂದ ಹಾವೇರಿ, ಶಂಕರ ಸಾದರ, ಗುರುಸಿದ್ದಯ್ಯ ಪಾಟೀಲ, ಅಂಗನವಾಡಿ ಶಿಕ್ಷಕಿ ಸಾವಿತ್ರಿ ನೆನಕ್ಕಿ ಸೇರಿದಂತೆ ಗ್ರಾಮಸ್ಥರು ಇದ್ದರು.
