ಏಷ್ಯನ್ ಗೇಮ್ಸ್-೨೦೨೬: ಭಾರತಕ್ಕೆ ೧೦ನೇ ಚಿನ್ನದ ಪದಕ

ಹಂಚಿಕೊಳ್ಳಿ

ನಾಗೋಯಾ
ಉತ್ಕೃಷ್ಟ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳು ಬುಧವಾರ ಮುಂಜಾನೆ ಮತ್ತೆ ನಾಲ್ಕು ಚಿನ್ನದ ಪದಕಗಳಿಗೆ ಲಗ್ಗೆ ಹಾಕುವುದರೊಂದಿಗೆ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಚಿನ್ನದ ಪದಕಗಳ ಸಂಖ್ಯೆ ಹತ್ತಕ್ಕೆ ಏರಿದೆ.

ಪ್ರತಿಯೊಂದು ಸಲವೂ `ಬುಲ್ಸ್ ಐಸ್’ಗೆ ಗುರಿಯಿಟ್ಟ ಸಾಹಿಲ್ ಜಾಧವ, ಗಣೇಶ ಮಣಿರತ್ನಮ್ ಟಿ. ಹಾಗೂ ಕುಶಾಲ ದಲಾಲ ಅವರಿಂದ ಕೂಡಿದ್ದ ಭಾರತದ ತಂಡ ಪುರುಷರ ಬಿಲ್ಗಾರಿಕೆ ಕಂಪೌಂಡ್ ಟೀಂ ಸ್ಪರ್ಧೆಯಲ್ಲಿ ಚೀನಾ ತಂಡವನ್ನು(೨೩೮-೨೩೯) ಒಂದೇ ಒಂದು ಪಾಯಿಂಟ್‌ನಿಂದ ಪರಾಭವಗೊಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.

ಇದಕ್ಕೂ ಮೊದಲು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ೨೪೦ಕ್ಕೆ ೨೪೦ ಪಾಯಿಂಟ್ ಗಳಿಸಿ ವಿಶ್ವದಾಖಲೆ ಬರೆದಿದ್ದ ದಕ್ಷಿಣ ಕೊರಿಯಾ ತಂಡವನ್ನು(೨೩೬-೨೨೯) ಏಳು ಪಾಯಿಂಟ್‌ಗಳಿಂದ ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು.

ಇದಕ್ಕೂ ಮೊದಲು ಚಿಕಿತಾ ತಾನಿಪರ್ತಿ, ಪ್ರೀತಿಕಾ ಪ್ರದೀಪ್ ಹಾಗೂ ಜ್ಯೋತಿ ಸುರೇಖಾ ವೆನ್ನಮ್ ಅವರಿಂದ ಕೂಡಿದ್ದ ಭಾರತದ ಕಂಪೌಂಡ್ ಬಿಲ್ಲುಗಾರ್ತಿಯರ ತಂಡ ಇಲ್ಲಿಯ ಒಕಾಜಾಕಿ ಚುವೋ ಸೋಗೋ ಪಾರ್ಕ್ ಮಲ್ಟಿಪರ್ಪಸ್ ಸ್ಕ್ವೇರ್‌ನಲ್ಲಿ ಚೀನ ತಂಡದ ಎದುರು(೨೩೮-೨೩೪) ನಾಲ್ಕು ಪಾಯಿಂಟ್‌ಗಳ ಗೆಲುವು ದಾಖಲಿಸಿ ಚಿನ್ನದ ಪದಕ ಬಾಚಿಕೊಂಡಿತ್ತು. ಭಾರತ ಈ ಸ್ಪರ್ಧೆಯಲ್ಲಿ ೨೦೧೪ರಲ್ಲಿ ಕಂಚಿನ ಹಾಗೂ ೨೦೧೮ರಲ್ಲಿ ಬೆಳ್ಳಿಯ ಪದಕ ಜಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಮಿಶ್ರ ಕಂಪೌಂಡ್‌ನಲ್ಲಿ ಚಿನ್ನ:
ಭಾರತಕ್ಕೆ ೮ನೇ ಸ್ವರ್ಣ ಪದಕ ದೊರಕಿದ್ದು ಬಿಲ್ಲುಗಾರಿಕೆಯ ಮಿಶ್ರ ಕಂಪೌಂಡ್ ತಂಡ ವಿಭಾಗದಲ್ಲಿ. ಚಿಕಿತಾ ತಾನಿಪರ್ತಿ ಹಾಗೂ ಸಾಹಿಲ್ ಜಾಧವ್ ಅವರಿದ್ದ ಭಾರತದ ಮಿಶ್ರ ತಂಡ ಫೈನಲ್‌ನಲ್ಲಿ ೨೦೧೪ರಿಂದಲೂ ಅಜೇಯವಾಗಿದ್ದ ವಿಶ್ವದ ನಂಬರ್ ೧ ದಕ್ಷಿಣ ಕೊರಿಯಾ ತಂಡವನ್ನು ಶೂಟ್-ಆಫ್‌ನಲ್ಲಿ ೧೫೮-೧೫೭ ಪಾಯಿಂಟ್‌ಗಳಿಂದ ಮಣಿಸಿತು.

ಬಿಟ್ಟ ೧೬೦ ಬಾಣಗಳ ಪೈಕಿ ಎರಡೂ ತಂಡಗಳು ೧೫೭-೧೫೭ರ ಸಮಬಲ ಸಾಧಿಸಿದ್ದರಿಂದ ವಿಜಯಿಗಳ ನಿರ್ಧಾರಕ್ಕೆ ಅಳವಡಿಸಲಾದ ಶೂಟ್-ಆಫ್‌ನಲ್ಲಿ ಭಾರತ ೨೦-೧೯ ರಿಂದ ಜಯಿಸಿತಲ್ಲದೇ ೨೦೨೮ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ ‌ಗೆ ನೇರ ಅರ್ಹತೆ ದೊರಕಿಸಿಕೊಂಡಿತು.

ನಂತರ ಶೂಟಿಂಗ್‌ನಲ್ಲಿ ನೀರು ಧಂಡಾ ಹಾಗೂ ಕೈನಾನ್ ಚೆನೈರಿಂದ ಕೂಡಿದ್ದ ಮಿಶ್ರ ಟ್ರ್ಯಾಪ್ ತಂಡ ಫೈನಲ್‌ನಲ್ಲಿ ೩೪ ಪಾಯಿಂಟ್ ಸಂಪಾದಿಸಿ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಬಾಚಿಕೊಂಡಿತು. ಈ ಸ್ಪರ್ಧೆಯ ಹಳೆಯ ದಾಖಲೆ ೨೦೧೮ರಲ್ಲಿ ಜಕಾರ್ತಾದಲ್ಲಿ ಚೀನ ಗಳಿಸಿದ ೩೦ ಪಾಯಿಂಟ್‌ಗಳದ್ದಾಗಿತ್ತು.

ಕತಾರ್(೩೨ ಪಾಯಿಂಟ್) ಬೆಳ್ಳಿ ಹಾಗೂ ಚೀನ(೨೩ ಪಾಯಿಂಟ್) ಕಂಚಿನ ಪದಕ ಗಳಿಸಿದವು. ಇದು ಈ ಸ್ಪರ್ಧೆಯ ಇತಿಹಾಸದಲ್ಲಿಯೇ ಭಾರತ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆಯಿತು.

ಭಾರತಕ್ಕೆ ೭ನೇ ಸ್ಥಾನ:
ಬುಧವಾರ ದಿನದ ಕೊನೆಯ ವರೆಗೆ ಒಟ್ಟು ೫೯ ಪದಕ(೧೦ ಚಿನ್ನ, ೨೧ ಬೆಳ್ಳಿ ಹಾಗೂ ೨೮ ಕಂಚು) ಗೆದ್ದಿದ್ದ ಭಾರತ ಪದಕಗಳ ಪಟ್ಟಿಯಲ್ಲಿ ೭ನೇ ಸ್ಥಾನಕ್ಕೇರಿತ್ತು. ಚೀನಾ ೨೫೭(ಚಿನ್ನ ೧೪೪), ಜಪಾನ್ ೧೮೪(ಚಿನ್ನ ೪೫) ಹಾಗೂ ದಕ್ಷಿಣ ಕೊರಿಯಾ ೯೭(ಚಿನ್ನ ೨೪) ಮೊದಲಿನ ಮೂರು ಸ್ಥಾನಗಳಲ್ಲಿದ್ದವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *