ಹರ್ಮನ್, ಶಫಾಲಿ ಬ್ಯಾಟಿಂಗ್ ಅಬ್ಬರ, ನಂದನಿ ಮಾರಕ ದಾಳಿ, ಭಾರತಕ್ಕೆ ೩-೦ ಸರಣಿ ಸ್ವೀಪ್

ಹಂಚಿಕೊಳ್ಳಿ

ರಾಯಪುರ
ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಶಫಾಲಿ ವರ್ಮಾ ಅವರುಗಳ ಸ್ಫೋಟಕ ಬ್ಯಾಟಿಂಗ್ ಮತ್ತು ವೇಗಿ ನಂದನಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಇಲ್ಲಿ ನಡೆದ ಮೂರು ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯೆದುರು ೯೨ ರನ್‌ಗಳಿಂದ ಜಯಿಸಿ ಮೂರು ಪಂದ್ಯಗಳ ಸರಣಿಯಲ್ಲಿ ೩-೦ ವೈಟ್ ವಾಷ್’ ದಾಖಲಿಸಿತು.

ಮಂಗಳವಾರ ರಾತ್ರಿ ಇಲ್ಲಿಯ ಶಹೀದ್ ವೀರ ನಾರಾಯಣಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ೭ ವಿಕೆಟ್‌ಗಳಿಗೆ ೨೧೬ರ ಬೃಹತ್ ಮೊತ್ತ ದಾಖಲಿಸಿದರೆ, ಉತ್ತರವಾಗಿ ಜಿಂಬಾಬ್ವೆ ೭ ವಿಕೆಟ್‌ಗಳಿಗೆ ೧೨೪ರ ಮೊತ್ತ ತಲುಪುವಲ್ಲಿ ಮಾತ್ರ ಯಶ ಕಂಡಿತು. ಗೆಲ್ಲಲು ೨೧೭ ರನ್ ಗಳಿಸಬೇಕಿದ್ದ ಜಿಂಬಾಬ್ವೆ ಶಾರ್ನೆ ಮೇರ‍್ಸ್(೬೦, ೪೯ ಎಸೆತ, ೪ ಬೌಂಡರಿ, ೪ ಸಿಕ್ಸರ್) ಹಾಗೂ ಬಿಲವ್ಡ್ ಬಿಜಾ(೪೪, ೫೦ ಎಸೆತ, ೫ ಬೌಂಡರಿ) ಹೋರಾಟಪೂರ್ಣ ಸರದಿಗಳ ಹೊರತಾಗಿಯೂ ಗುರಿ ತಲುಪುವಲ್ಲಿ ವಿಫಲವಾಯಿತು.

ಭಾರತದ ಪರ ವೇಗಿ ನಂದನಿ ಶರ್ಮಾ(೩/೧೮) ಅತ್ಯಂತ ಯಶಸ್ವಿ ಬೌಲರ್ ಎನಿಸಿದರೆ, ಕನ್ನಡತಿ ನಿಕಿ ಪ್ರಸಾದ್(೧/೫), ದೀಪ್ತಿ ಶರ್ಮಾ(೧/೧೮), ಮೊದಲ ಎಸೆತದಲ್ಲೇ ವಿಕೆಟ್ ಎತ್ತಿದ ಇನ್ನೋರ್ವ ವೇಗಿ ಕ್ರಾಂತಿ ಗೌಡ(೧/೧೯) ಹಾಗೂ ಅರುಂಧತಿ ರೆಡ್ಡಿ(೧/೨೬) ತಲಾ ಒಂದೊಂದು ಯಶ ಕಂಡರು. ಇದಕ್ಕೂ ಮೊದಲು ಬ್ಯಾಟಿಗಿಗೆ ಇಳಿದ ಭಾರತಕ್ಕೆ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಪ್ರಾರಂಭಿಕ ಬ್ಯಾಟರ್ ಶಫಾಲಿ ವರ್ಮಾ ಅಬ್ಬರದ ಆಟದೊಂದಿಗೆ ಉತ್ತಮ ಮೊತ್ತ ಕೂಡಿಸಿಕೊಟ್ಟರು.

ಹರ್ಮನ್‌ಪ್ರೀತ್ ಕೇವಲ ೪೧ ಎಸೆತಗಳಲ್ಲಿ ೧೦ ಬೌಂಡರಿ ಹಾಗೂ ೫ ಸಿಕ್ಸರ್‌ಗಳಿದ್ದ ಅಜೇಯ ೯೧ ರನ್ ಚಚ್ಚಿದರೆ, ಶಫಾಲಿ ೩೭ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೫ ಸಿಕ್ಸರ್‌ಗಳಿದ್ದ ೬೯ ರನ್ ಹಣಿದರು. ಶಫಾಲಿ ವರ್ಮಾ ಜೊತೆ ಸರದಿಯನ್ನು ಆರಂಭಿಸಿದ ಅನುಷ್ಕಾ ಶರ್ಮಾ(೨೮, ೨೦ ಎಸೆತ, ೪ ಬೌಂಡರಿ ಹಾಗೂ ೧ ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಜಿಂಬಾಬ್ವೆ ಪರ ಬಿಲವ್ಡ್ ಬಿಜಾ(೩/೫೦) ಬೌಲಿಂಗಿನಲ್ಲಿ ಮಿಂಚಿದರು. ಶಫಾಲಿ ವರ್ಮಾ ತಮ್ಮ ಆಲ್‌ರೌಂಡ್ ಆಟದೊಂದಿಗೆಪಂದ್ಯಾವಳಿಯ ಆಟಗಾರ್ತಿ’ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರುಗಳು: ಭಾರತ; ೨೦ ಓವರ್‌ಗಳಲ್ಲಿ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗಳಿಗೆ ೨೧೬, ಜಿಂಬಾಬ್ವೆ: ೨೦ ಓವರ್‌ಗಳಲ್ಲಿ ೭ ವಿಕೆಟ್‌ಗಳಿಗೆ ೧೨೪. ಫಲಿತಾಂಶ: ಭಾರತಕ್ಕೆ ೯೨ ರನ್ ಜಯ ಹಾಗೂ ಸರಣಿಯಲ್ಲಿ ೩-೦ ಗೆಲುವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *