ರಣಜಿ ಟ್ರೋಫಿ: ಶಿಖರ್ ಶೆಟ್ಟಿಗೆ ಫೈಫರ್’, ತ್ರಿಪುರಾ ೧೯೪ಕ್ಕೆ ಆಲೌಟ್, ಆತಿಥೇಯರಿಗೂ ಆರಂಭದ ಆಘಾತ

ಹಂಚಿಕೊಳ್ಳಿ

ಮೈಸೂರು
ಹೊಸ ರಣಜಿ ಋತುವಿನ ಎರಡನೇ ಪಂದ್ಯದಲ್ಲಿ ಬೆಂಚ್ ಬಿಸಿ ಮಾಡಿದ್ದ ಪ್ರತಿಭಾನ್ವಿತ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ನಾಲ್ಕೇ ದಿನಗಳ ಹಿಂದೆ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಸಿದ ಮೈಸೂರಿನಲ್ಲಿ ಫೈಫರ್’ ಸಾಧನೆಯೊಂದಿಗೆ ಮಿಂಚಿದ್ದಾರೆ.

ಈ ಪ್ರತಿಭಾನ್ವಿತ ಸ್ಪಿನ್ನರ್ ಒಟ್ಟು ೪ ಮೇಡನ್‌ಗಳಿದ್ದ ೧೮ ಓವರ್‌ಗಳಲ್ಲಿ ೫೪ ರನ್ ನೀಡಿ ೫ ವಿಕೆಟ್ ಕಬಳಿಸುವುದರೊಂದಿಗೆ ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ. ಮೈದಾನದಲ್ಲಿ ಸೋಮವಾರ ಪ್ರಾರಂಭವಾದ ಎಲೀಟ್ ಗುಂಪಿನ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತ್ರಿಪುರಾ ತನ್ನ ಮೊದಲ ಸರದಿಯಲ್ಲಿ ಕೇವಲ ೧೯೪ಕ್ಕೆ ಸರ್ವಪತನ ಕಂಡಿತು.

ಕಳೆದ ಪಂದ್ಯದ ಶತಕ ವೀರ’ ಮನ್ವಂತ್ ಕುಮಾರ(೩/೨೩) ಬೌಲಿಂಗಿನಲ್ಲಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರೆ, ವೈಶಾಖ್ ವಿಜಯಕುಮಾರ(೧/೨೯) ಹಾಗೂ ನಾಯಕ ಶ್ರೇಯಸ್ ಗೋಪಾಲ(೧/೩೪) ತಲಾ ಒಂದೊಂದು ವಿಕೆಟ್ ಪಡೆದರು. ಪ್ರಾರಂಭಿಕ ಬ್ಯಾಟರ್ ವಿಕ್ರಮ್‌ಕುಮಾರ ದಾಸ್ ೮೦ ಎಸೆತಗಳಲ್ಲಿ ೫ ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ ೫೧ ರನ್ ಸಿಡಿಸಿ ತ್ರಿಪುರಾ ತಂಡಕ್ಕೆ ಉತ್ತಮ ಆರಂಭವನ್ನೊದಗಿಸಿ ಕೊಟ್ಟರಾದರೂ ಉಳಿದ ಬ್ಯಾಟರ್‌ಗಳು ಕರ್ನಾಟಕದ ದಾಳಿಯೆದುರು ಪರದಾಡಿದರು.

ಕೇವಲ ವಿಕ್ರಮ್ ದೇವನಾಥ(ಔಟಾಗದೇ ೩೩), ನಾಯಕ ಮಣಿಶಂಕರ ಮುರಾಸಿಂಗ್(೨೫), ಬಾಬುಲ್ ಡೇ(೨೩), ಮಂದೀಪ್ ಸಿಂಗ್(೨೦), ಋತುರಾಜ್ ಘೋಷ್ ರಾಯ್(೧೩) ಹಾಗೂ ಸೆಂತು ಸರ್ಕಾರ್(೧೨) ಮಾತ್ರ ಎರಡಂಕಿ ಪ್ರವೇಶಿಸಿದರು.

ನಂತರ ತನ್ನ ಮೊದಲ ಸರದಿಯನ್ನಾರಂಭಿಸಿದ ಕರ್ನಾಟಕ ದಿನದಾಟದ ಕೊನೆಯವರೆಗೆ ಸಾಧ್ಯವಾದ ೬ ಓವರ್‌ಗಳ ಆಟದಲ್ಲಿ ಮಯಾಂಕ್ ಅಗರ್ವಾಲ್(೧, ೯ ಎಸೆತ) ಅವರ ಮಹತ್ವದ ವಿಕೆಟ್ ಕಳೆದುಕೊಂಡು ೧೦ ರನ್ ಗಳಿಸಿತ್ತು. ಹೊಸಬ ರೋಹನ್ ಪಾಟೀಲ(ಬ್ಯಾಟಿಂಗ್ ೯) ಹಾಗೂನೈಟ್ ವಾಚ್‌ಮನ್’ ವೈಶಾಕ್ ವಿಜಯಕುಮಾರ(ಬ್ಯಾಟಿಂಗ್ ೦) ಔಟಾಗದೇ ಉಳಿದಿದ್ದು ಮಂಗಳವಾರ ಕರ್ನಾಟಕದ ಹೋರಾಟವನ್ನು ಮುಂದುವರಿಸಲಿದ್ದಾರೆ.

ಎಲೀಟ್ `ಬಿ’ ಗುಂಪಿನಲ್ಲಿರುವ ಕರ್ನಾಟಕದ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯವೆನ್ನುವುದನ್ನು ಮರೆಯುವಂತಿಲ್ಲ. ಇದುವರೆಗೆ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಎದುರಾಳಿಗಳಿಗೆ ಮುನ್ನಡೆ ಹಾಗೂ ಮಹತ್ವದ ಪಾಯಿಂಟ್ ಬಿಟ್ಟುಕೊಟ್ಟಿರುವ ಅದು ಕೇವಲ ಎರಡೇ ಎರಡು ಪಾಯಿಂಟ್ ಗಳಿಸಿ ೬ನೇ ಸ್ಥಾನದಲ್ಲಿದ್ದರೆ, ಆಡಿರುವ ಎರಡೂ ಪಂದ್ಯಗಳನ್ನೂ ಸೋತಿರುವ ತ್ರಿಪುರಾ ೮ನೇ ಹಾಗೂ ಕೊನೆಯ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರುಗಳು: ತ್ರಿಪುರಾ: ೮೨ ಓವರ್‌ಗಳಲ್ಲಿ ೧೯೪; ಕರ್ನಾಟಕ ೬ ಓವರ್‌ಗಳಲ್ಲಿ ಒಂದು ವಿಕೆಟ್‌ಗೆ ೧೦.


ಹಂಚಿಕೊಳ್ಳಿ

Leave a Reply

Your email address will not be published. Required fields are marked *