ವೀರಶೈವ ಧರ್ಮದ ಕಾಶಿ ಜ್ಞಾನ ಪೀಠಕ್ಕೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳ ಭೇಟಿ
ವಾರಾಣಸಿ(ಉ.ಪ್ರ.)
ದೇವಭೂಮಿ ಭಾರತದ ಎಲ್ಲ ಆಚಾರ್ಯ ಪರಂಪರೆಗಳು ಒಂದಾಗಿ ಧರ್ಮ ಜಾಗೃತಿ ಕೈಂಕರ್ಯಗಳಲ್ಲಿ ಭಾವನಾತ್ಮಕ ಒಗ್ಗೂಡುವಿಕೆಯಿಂದ ಮಾತ್ರ ಭಾರತದ ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಶ್ರೀಮಧ್ವಚಾರ್ಯ ಪರಂಪರೆಯ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.
ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮಮಂದಿರ ದರ್ಶನಾರ್ಥ ಕೈಕೊಂಡ ಧರ್ಮಯಾತ್ರೆಯ ಸಂದರ್ಭದಲ್ಲಿ ಇಲ್ಲಿಯ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಕಾಶಿ ಜ್ಞಾನ ಪೀಠದ ಪರಿಸರದಲ್ಲಿ ವಾಸ್ತವ್ಯಗೈದು ಮಂಗಳವಾರ ಶ್ರೀಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನೀಡಿದ ಪೀಠದ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ವೈಷ್ಣವರು, ಶೈವರು, ವೀರಶೈವರು ಸೇರಿದಂತೆ ಭಾರತದ ಉದ್ದಗಲಕ್ಕೂ ಇರುವ ಎಲ್ಲ ಆಚಾರ್ಯ ಪರಂಪರೆಯ ಪೀಠಾಚಾರ್ಯರು ಹಿಂದೂ ಧರ್ಮ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದಾಗಲೇ ಭಾರತದ ಸನಾತನ ಧರ್ಮಸಂಸ್ಕೃತಿ ಉಳಿದು ಬೆಳೆದು ಬರಲು ಸಾಧ್ಯವಾಗುತ್ತದೆ ಎಂದರು.
ಶ್ರೀಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಭಾರತದ ಆಧ್ಯಾತ್ಮಿಕ ಪರಂಪರೆಯ ಘನತೆ ವಿಶ್ವತೋಮುಖವಾಗಿ ಹರಡುವಲ್ಲಿ ರಾಷ್ಟ್ರದ ಆಚಾರ್ಯ ಪರಂಪರೆಯ ಸನಾತನ ಸಂಸ್ಕೃತಿಯ ವಿಸ್ತೃತ ಚಿಂತನೆಗಳು ಎದ್ದುಕಾಣುತ್ತವೆ. ಭಾರತವು ಹಲವಾರು ಮತಗಳ ಧರ್ಮ ಸಿಂಚನದ ಸಂಗಮವಾಗಿದ್ದು, ಎಲ್ಲಾ ಧರ್ಮಗಳ ಬೋಧನೆಯು ಸಾಕ್ಷಾತ್ಕಾರ ಸಂಪಾದನೆಯ ಬಯಲಬೆಳಗು ಕಾಣುವಲ್ಲಿ ಮಾರ್ಗದರ್ಶನ ಮಾಡುತ್ತದೆ ಎಂದರು.
ಬೆಂಗಳೂರು ವಿಭೂತಿಪುರಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚೆನ್ನಗಿರಿ ವಿರಕ್ತಮಠದ ಶ್ರೀಬಸವಜಯಚಂದ್ರ ಸ್ವಾಮೀಜಿ, ಮಂತ್ರಾಲಯ ಸಂಸ್ಥಾನದ ವ್ಯವಸ್ಥಾಪಕ ಸಮಿತಿಯ ಅಪ್ರಮೇಯ ಆಚಾರ್ಯ, ಪ್ರಕಾಶ, ಕಿಶೋರ, ರಾಜೇಶ ಶೆಟ್ಟಿ, ಶ್ರೀಕಾಶಿ ಜ್ಞಾನ ಪೀಠದ ವ್ಯವಸ್ಥಾಪಕ ಸಮಿತಿಯ ಶಿವಾನಂದ ಹಿರೇಮಠ, ಶಿವಮೂರ್ತಿ ಹಿರೇಮಠ ಹಾಗೂ ಗುರುಕುಲದ ವಿದ್ಯಾರ್ಥಿಗಳು ಇದ್ದರು.

