107 ಸಂಶೋಧನಾ ಪ್ರಬಂಧಗಳ ಸ್ವೀಕಾರ; 81 ಪ್ರಬಂಧಗಳ ಮಂಡನೆಗೆ ಆಯ್ಕೆ
ಧಾರವಾಡ
ನಗರದ ವಿದ್ಯಾಗಿರಿಯ ಜಿ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 31ರಂದು ‘ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಭಾರತದ ಆರ್ಥಿಕತೆಯ ಪರಿವರ್ತನೆ – ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ), ಅರ್ಥಶಾಸ್ತ್ರ ವಿಭಾಗ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಅಂದು ಬೆಳಿಗ್ಗೆ 10 ಗಂಟೆಗೆ ಜಿ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ಜರುಗಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೋವಾದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ನ ಗೋವಾ ಕ್ಯಾಂಪಸ್ನ ಅರ್ಥಶಾಸ್ತ್ರ ಮತ್ತು ಹಣಕಾಸು ವಿಭಾಗದ ಪ್ರಾಧ್ಯಾಪಕ ಡಾ. ದೇಬಾಸಿಸ್ ಪಟ್ನಾಯಕ್ ಆಶಯ ನುಡಿಗಳನ್ನಾಡಲಿದ್ದಾರೆ. ಎಂಸಿಎ ಇನ್ಸ್ಟಿಟ್ಯೂಟ್ ನಿರ್ದೇಶಕ ಡಾ. ಸೂರಜ್ ಜೈನ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕೃತಕ ಬುದ್ಧಿಮತ್ತೆಯ ವಿವಿಧ ಆಯಾಮಗಳ ಚರ್ಚೆ
ವ್ಯವಹಾರ, ಉದ್ಯೋಗ, ಕೃಷಿ, ಬ್ಯಾಂಕಿಂಗ್, ಶಿಕ್ಷಣ ಹಾಗೂ ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಉಂಟಾಗುವ ಅವಕಾಶಗಳು ಮತ್ತು ಸವಾಲುಗಳ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುವುದು. ತಂತ್ರಜ್ಞಾನದ ಅಳವಡಿಕೆ, ಸ್ಪರ್ಧಾತ್ಮಕತೆ, ಉತ್ಪಾದಕತೆ, ಆರ್ಥಿಕ ಒಳಗೊಳ್ಳುವಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ನಡುವಿನ ಸಂಬಂಧಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ, ಉದ್ಯಮಶೀಲತೆ, ಪೂರೈಕೆ ಸರಪಳಿಯ ನಿರ್ವಹಣೆ, ವಿದೇಶಿ ನೇರ ಹೂಡಿಕೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದಂತಹ ವಿಷಯಗಳೂ ಚರ್ಚೆಗೆ ಬರಲಿವೆ.
ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆಯ ಬಳಕೆಗೆ ಸಿದ್ಧತೆ, ಉದ್ಯೋಗಾವಕಾಶಗಳಲ್ಲಿನ ಬದಲಾವಣೆ, ಕೌಶಲ್ಯಾಭಿವೃದ್ಧಿ, ಯುವಜನರ ವೃತ್ತಿ ಪರಿವರ್ತನೆ, ಕೆಲಸದ ಒತ್ತಡ, ಉದ್ಯೋಗಿಗಳ ಯೋಗಕ್ಷೇಮ ಹಾಗೂ ವಾರದಲ್ಲಿ ಐದು ದಿನಗಳ ಕೆಲಸದ ಸಾಧ್ಯತೆಗಳ ಕುರಿತು ವಿಶ್ಲೇಷಣೆ ನಡೆಯಲಿದೆ.
ಹಣಕಾಸು ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಡಿಜಿಟಲೀಕರಣ, ಯುಪಿಐ ವಹಿವಾಟು, ಗ್ರಾಹಕರ ಖರ್ಚಿನ ಪ್ರವೃತ್ತಿ, ಧ್ವನಿ ಆಧಾರಿತ ವಾಣಿಜ್ಯ ಸೇವೆಗಳು, ಆನ್ಲೈನ್ ಉತ್ಪನ್ನಗಳ ಶಿಫಾರಸು, ತೆರಿಗೆ ನಿಯಮಗಳ ಪಾಲನೆ ಹಾಗೂ ಅನುತ್ಪಾದಕ ಆಸ್ತಿಗಳ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರದ ಕುರಿತು ಚರ್ಚಿಸಲಾಗುವುದು. ಮಹಿಳೆಯರ ಡಿಜಿಟಲ್ ಸಾಕ್ಷರತೆ, ಹಣಕಾಸು ಸೇವೆಗಳ ಲಭ್ಯತೆ ಮತ್ತು ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ.
ಕೃಷಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಕೃಷಿ, ಕೃಷಿ ಕಾರ್ಮಿಕರ ಜೀವನೋಪಾಯದ ಭದ್ರತೆ, ಹಣ್ಣು ಮತ್ತು ತರಕಾರಿ ಉತ್ಪಾದನೆ, ಹಸಿರು ಕೃಷಿ ಹಾಗೂ ಪರಿಸರ ಸಂರಕ್ಷಣೆಯ ವಿಷಯಗಳ ಕುರಿತು ಪ್ರಬಂಧಗಳು ಮಂಡನೆಯಾಗಲಿವೆ.
ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಕಲಿಕೆಯ ಗುಣಮಟ್ಟ, ಡಿಜಿಟಲ್ ಗ್ರಂಥಾಲಯಗಳು, ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ಹಾಗೂ ಉದ್ಯೋಗಾಧಾರಿತ ಕೌಶಲ್ಯಗಳ ಅಭಿವೃದ್ಧಿಯ ಬಗ್ಗೆಯೂ ಸಂಶೋಧಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಧಾರವಾಡ, ರಾಯಚೂರು, ಬೆಳಗಾವಿ ಮತ್ತು ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಅಧ್ಯಯನಗಳು ರಾಷ್ಟ್ರೀಯ ಆರ್ಥಿಕ ವಿಚಾರಗಳನ್ನು ಪ್ರಾದೇಶಿಕ ಅಭಿವೃದ್ಧಿಯ ಸವಾಲುಗಳೊಂದಿಗೆ ಬೆಸೆಯಲಿವೆ.
107 ಸಂಶೋಧನಾ ಪ್ರಬಂಧಗಳ ಸ್ವೀಕಾರ
ವಿಚಾರ ಸಂಕಿರಣಕ್ಕೆ 107 ಸಂಶೋಧನಾ ಪ್ರಬಂಧಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 81 ಪ್ರಬಂಧಗಳನ್ನು ಮಂಡನೆ ಹಾಗೂ ಪ್ರಕಟಣೆಗಾಗಿ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳ 30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನೂ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿ ಪ್ರಬಂಧಗಳಲ್ಲಿ ಅತ್ಯುತ್ತಮ ಪ್ರಬಂಧಕ್ಕೆ ₹5,000 ಹಾಗೂ ದ್ವಿತೀಯ ಅತ್ಯುತ್ತಮ ಪ್ರಬಂಧಕ್ಕೆ ₹2,000 ನಗದು ಬಹುಮಾನ ನೀಡಲಾಗುವುದು. ವಿಚಾರ ಸಂಕಿರಣದಲ್ಲಿ 400ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ಸಂಜೆ ಸಮಾರೋಪ ಸಮಾರಂಭ
ಅದೇ ದಿನ ಸಂಜೆ 4 ಗಂಟೆಗೆ ಜಿ.ಎಸ್.ಎಸ್. ಉತ್ಸವ ಸಭಾಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಗೋವಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಡಿ. ಐಹೊಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವೆಂಕಟೇಶ ಮುತಾಲಿಕ, ಐಟಿಐ ಕಾಲೇಜ ಪ್ರಾಚಾರ್ಯ ಮಹಾವೀರ ಉಪಾಧ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶೌಕತ್ ಅಲಿ ಮೇಗಲಮನಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಕಾಂತ ರಾಗಿಕಲ್ಲಾಪುರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.

