ಮಿಂಚಿದ ನಿತೀಷ್, ಸಂಜು;ಭಾರತಕ್ಕೆ ಸರಣಿ ಗೆಲುವು

ಹಂಚಿಕೊಳ್ಳಿ

ನವದೆಹಲಿ: ಮೊದಲು`ಪಂದ್ಯದ ಆಟಗಾರ’ ನಿತೀಷ್ ಕುಮಾರ ರೆಡ್ಡಿ ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ನಂತರ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸಮಯೋಚಿತ ಅರ್ಧ ಶತಕದ ನೆರವಿನಿಂದ ಭಾರತ ಮಂಗಳವಾರ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎದುರು ೭ ವಿಕೆಟ್‌ಗಳ ಭರ್ಜರಿ ಜಯ ಸಂಪಾದಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಗೆಲುವಿನ ಮುನ್ನಡೆ ಸಾಧಿಸಿತು.

ನಗರದ ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ಗೆಲ್ಲಲು ೧೬೦ ರನ್ ಗಳಿಸಬೇಕಿದ್ದ ಭಾರತ ಸಂಜು ಸ್ಯಾಮ್ಸನ್(೫೭, ೨೨ ಎಸೆತ, ೭ ಬೌಂಡರಿ, ೪ ಸಿಕ್ಸರ್) ಅವರ ಅಬ್ಬರದ ಅರ್ಧ ಶತಕ ಹಾಗೂ ಅಭಿಷೇಕ ಶರ್ಮಾ(೩೯) ಮತ್ತು ಇಶಾನ್ ಕಿಶನ್ ಔಟಾಗದೇ(೩೮) ಉಪಯುಕ್ತ ಸರದಿಗಳ ನೆರವಿನಿಂದ ಇನ್ನೂ ೫.೧ ಓವರ್‌ಗಳು ಬಾಕಿಯಿರುವಾಗಲೇ ಗೆಲುವಿನ ಕೇಕೆ ಹಾಕಿತು. ಬಿದ್ದ ಮೂರು ವಿಕೆಟ್‌ಗಳನ್ನು ರಷೀದ್ ಖಾನ(೩/೩೬) ಪಡೆದುಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ ನಿತೀಷ್ ಕುಮಾರ ರೆಡ್ಡಿ(೩/೨೪) ಹಾಗೂ ಅರ್ಷದೀಪ್ ಸಿಂಗ್(೨/೩೫) ಮಾರಕ ದಾಳಿಯೆದುರು ನಲುಗಿ ಇಬ್ರಾಹಿಮ್ ಜದ್ರಾನ್(೩೭), ರಷೀದ್ ಖಾನ(೨೮) ಮತ್ತು ದಾರ್ವಿಷ್ ರಸೂಲಿ(೨೬) ಪ್ರಯತ್ನಗಳ ಹೊರತಾಗಿಯೂ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗಳಿಗೆ ೧೫೯ ರನ್ ಪೇರಿಸುವಲ್ಲಿ ಮಾತ್ರ ಸಫಲವಾಯಿತು.
ಎರಡೂ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಪಂದ್ಯ ದಿನಾಂಕ ೧೭ರಂದು ನವದೆಹಲಿಯಲ್ಲಿಯೇ ನಡೆಯಲಿದೆ.

ಸಂಕ್ಷಿಪ್ತ ಸ್ಕೋರುಗಳು:
ಅಫ್ಘಾನಿಸ್ತಾನ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗಳಿಗೆ ೧೫೯(ಇಬ್ರಾಹಿಮ್ ಜದ್ರಾನ್ ೩೭, ರಷೀದ್ ಖಾನ ೨೮, ದಾರ್ವಿಷ್ ರಸೂಲಿ ೨೬, ಮೊಹಮ್ಮದ್ ನಬಿ ೨೦, ನಿತೀಷ್ ಕುಮಾರ ರೆಡ್ಡಿ ೩/೨೪, ಅರ್ಷದೀಪ್ ಸಿಂಗ್ ೨/೩೫), ಭಾರತ: ೧೪.೫ ಓವರ್‌ಗಳಲ್ಲಿ ೩ ವಿಕೆಟ್‌ಗಳಿಗೆ ೧೬೩(ಸಂಜು ಸ್ಯಾಮ್ಸನ್ ೫೭, ಅಭಿಷೇಕ ಶರ್ಮಾ ೩೯, ಇಶಾನ್ ಕಿಶನ್ ಔಟಾಗದೇ ೩೮,  ರಷೀದ್ ಖಾನ ೩/೩೬). ಫಲಿತಾಂಶ: ಭಾರತಕ್ಕೆ ೭ ವಿಕೆಟ್‌ಗಳ ಗೆಲುವು. ಪಂದ್ಯದ ಆಟಗಾರ: ನಿತೀಷ್ ಕುಮಾರ ರೆಡ್ಡಿ(ಭಾರತ).


ಹಂಚಿಕೊಳ್ಳಿ

Leave a Reply

Your email address will not be published. Required fields are marked *