ಸವಾಲೇ ಆಗದ ಜಪಾನ್, ಭಾರತ ಸೆಮಿಫೈನಲ್‌ಗೆ

ಹಂಚಿಕೊಳ್ಳಿ

ನಾಗೋಯಾ: ದುಬೈನಲ್ಲಿ ಇತ್ತೀಚೆಗಷ್ಟೇ ಏಷ್ಯಾ ಕಪ್ ಟಿ೨೦ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಆತಿಥೇಯ ಜಪಾನ ಸವಾಲಾಗಲೇ ಇಲ್ಲ.

ಕೇವಲ ಎಂಟು ತಂಡಗಳೂ ಮಾತ್ರ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ನೇರವಾಗಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನಿನ ಎದುರು ಇನ್ನೂ ೧೫ ಓವರ್‌ಗಳ ಆಟ ಬಾಕಿಯಿರುವಂತೆಯೇ ೮ ವಿಕೆಟ್‌ಗಳಿಂದ ಗೆದ್ದು ಬೀಗಿದ ಹರ್ಮನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಗೆಲ್ಲಲು ಕೇವಲ ೫೮ ರನ್ ಗಳಿಸಬೇಕಿದ್ದ ಭಾರತ ೫ ಓವರ್‌ಗಳು ಮುಗಿಯುತ್ತಿದ್ದಂತೆಯೇ ಗೆಲುವಿನ ಕೇಕೆ ಹಾಕಿತು. ಶಿಮಾಕೋ ಕಾಟೋ ಅವರ ಓವರ್‌ನ ಕೊನೆಯ ಎಸೆತವನ್ನು ಲಾಂಗ್ ಆನ್ ಮೇಲಿಂದ ಸಿಕ್ಸರ್‌ಗೆ ಎತ್ತಿದ ಶಫಾಲಿ ವರ್ಮಾ(ಔಟಾಗದೇ ೪೦, ೧೫ ಎಸೆತ, ೬ ಬೌಂಡರಿ, ೨ ಸಿಕ್ಸರ್) ತಂಡದ ಗೆಲುವನ್ನು ಘೋಷಿಸಿದರು.

ಸ್ಮೃತಿ ಮಂಧಾನ ಬದಲು ಆಡಲು ಅವಕಾಶ ದೊರಕಿಸಿಕೊಂಡ ಗುಣಾಲನ್ ಕಮಲಿನಿ(೦) ಹಾಗೂ ಭಾರತಿ ಫುಲ್ಮಾಲಿ(೬) ತಮಗೆ ದೊರೆತಿದ್ದ ಅವಕಾಶವನ್ನು ಕೈ ಚೆಲ್ಲಿದರೆ, ಬಿರುಸಿನ ಹೊಡೆತಗಳ ರಿಚಾ ಘೋಷ್(ಔಟಾಗದೇ ೧೨, ೬ ಎಸೆತ, ೨ ಬೌಂಡರಿ) ತಂಡ ಗೆದ್ದಾಗ ಶಫಾಲಿ ಜೊತೆಗಿದ್ದರು. ಬಿದ್ದ ಎರಡು ವಿಕೆಟ್‌ಗಳನ್ನು ನೊನೊಹಾ ಯಾಸುಮೊಟೊ(೧/೮) ಹಾಗೂ ಆಯಾಕಾ ಕಾಟೋ ಸ್ಟಾಫೋರ್ಡ್(೧/೧೪) ಪಡೆದುಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅನನುಭವಿ ಜಪಾನಿ ಬ್ಯಾಟರ್‌ಗಳು ಎಡಗೈ ಸ್ಪಿನ್ನರ್ ಶ್ರೀ ಚರಣಿ(೧೦ ರನ್‌ಗಳಿಗೆ ೪ ವಿಕೆಟ್), ಆಫ್ ಸ್ಪಿನ್ನರ್ ಶಫಾಲಿ ವರ್ಮಾ(೧೩ಕ್ಕೆ ೨ ವಿಕೆಟ್), ಕನ್ನಡತಿ ಶ್ರೇಯಾಂಕಾ ಪಾಟೀಲ(೧/೯) ಹಾಗೂ ದೀಪ್ತಿ ಶರ್ಮಾ(೧/೧೪) ಎದುರು ಪರದಾಡಿ ೧೯.೫ ಓವರ್‌ಗಳಲ್ಲಿ ಕೇವಲ ೫೭ಕ್ಕೆ ಸರ್ವಪತನ ಕಂಡರು. ಜಪಾನ್ ಪರ ಸರದಿಯನ್ನಾರಂಭಿಸಿ ಮೊದಲ ವಿಕೆಟ್‌ಗೆ ೬.೨ ಓವರ್‌ಗಳಲ್ಲಿ ೨೪ ರನ್ ಕಲೆ ಹಾಕಿದ ಆಯಾಕಾ ಕಾಟೋ ಸ್ಟಾಫೋರ್ಡ್(೨೫) ಹಾಗೂ ಹಾರುನಾ ಇವಾಸಾಕಿ(೧೦) ಮಾತ್ರ ಎರಡಂಕಿ ಪ್ರವೇಶಿಸಿದರು.

ಭಾರತವೀಗ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾಗಳು ಇನ್ನೊಂದು ಸೆಮೀಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಸಂಕ್ಷಿಪ್ತ ಸ್ಕೋರುಗಳು:
ಜಪಾನ ೧೯.೫ ಓವರ್‌ಗಳಲ್ಲಿ ೫೭(ಆಯಾಕಾ ಕಾಟೋ ಸ್ಟಾಫೋರ್ಡ್ ೨೫, ಹಾರುನಾ ಇವಾಸಾಕಿ ೧೦, ಶ್ರೀ ಚರಣಿ ೪/೧೦, ಶಫಾಲಿ ವರ್ಮಾ ೨/೧೩, ಶ್ರೇಯಾಂಕಾ ಪಾಟೀಲ ೧/೯, ದೀಪ್ತಿ ಶರ್ಮಾ ೧/೧೪), ಭಾರತ: ೫ ಓವರ್‌ಗಳಲ್ಲಿ ೨ ವಿಕೆಟ್‌ಗಳಿಗೆ ೫೯(ಶಫಾಲಿ ವರ್ಮಾ ಔಟಾಗದೇ ೪೦, ರಿಚಾ ಘೋಷ್ ಔಟಾಗದೇ ೧೨, ನೊನೊಹಾ ಯಾಸುಮೊಟೊ   ೧/೮, ಆಯಾಕಾ ಕಾಟೋ ಸ್ಟಾಫೋರ್ಡ್ ೧/೧೪). ಫಲಿತಾಂಶ: ಭಾರತಕ್ಕೆ ೮ ವಿಕೆಟ್‌ಗಳ ಗೆಲುವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *