ಏಷ್ಯನ್ ಗೇಮ್ಸ್: ಯಶ್‌ವೀರ್, ರೋಹಿತ್ಯಾದವ್‌ರಿಂದ ಪೋಡಿಯಂ ಫಿನಿಷ್’

ಹಂಚಿಕೊಳ್ಳಿ

ನಾಗೋಯಾ
ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಸೋಮವಾರ ಭಾರತಕ್ಕೊಂದು ಸ್ಮರಣಿಯ ದಿನ.

ಇಲ್ಲಿಯ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ ದೊರಕಿಸಿಕೊಟ್ಟ ನೀರಜ್ ಛೋಪ್ರಾ ಅವರ ಅನುಪಸ್ಥಿತಿಯಲ್ಲೂ ಭಾರತದ ಇಬ್ಬರಿಗೆ ಪೋಡಿಯಂ ಫಿನಿಷ್’ನ ಭಾಗ್ಯ ಲಭಿಸಿತು.

ಯಶ್‌ವೀರ್ ಸಿಂಗ್ ಭರ್ಚಿಯನ್ನು ೮೫.೭೨ ಮೀಟರ್ ದೂರ ಎಸೆದು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರೆ, ಭಾರತದವರೇ ಆದ ರೋಹಿತ್ ಯಾದವ ೮೪.೩೫ ಮೀಟರ್‌ಗಳ ಸಾಧನೆಯೊಂದಿಗೆ ಕಂಚಿನ ಪದಕದ ವಾರಸುದಾರರಾದರು.

ಸದ್ಯ ವಿಶ್ವದ ನಂ.೧ ಎಸೆತಗಾರ ಶ್ರೀಲಂಕಾದ ರುಮೇಶ್ ತರಂಗ ಪತಿರಗೆ ೮೮.೫೫ ಮೀಟರ್ ದೂರ ದಾಖಲಿಸಿ ಚಿನ್ನ ಬಾಚಿಕೊಂಡರೆ, ಹಾಲಿ ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ೮೦.೨೯ ಮೀಟರ್ ದೂರ ಎಸೆಯುವಲ್ಲಿ ಮಾತ್ರ ಸಫಲರಾಗಿ ನಾಲ್ಕನೇ ಸ್ಥಾನಕ್ಕಿಳಿದು `ಪೋಡಿಯಂ’ನಿಂದ ಹೊರಗುಳಿದರು.

ಈ ಫಲಿತಾಂಶದೊಂದಿಗೆ ಸತತ ಎರಡನೇ ಬಾರಿ ಏಷ್ಯನ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಂತಾಗಿದೆ. ೨೦೨೩ರಲ್ಲಿ ಹ್ಯಾಂಗ್‌ಝೌನಲ್ಲೂ ನೀರಜ್ ಛೋಪ್ರಾ ಭರ್ಚಿಯನ್ನು ೮೮.೮೮ ಮೀಟರ್ ದೂರ ಎಸೆದು ಸ್ವರ್ಣ ಪದಕ ಗೆದ್ದಿದ್ದರೆ, ಕಿಶೋರ್ ಜೇನಾ ೮೭.೬೪ ಮೀಟರ್ ಸಾಧನೆಯೊಂದಿಗೆ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

೨೦೧೮ರಲ್ಲಿ ಜಕಾರ್ತಾದಲ್ಲೂ ಬಂಗಾರದ ಪದಕ ಗೆದ್ದಿದ್ದ ನೀರಜ್ ಛೋಪ್ರಾ, ದೋಹಾ ಡೈಮಂಡ್ ಲೀಗ್‌ನ ನಂತರ ಗಾಯದಿಂದಾಗಿ ಈ ಋತುವಿನ ಉಳಿದ ಭಾಗ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ನಾಗೋಯಾದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *