ರಾಯಪುರ
ಅನುಭವಿ ದೀಪ್ತಿ ಶರ್ಮಾ ಹಾಗೂ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದ ಕನ್ನಡತಿ ನಿಕಿ ಪ್ರಸಾದ ಅವರ ನಡುವಿನ ಸಮಯೋಚಿತ ಜೊತೆಯಾಟದ ನೆರವಿನಿಂದ ಭಾರತ ಶುಕ್ರವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿತು.
ಶಹೀದ ವೀರ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ ೧೧೫ ರನ್ ಮಾತ್ರ ಗಳಿಸಬೇಕಿದ್ದ ಭಾರತಕ್ಕೆ ಬ್ಯಾಟಿಂಗ್ ಆರಂಭಿಸಿದಾಗ ಆಘಾತ ಕಾದಿತ್ತು. ನಿಯಾಶಾ ಗ್ವಾಂಜುರಾ(೩/೧೮) ಮಾರಕ ದಾಳಿಯ ಎದುರು ೩.೧ ಓವರ್‌ಗಳಲ್ಲಿ ಮೊತ್ತ ಕೇವಲ ೧೯ ತಲುಪುವಷ್ಟರಲ್ಲಿ ಹೊಸ ನಾಯಕಿ ಸ್ಮೃತಿ ಮಂಧಾನ(೯), ಹಿಂದಿನ ನಾಯಕಿ ಹರ್ಮನ್‌ಪ್ರೀತ್ ಕೌರ್(೧), ಶಫಾಲಿ ವರ್ಮಾ(೪) ಹಾಗೂ ಅನುಷ್ಕಾ ಶರ್ಮಾ(೪) ವಿಕೆಟ್ ಚೆಲ್ಲಿ ಪೆವಿಲಿಯನ್ನಿಗೆ ಮರಳಿದರು. ಆಗ ಜೊತೆಗೂಡಿದವರು ದೀಪ್ತಿ ಶರ್ಮಾ ಹಾಗೂ ಕನ್ನಡತಿ ನಿಕಿ ಪ್ರಸಾದ.
ಪಂದ್ಯದ ಆಟಗಾರ್ತಿ’ ಪ್ರಶಸ್ತಿಯ ವಾರಸುದಾರ್ತಿಯಾದ ದೀಪ್ತಿ ಶರ್ಮಾ ೩೭ ಎಸೆತಗಳಲ್ಲಿ ೮ ಬೌಂಡರಿಗಳಿದ್ದ ೪೯ ರನ್ ಸಿಡಿಸಿದರೆ, ೧೯ ವರ್ಷದವರೊಳಗಿನ ವಿಶ್ವ ಕಪ್ ವಿಜೇತ ತಂಡದ ನಾಯಕಿಯಾಗಿದ್ದ ನಿಕಿ ಪ್ರಸಾದ ೩೫ ಎಸೆತಗಳಲ್ಲಿ ೬ ಬೌಂಡರಿಗಳಿದ್ದ ಅಜೇಯ ೩೯ ರನ್‌ಗಳ ಕಾಣಿಕೆಯಿತ್ತು ತಂಡದ ಗೆಲುವಿನ ರೂವಾರಿಗಳೆನಿಸಿದರು. ಹಾಗೆ ನೋಡಿದರೆ ಇವರಿಬ್ಬರ ನಡುವಿನ ೬೩ ಎಸೆತಗಳ ೮೨ ರನ್ ಪಾಲುಗಾರಿಕೆ ಅಂತಾರಾಷ್ಟಿçÃಯ ಪಂದ್ಯಗಳಲ್ಲಿ ಭಾರತಕ್ಕೊಂದು ಹೊಸ ದಾಖಲೆ.

೧೫.೪ ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪುವ ಮೊದಲು ಭಾರತ ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್(೭) ವಿಕೆಟ್‌ಗಳನ್ನು ಸಹ ಕಳೆದುಕೊಂಡಿತಾದರೂ ನಿಕಿ ದಾಳಿಗೆ ಮರಳಿದ ಮಾಕುಶಾ ಅವರನ್ನು ಲಾಂಗ್ ಆಫ್ ಬೌಂಡರಿಗೆ ಅಟ್ಟಿ ಸ್ಮೃತಿ ಮಂಧಾನ ಪಡೆಯ ಗೆಲುವನ್ನು ಘೋಷಿಸಿದರು.
ಪರದಾಡಿದ ಜಿಂಬಾಬ್ವೆ
ಇದಕ್ಕೂ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಜಿಂಬಾಬ್ವೆ ಭಾರತದ ಪರಿಣಾಮಕಾರಿ ದಾಳಿಯೆದುರು ಪರದಾಡಿ ೨೦ ಓವರ್‌ಗಳಲ್ಲಿ ೧೧೪ರ ಮೊತ್ತ ದಾಖಲಿಸುವಲ್ಲಿ ಮಾತ್ರ ಯಶ ಕಂಡಿತು.
ಶಾರ್ನ ಮೇಯರ್ಸ್ ೩೩ ಎಸೆತಗಳಲ್ಲಿ ೪ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ೪೩ ರನ್ ಸಿಡಿಸಿದರೆ, ಕೆಲಿಸ್ ನಡ್ಲೋವು ೪೪ ಎಸೆತಗಳಲ್ಲಿ ೬ ಬೌಂಡರಿಗಳಿದ್ದ ೪೨ ರನ್‌ಗಳ ಕಾಣಿಕೆಯಿತ್ತರು. ವಿಕೆಟ್ ಕೀಪರ್ ಎಂ. ಮಪಚಿಕ್ವಾ(೧೬, ೨೬ ಎಸೆತ, ೧ ಬೌಂಡರಿ) ಪ್ರವಾಸಿ ತಂಡದ ಪರ ಎರಡಂಕಿ ತಲುಪಿದ ಕೇವಲ ಮೂರನೇ ಬ್ಯಾಟರ್.
ಭಾರತದ ಪರ ನಂದನಿ ಶರ್ಮಾ(೨/೧೧) ಅತ್ಯಂತ ಯಶಸ್ವಿ ಬೌಲರ್ ಎನಿಸಿದರೆ, ಎಡಗೈ ಸ್ಪಿನ್ನರ್ ಶ್ರೀಚರಣಿ(೧/೧೪), ವೇಗಿ ಕ್ರಾಂತಿ ಗೌಡ(೧/೧೬) ಹಾಗೂ ಅರುಂಧತಿ ರೆಡ್ಡಿ(೧/೩೦) ತಲಾ ಒಂದೊAದು ಯಶ ಕಂಡರು.

