ಜಮಖಂಡಿ
ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸತ್ಯ ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯ. ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು ಆಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಆರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವ ಪರಿಪೂರ್ಣದೆಡೆಗೆ ಸಾಗುವುದೇ ನಿಜವಾದ ಧರ್ಮ. ಸತ್ಯ ಪ್ರಾಮಾಣಿಕತೆಗಿಂತ ಹೆಚ್ಚು ಉದಾತ್ತವಾದ ಧರ್ಮ ಇನ್ನೊಂದಿಲ್ಲ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾ ಕವಚ ಕಳಚಿದರೆ ಧರ್ಮ ಸಂಸ್ಕೃತಿ ಮತ್ತು ಪರಂಪರೆ ಒಂದು ಉಳಿಯಲಾರವು. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಧರ್ಮದ ಮೂಲ ಗುರಿಯಾಗಿದೆ ಎಂದರು.
ಮನುಷ್ಯನಲ್ಲಿರುವ ಅಸುರಿ ಗುಣಗಳು ನಾಶವಾಗಿ ದೈವೀ ಗುಣಗಳು ಬೆಳೆದುಕೊಂಡು ಬರಬೇಕಾಗಿದೆ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ಮನುಷ್ಯ ಜೀವನವನ್ನು ಶುದ್ಧ ಸುಂದರಗೊಳಿಸುವುದೇ ಧರ್ಮದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ ದಯಾ ಕ್ಷಮಾ ದಾನ ಪೂಜಾ ಜಪ ಮತ್ತು ಧ್ಯಾನ ಎಂಬ ದಶವಿಧ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ದರಿಸಿದ್ದಾರೆ. ಯಾವಾಗಲೂ ನಾಶವಾಗದೆ ಇರುವುದು ಧರ್ಮ. ಅದನ್ನು ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇರುವುದಿಲ್ಲ. ಧರ್ಮ ನಾಶ ಮಾಡಲು ಬಂದವನೇ ಧರ್ಮದಿಂದ ನಾಶವಾಗುತ್ತಾನೆ. ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಮುಖ್ಯವೆಂಬುದನ್ನು ಯಾರೂ ಮರೆಯಬಾರದು ಎಂದರು.
ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯಿಂದ ಪ್ರಕಟಗೊಂಡ 2027ನೇ ಇಸ್ವಿ ದಿನದರ್ಶಿಕೆಯನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಬಿಡುಗಡೆ ಮಾಡಿ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆಚಾರ ವಿಚಾರ ಧರ್ಮ ಸಂಸ್ಕೃತಿ ದೇವರು ಆಧ್ಯಾತ್ಮ ನೀತಿಬೋಧೆ ತತ್ವದರ್ಶನ ವೈಚಾರಿಕ ವೈಜ್ಞಾನಿಕ ಚಿಂತನೆಗಳ ಅರಿವು ಅಗತ್ಯ. ತನಗಾಗಿ ಬಯಸುವುದು ಜೀವಗುಣ ಎಲ್ಲರಿಗೂ ಬಯಸುವುದು ದೇವಗುಣ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಅವಶ್ಯಕ. ಸಂತೃಪ್ತಿ ಸಮೃದ್ಧಿಗಾಗಿ ಆದರ್ಶ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವೀರಶೈವ ಧರ್ಮ ವಿಶ್ವ ಬಂಧುತ್ವ ಹೊಂದಿ ಸಕಲರ ಹಿತವನ್ನು ಕಾಪಾಡಿದೆ. ಜಮಖಂಡಿ ನಗರದಲ್ಲಿ ಜರುಗುತ್ತಿರುವ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಷ್ಟಿ ಪ್ರಜ್ಞೆಯನ್ನು ಹೊಂದಿ ಸಮಾಜದಲ್ಲಿ ಶಾಂತಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ಅದ್ಭುತ ಸಮಾರಂಭ ಇದಾಗಿದೆ. ಸಮಸ್ತ ಜನತೆಗೆ ಆದಿಶಕ್ತಿ ಜಗನ್ಮಾತೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಎಲ್ಲರ ಮೇಲು ಇರಲೆಂದು ಬಯಸಿದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧಾರ್ಮಿಕ ಆದರ್ಶ ಮೌಲ್ಯಗಳು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜವನ್ನು ಸುಂದರ ಮತ್ತು ಶಾಂತಿಯುತವಾಗಿಸುತ್ತವೆ. ಧರ್ಮದ ನಿಜವಾದ ಉದ್ದೇಶ ಮನುಷ್ಯನನ್ನು ಮಾನವನನ್ನಾಗಿ ಪರಿವರ್ತಿಸುವುದು ಮತ್ತು ಸಕಲ ಜೀವಿಗಳ ಉದ್ಧಾರಕ್ಕಾಗಿ ಶ್ರಮಿಸುವುದಾಗಿದೆ. ಧಾರ್ಮಿಕ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಸಾಮರಸ್ಯ ಸಹಬಾಳ್ವೆ ಮತ್ತು ಪರಸ್ಪರ ಗೌರವ ಬೆಳೆಸುವುದಾಗಿದೆ. ಧರ್ಮವು ಕೇವಲ ಪೂಜೆ ಆಚರಣೆ ಮತ್ತು ಸಂಪ್ರದಾಯಗಳಿಗೆ ಸೀಮಿತವಾಗಿರದೆ ಮಾನವೀಯತೆ ಪ್ರೀತಿ ಕರುಣೆ ಅಹಿಂಸೆ ಸಮಾನತೆ ಮತ್ತು ಸೇವಾ ಮನೋಭಾವ ಬೆಳೆಸುವ ಜೀವನ ಮಾರ್ಗವಾಗಿದೆ ಎಂದರು.
ನೇತೃತ್ವ ವಹಿಸಿದ ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಅಮೂಲ್ಯ ಸಂಪತ್ತು. ದೇವರು ಎಲ್ಲರಲ್ಲಿ ಇರುವನು. ಆದರೆ ಎಲ್ಲರೂ ದೇವರಲ್ಲಿಲ್ಲ. ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಕಾರಣ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ಈ ಜಗದ್ಗುರು ರೇಣುಕಾಚಾರ್ಯರು ಕಾಯಕವೇ ಕಳಾಚೈತನ್ಯವೆಂದೂ ಶರಣರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಸತ್ಯ ನುಡಿಯುವ ಪ್ರಾಮಾಣಿಕತೆಯಿಂದ ಬಾಳುವ ಆದರ್ಶ ಗುಣಗಳು ಬೆಳೆದುಕೊಂಡು ಬರಬೇಕಾಗಿದೆ. ಬಡವರು ದುರ್ಬಲರು ಅಸಹಾಯಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯ ಧರ್ಮವಾಗಿದೆ. ನ್ಯಾಯದ ಪರವಾಗಿ ನಿಲ್ಲುವುದು ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು ಮತ್ತು ಅನ್ಯಾಯವನ್ನು ವಿರೋಧಿಸುವುದು ಧಾರ್ಮಿಕ ಆದರ್ಶಗಳಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಯಜ್ಞ ಸಕಲರನ್ನು ಸನ್ಮಾರ್ಗಗಳಿಗೆ ಕರೆದೊಯ್ಯುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.
ಜಮಖಂಡಿ ಮುತ್ತಿಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು.
ಗುರುರಕ್ಷೆ:
ಮರೇಗುದ್ದಿ ಪ್ರಭು ತೋಂಟದಾರ್ಯ ಸ್ವಾಮಿಗಳು, ಹರ್ಷಾನಂದ ಸ್ವಾಮಿಗಳು ಗುರುದೇವ ಆಶ್ರಮ ಹುಲ್ಯಾಳ, ಗುರುಪ್ರಸಾದ ಸ್ವಾಮಿಗಳು ಶಿವಾನಂದಮಠ ಮೈಗೂರ, ಶ್ರೀದೇವಿ ಅಮ್ಮನವರು ಓಂಕಾರ ಆಶ್ರಮ ಹುಲ್ಯಾಳ, ಬಸವಲಿಂಗ ದೇವರು ಕಲ್ಮಠ ಬಿದರಿ, ಜಮಖಂಡಿಯ ಶ್ರೀಮತಿ ಶಾರದಾ ಮುಳ್ಳೂರ, ಮಹೇಶ ನಾ. ಕಲಕತ್ತಿಮಠ, ಬಸಲಿಂಗಯ್ಯ ಕಲ್ಯಾಣಿ ಹಲಗಲಿ, ಸುರೇಶಗೌಡ ಪಾಟೀಲ ತುಬಚಿ, ಮಹಾದೇವ. ಬಿ. ನ್ಯಾಮಗೌಡ ಕುಂಚನೂರ, ರಾಜುಗೌಡ ಪಾಟೀಲ ಕಲಬೀಳಗಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಮಲ್ಲಿಕಾರ್ಜುನ ಇಂಡಿ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತಕ್ಕೆ ರಮೇಶ ಗಂಜಾಳ ತಬಲಾ ಸಾಥ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.

