ಮಲಪಾಡು(ವಿಜಯವಾಡ)
ಕರ್ನಾಟಕದ ಅಗ್ರ ಪಂಕ್ತಿಯ ಬ್ಯಾಟಿಂಗ್ನಲ್ಲಿ ಮತ್ತೆ ಕುಸಿತ ಕಂಡಿದ್ದು, ಕಳೆದ ರಣಜಿ ಋತುವಿನಲ್ಲಿ ರನ್ನರ್-ಅಪ್ ಸ್ಥಾನದೊಂದಿಗೆ ಬೀಗಿದ್ದ ರಾಜ್ಯ ತಂಡ ಹೊಸ ಋತುವಿನ ಮೊದಲ ಪಂದ್ಯದಲ್ಲೇ ಸೋಲಿನ ಆತಂಕದಲ್ಲಿದೆ.
ಆಂಧ್ರದ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ನಾಲ್ಕು ದಿನಗಳ ಪಂದ್ಯದ ಮೂರನೇ ದಿನದ ಕೊನೆಗೆ ತನ್ನ ಎರಡನೇ ಸರದಿಯ ಆರು ವಿಕೆಟ್ಗಳನ್ನು ಉಳಿಸಿಕೊಂಡಿರುವ ಕರ್ನಾಟಕ ಬುಧವಾರದ ಇಡೀ ದಿನದಾಟ ಬಾಕಿಯಿರುವಂತೆ ಕೇವಲ ೩೨ ರನ್ಗಳಿಂದ ಮಾತ್ರ ಮುಂದಿದೆ.
೧೪೪ ರನ್ ಲೀಡ್:
ಮಂಗಳವಾರ ಮುಂಜಾನೆ ೬ ವಿಕೆಟ್ಗಳಿಗೆ ೩೩೧ರ ಸ್ಕೋರಿನಿಂದ ತನ್ನ ಪ್ರಥಮ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಆತಿಥೇಯರು ಆಂಧ್ರ ಉಳಿದ ನಾಲ್ಕು ವಿಕೆಟ್ಗಳ ನೆರವಿನಿಂದ ಮತ್ತೆ ೮೭ ರನ್ ಕೂಡಿಸಿ ೪೧೮ಕ್ಕೆ ಆಲೌಟಾದರು. ಸಮಯೋಚಿತ ಸೆಂಚುರಿ ನೆರವಿನಿಂದ ತಂಡಕ್ಕೆ ಮುನ್ನಡೆ ತಂದಿತ್ತ ಶ್ರೀರಾಮ ವೆಂಕಟ ರಾಹುಲ್(೧೧೯, ೨೨೨ ಎಸೆತ, ೧೦ ಬೌಂಡರಿ) ಏಳನೇಯವರಾಗಿ ರಿತೇಶ್ ಭಟ್ಕಳ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದ ಬ್ಯಾಟರ್ಗಳಾದ ವೆಂಕಟ ಶಶಿಕಾಂತ(೩೯, ೧೦೪ ಎಸೆತ, ೪ ಬೌಂಡರಿ, ೧ ಸಿಕ್ಸರ್) ಹಾಗೂ ಸೌರಭ ಕುಮಾರ(೨೪, ೨೫ ಎಸೆತ, ೩ ಬೌಂಡರಿ, ೧ ಸಿಕ್ಸರ್) ಮಹತ್ವದ ಕಾಣಿಕೆ ನೀಡಿ ತಂಡದ ಮುನ್ನಡೆಯನ್ನು ೧೪೪ಕ್ಕೇರಿಸಲು ನೆರವಾದರು.
ಎಡಗೈ ಸ್ಪಿನ್ನರ್ ಶಿಖರ ಶೆಟ್ಟಿ ೧೧೫ ರನ್ಗಳನ್ನಿತ್ತು ಆರು ವಿಕೆಟ್ ಗಳಿಸಿಕೊಂಡು ಕರ್ನಾಟಕದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರೆ, ಇದೇ ಮೊದಲ ರಣಜಿ ಪಂದ್ಯವನ್ನಾಡಿದ ಮಾಧವ ಬಜಾಜ(೨/೯೪) ಹಾಗೂ ಕಾರವಾರದ ಹುಡುಗ’ ರಿತೇಶ ಭಟ್ಕಳ(೨/೧೦೯) ತಲಾ ಎರಡೆರಡು ಯಶ ಕಂಡರು.
ಮತ್ತೆ ಪ್ರಾರಂಭದ ಕುಸಿತ:
ದ್ವಿತೀಯ ಇನ್ನಿಂಗ್ಸ್ನಲ್ಲುಇ ಕರ್ನಾಟಕ ಆರಂಭದ ಕುಸಿತ ಕಂಡಿತು. ಕೆ.ಎಲ್. ರಾಹುಲ್(೧), ಮಯಾಂಕ ಅಗರ್ವಾಲ್(೧೮) ಹಾಗೂ ಕೆ.ವಿ. ಅನೀಶ್ ಬೇಗನೇ ಪೆವಿಲಿಯನ್ನಿಗೆ ವಾಪಸಾದಾಗ ಕರ್ನಾಟಕದ ಸ್ಥಿತಿ ಶೋಚನೀಯವಾಗಿತ್ತು. ಆದರೆ ಮೂರನೇ ಸ್ಥಾನಕ್ಕೆಬಡ್ತಿ’ ಪಡೆದು ಬಂದ ಮನ್ವಂತಕುಮಾರ(೪೪, ೧೧೦ ಎಸೆತ, ೧ ಬೌಂಡರಿ, ೨ ಸಿಕ್ಸರ್) ಹಾಗೂ ಆಪತ್ಬಾಂಧವ’ ಕರುಣ ನಾಯರ್(ಬ್ಯಾಟಿಂಗ್ ೮೧, ೧೩೦ ಎಸೆತ, ೮ ಬೌಂಡರಿ, ೨ ಸಿಕ್ಸರ್) ನಾಲ್ಕನೇ ವಿಕೆಟ್ ಜೊತೆಯಾದಲ್ಲಿ ೧೮೬ ಎಸೆತಗಳಲ್ಲಿ ೯೪ ಅತ್ಯುಪಯುಕ್ತ ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ದಿನದಾಟದ ಮುಕ್ತಾಯಕ್ಕೆ ಸ್ವಲ್ಪ ಮೊದಲು ಮನ್ವಂತ್ಕುಮಾರ ಔಟಾದ ನಂತರ ಬಂದ ಮೊದಲ ಸರದಿಶತಕ ವೀರ’ ನಾಯಕ ಸ್ಮರಣ್ ರವಿಚಂದ್ರನ್(ಬ್ಯಾಟಿಂಗ್ ೨೧, ೪೩ ಎಸೆತ, ೧ ಬೌಂಡರಿ) ಕರುಣ್ ನಾಯರ್ ಜೊತೆ ಮುರಿಯದ ಐದನೇ ವಿಕೆಟ್ಗೆ ೭೦ ಎಸೆತಗಳಲ್ಲಿ ೩೯ ರನ್ ಕೂಡಿ ಹಾಕಿದ್ದು ಕೊನೆಯ ದಿನದಂದು ಕರ್ನಾಟಕದ ಹೋರಾಟ ಮುಂದುವರಿಸಲಿದ್ದಾರೆ.
ಬುಧವಾರ ಪಂದ್ಯದ ಮೊದಲಿನೆರಡು ತಾಸುಗಳ ಆಟ ಅತ್ಯಂತ ಮಹತ್ವದ್ದಾಗಿದ್ದು, ಸ್ಪಿನ್ನರ್ಗಳಿಗೆ ನೆರವಿ ನೀಡುತ್ತಿರುವ ಪಿಚ್ ಮೇಲೆ ಕರ್ನಾಟಕದ ವಿಕೆಟ್ಗಳನ್ನು ಬೇಗನೇ ಎತ್ತಿದ್ದೇ ಆದರೆ ಆಂಧ್ರಕ್ಕೆ ನಿಚ್ಚಳ ಗೆಲುವಿನ ಸ್ಪಷ್ಟ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಕರ್ನಾಟಕದ ಅಳಿವು-ಉಳಿವು ಕರುಣ್-ಸ್ಮರಣ್ ಜೋಡಿಯ ಮೇಲಿದೆ.
ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: ೮೨.೨ ಓವರ್ಗಳಲ್ಲಿ ೨೭೪ ಹಾಗೂ ೬೦ ಓವರ್ಗಳಲ್ಲಿ ೪ ವಿಕೆಟ್ಗಳಿಗೆ ೧೭೬, ಆಂಧ್ರ: ೧೨೧.೫ ಓವರ್ಗಳಲ್ಲಿ ೪೧೮.

