ಜಮಖಂಡಿ
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿಯು ನಮ್ಮ ದೇಶದ ಆರ್ಥಿಕತೆ ಆಹಾರ ಭದ್ರತೆ ಉದ್ಯೋಗ ಮತ್ತು ಗ್ರಾಮೀಣ ಜೀವನದ ಪ್ರಮುಖ ಆಧಾರವಾಗಿದೆ. ಗ್ರಾಮೀಣ ಅಭಿವೃದ್ಧಿಯು ದೇಶದ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಕೃಷಿಯ ಅಭಿವೃದ್ಧಿಯಿಂದ ಗ್ರಾಮೀಣ ಅಭಿವೃದ್ಧಿಗೆ ಅಡಿಪಾಯ. ಗ್ರಾಮೀಣ ಅಭಿವೃದ್ಧಿಯೇ ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ನಾಲ್ಕನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಪರಸ್ಪರ ಸಂಬಂಧ ಹೊಂದಿದ್ದು ಇವೆರಡರ ಪ್ರಗತಿಯಿಂದ ರೈತರ ಆದಾಯ ಹೆಚ್ಚುತ್ತದೆ. ಕೃಷಿ ಎಂದರೆ ಭೂಮಿ ಉಳುಮೆ ಬೆಳೆ ಬೆಳೆಯುವುದು ಆಹಾರ ಉತ್ಪಾದಿಸುವುದು ಪಶು ಸಂಗೋಪನೆ ತೋಟಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುವ ವಿಶಾಲ ಕ್ಷೇತ್ರವಾಗಿದೆ ಎಂದರು.
ಭಾರತದಲ್ಲಿ ಅನೇಕ ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ. ಕೃಷಿ ಅಭಿವೃದ್ಧಿಯಿಂದ ಬಡತನ ಕಡಿಮೆ ಮಾಡುವುದು, ರೈತರ ಆದಾಯ ಹೆಚ್ಚಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವುದು, ಮಹಿಳೆಯರು ಮತ್ತು ಯುವಕರಿಗೆ ಸ್ವಾವಲಂಬನೆಯ ಅವಕಾಶ ಕಲ್ಪಿಸುವುದು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಉತ್ತೇಜನ ನೀಡುವುದಾಗಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಅನುಸರಿಸಬೇಕಾಗುತ್ತದೆ. ಮಳೆಗಾಲದ ಅನಿಶ್ಚಿತತೆ ನೀರಿನ ಕೊರತೆ ಸಣ್ಣ ಮತ್ತು ವಿಭಜಿತ ಜಮೀನುಗಳು ಉತ್ಪಾದನಾ ವೆಚ್ಚದ ಹೆಚ್ಚಳ ಮಾರುಕಟ್ಟೆ ಸಮಸ್ಯೆ ಮಣ್ಣಿನ ಫಲವತ್ತತೆಯ ಕುಸಿತ ಕೀಟ ಮತ್ತು ರೋಗಗಳ ಬಾಧೆ ಸಾಲದ ಹೊರೆ ತಂತ್ರಜ್ಞಾನದ ಕೊರತೆ ಕಾಡುತ್ತದೆ. ಇವುಗಳ ಪರಿಹಾರಕ್ಕೆ ಮಳೆ ನೀರು ಸಂಗ್ರಹ ಕೆರೆಗಳ ಪುನರುಜ್ಜೀವನ ಹನಿ ನೀರಾವರಿಗೆ ಉತ್ತೇಜನ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಗೊಬ್ಬರ ಬಳಸುವುದು ಕೃಷಿ ಉತ್ಪನ್ನ ಸಂಗ್ರಹಣೆ ಶೀತಲೀಕರಣ ಸಂಸ್ಕರಣೆ ನೇರ ಮಾರಾಟಕ್ಕೆ ನೆರವಾಗುವುದು ಮುಖ್ಯವಾಗಿದೆ ಎಂದರು.
ಅಸಿ ಮಸಿ ಕೃಷಿ ದೇಶದ ಅಭಿವೃದ್ಧಿಗೆ ಮೂಲಾಧಾರ. ಇವುಗಳತ್ತ ಎಲ್ಲರ ಗಮನ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಉತ್ತೇಜಿಸಿದರೆ ರೈತರ ಬಾಳು ಉಜ್ವಲಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದ ಅವರು ಶಿಕ್ಷಣವು ಮಾನವ ಜೀವನವನ್ನು ರೂಪಿಸುವ ಮಹತ್ವದ ಸಾಧನೆಯಾಗಿದೆ. ಉತ್ತಮ ಶಿಕ್ಷಣವು ಜ್ಞಾನವಂತ ವ್ಯಕ್ತಿಯನ್ನು ರೂಪಿಸುತ್ತದೆ. ಉತ್ತಮ ವ್ಯಕ್ತಿತ್ವ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವ ನಾಗರೀಕರನ್ನು ರೂಪಿಸುತ್ತದೆ. ಅದರಿಂದ ಶಿಕ್ಷಣ ಸಂಸ್ಕಾರ ಶಿಸ್ತು ಮತ್ತು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದಾಗ ಉತ್ತಮ ವ್ಯಕ್ತಿ ಸದೃಢ ಸಮಾಜ ಮತ್ತು ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಮೌಲ್ಯಾಧಾರಿತ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ಹರಿಯುವ ನೀರಿಗೆ ಬೀಸುವ ಗಾಳಿಗೆ ಹೊತ್ತ ಭೂಮಿಗೆ ಒಂದು ಧರ್ಮ ಇದೆ. ಅದರಂತೆ ಮನುಷ್ಯನಿಗೂ ಧರ್ಮ ಮತ್ತು ಆ ಧರ್ಮದ ಪರಿಪಾಲನೆ ಬಹಳಷ್ಟು ಮುಖ್ಯ. ಎಲ್ಲ ಧರ್ಮಗಳಲ್ಲಿ ಮಾನವೀಯ ಆದರ್ಶ ಮೌಲ್ಯಗಳನ್ನು ಸಾರುತ್ತವೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಅವರ ಆ ಸಂದೇಶ ಅಂದಿಗಷ್ಟೇ ಅಲ್ಲ. ಅಂದು ಇಂದು ಮುಂದು ಎಂದೆAದಿಗೂ ಎಲ್ಲರಿಗೂ ಅನ್ವಯಿಸುತ್ತವೆ. ಪರಸ್ಪರ ವಿಶ್ವಾಸ ಸಾಮರಸ್ಯ ಮತ್ತು ಸೌಹಾರ್ದ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಯಜ್ಞದ ಜ್ಞಾನ ಬೆಳಕು ಸಕಲರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲಿ ಎಂದರು.
ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಸದೃಢ ಸಮಾಜ ನಿರ್ಮಾಣಕ್ಕಾಗಿ ನಿರಂತರ ಶ್ರಮಿಸುತ್ತಿರುವ ಶ್ರೀ ಜಗದ್ಗುರು ರಂಭಾಪುರಿ ಪೀಠ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿರುವುದು ನಮಗೆ ಹೆಮ್ಮೆಯ ಸಂಗತಿ. ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಂಚರಿಸುತ್ತಿರುವುದನ್ನು ತಾವೆಲ್ಲರೂ ಕಂಡಿದ್ದೀರಿ. ಜನತೆಯಲ್ಲಿ ಧರ್ಮ ಜಾಗೃತಿ ಮೂಡಿಸಬೇಕು ಸಂಸ್ಕಾರ ಬೆಳೆಸಬೇಕು ಎಂಬ ಮಹದಾಶೆಯಿಂದ ಅವರು ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಕವಿತಾಳದ ಕೃಷಿ ತಜ್ಞರಾದ ಡಾ. ಕವಿತಾ ಮಿಶ್ರಾ ಮಾತನಾಡಿ, ರೈತ ಸಮೃದ್ಧನಾದರೆ ಗ್ರಾಮ ಸಮೃದ್ಧವಾಗುತ್ತದೆ. ಗ್ರಾಮ ಸಮೃದ್ಧವಾದರೆ ರಾಷ್ಟ್ರ ಬಲಿಷ್ಠವಾಗುತ್ತದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಆಹಾರ ಭದ್ರತೆ ಸಾಮಾಜಿಕ ನ್ಯಾಯ ಪರಿಸರ ಸಂರಕ್ಷಣೆ ಮತ್ತು ಸಮಾನ ಅವಕಾಶಗಳಿಂದ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾಗಿವೆ. ಆಧುನಿಕ ತಂತ್ರಜ್ಞಾನವನ್ನು ಸರಿಯಾಗಿ ಬಳಸುವುದರಿಂದ ನೀರು ಗೊಬ್ಬರ ಸಮಯ ಶ್ರಮ ಉಳಿಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದು. ಗ್ರಾಮೀಣ ಅಭಿವೃದ್ಧಿಯಿಂದ ಜನರಿಗೆ ಉತ್ತಮ ಜೀವನ ನಡೆಸಲು ಅಗತ್ಯವಾದ ಶಿಕ್ಷಣ ಆರೋಗ್ಯ ರಸ್ತೆ ಕುಡಿಯುವ ನೀರು ಮತ್ತು ಉದ್ಯೋಗ ಸಾಮರ್ಥ್ಯವನ್ನು ಒದಗಿಸುತ್ತದೆ. ರೈತರ ಶ್ರಮ ಸಾಧನೆ ವ್ಯರ್ಥವಾಗಬಾರದು. ಅದು ದೇಶದ ಸಮಗ್ರ ಬೆಳವಣಿಗೆಗೆ ಪ್ರಬಲ ಶಕ್ತಿಯಾಗಿದೆ ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಓದುಬರಹ ಮತ್ತು ಪರೀಕ್ಷೆಗಳಲ್ಲಿ ಅಂಕ ಗಳಿಸುವುದಲ್ಲ. ಅದು ವ್ಯಕ್ತಿಯ ದೈಹಿಕ ಮಾನಸಿಕ ಬೌದ್ಧಿಕ ನೈತಿಕ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗುವ ಸಮಗ್ರ ಪ್ರಕ್ರಿಯೆಯಾಗಿದೆ. ಶಿಕ್ಷಣ ವ್ಯಕ್ತಿಗೆ ಸತ್ಯ ಮತ್ತು ಸತ್ಯವನ್ನು ಗುರುತಿಸುವ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬಾಳುವ ಸಾಮರ್ಥ್ಯವನ್ನು ನೀಡುತ್ತದೆ. ಶಿಕ್ಷಣ ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ. ವ್ಯಕ್ತಿತ್ವ ಅಭಿವೃದ್ಧಿಯು ಸರಿಯಾದ ರೀತಿಯಲ್ಲಿ ಬಳಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಇವೆರಡು ಒಟ್ಟಾಗಿ ಉತ್ತಮ ವ್ಯಕ್ತಿ ಉತ್ತಮ ಕುಟುಂಬ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ. ಶಿಕ್ಷಣದಿಂದ ಮನುಷ್ಯನ ವ್ಯಕ್ತಿತ್ವ ಉಜ್ವಲವಾಗಿ ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಬಬಲೇಶ್ವರ ಗುರುಪಾದೇಶ್ವರ ಮಠದ ಡಾ. ಮಹಾದೇವ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ಶ್ರೀ ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.

