ಧಾರವಾಡ
ಬಿ.ಎ. ವಿದ್ಯಾರ್ಥಿಗಳಿಗೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಅವಕಾಶಗಳಿವೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವರ್ತಮಾನದ ಮಾನದಂಡಗಳಿಗೆ ಸ್ಪಂದಿಸಿ ಕಲಿಕೆ ಮುಂದುವರೆಸಿಕೊಳ್ಳಿರಿ. ನಿಮ್ಮ ಪ್ರತಿಭೆ ಬಹುಮುಖವಾಗಿರಲಿ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಿರಿ. ನಿಮ್ಮ ಬದುಕಿನ ಯಶಸ್ಸು ನಮ್ಮ ಗುರಿ. ಕಲಾತ್ಮಕ ಕೌಶಲ್ಯಗಳು ಇಂದು ಸಾಕಷ್ಟು ಲಭ್ಯವಿವೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.
ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಲಾ ಸಂಘದಿಂದ ‘ಇಗ್ನೆಂಟ್-೨೦೨೬’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾ ವಿಭಾಗದ ವಿಷಯಗಳನ್ನು ಆಳವಾಗಿ, ಸರಿಯಾಗಿ, ಭರವಸೆಯಿಂದ ಅಧ್ಯಯನ ಮಾಡಿದ್ದಲ್ಲಿ ಅವಕಾಶಗಳಿವೆ ಎಂದರು.
ಜನತಾ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ಪದವಿ ನಂತರ ಉದ್ಯೋಗ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಾದ ಅತಿ ಪ್ರಮುಖವಾದ ಕೌಶಲ್ಯಗಳ ಕುರಿತು ತಿಳಿಸುತ್ತಾ, ಪ್ರಮುಖವಾಗಿ ಆತ್ಮವಿಶ್ವಾಸ, ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ, ಅಭಿವ್ಯಕ್ತಿ, ಸಮಯಪ್ರಜ್ಞೆ, ಸಂಯಮ, ಸೌಜನ್ಯಗಳಿಂದ ನಮ್ಮ ವರ್ತನೆಗಳು ಇರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ ಮುತಾಲಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಹಂತದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ತಾಳ್ಮೆ ಮತ್ತು ಪ್ರಯತ್ನಶೀಲರಾಗಿ ಹೊಸತನವನ್ನು ರೂಡಿಸಿಕೊಂಡು ಬೆಳೆಯಿರಿ ಎಂಬ ಸಂದೇಶವನ್ನು ನೀಡಿದರು.
ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಇನ್ಸಟಿಟ್ಯೂನ್ ನಿರ್ದೇಶಕ ಡಾ. ಸೂರಜ ಜೈನ, ಕಾಲೇಜಿನ ಉಪಪ್ರಾಚಾರ್ಯ ಡಾ. ನಳಿನಿ ಡಿ. ಕುಲಕರ್ಣಿ, ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಶೌಕತ ಅಲಿ ಮೇಗಲಮನಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕು. ದಾವಲಮಾ ನೀಲಗಾರ, ಕಲಾ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಸುಹಾನಾ ನದಾಫ ಮತ್ತು ಕು. ಸಹನಾ ಘಿವಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾಲೇಜಿನ ಕಲಾ ಸಂಘದ ಅಧ್ಯಕ್ಷ ಡಾ. ಮಂಜುನಾಥ ಜೋಗಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ನೀಲಮ್ಮ ಪಾಟೀಲ ಪರಿಚಯಿಸಿದರು. ಕಲಾ ಸಂಘದ ಸಂಯೋಜಕ ಮೃತುಂಜಯ ಎಸ್.ಕೆ. ವಂದಿಸಿದರು. ಕು. ರುಬಿನಾ ನದಾಫ ಪ್ರಾರ್ಥಿಸಿದರು. ಕು. ವಾಸುಕಿ ಕುಲಕರ್ಣಿ ಮತ್ತು ಕು. ದೇವರಾಜ ನಿರೂಪಿಸಿದರು.
ಕಲಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ರಂಗೋಲಿ, ಚರ್ಚಾಸ್ಪರ್ಧೆ, ರಸಪ್ರಶ್ನೆ ಹಾಗೂ ಒಲೆರಹಿತ ಅಡುಗೆ ಸ್ಪರ್ಧೆ ಮತ್ತು ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
