ಸಾರ್ಥಕ ಸೇವೆಯ ಹಾದಿಯಲ್ಲಿ ಜೆ.ಎಸ್.ಎಸ್: ಡಾ. ಅಜಿತ ಪ್ರಸಾದ

ಹಂಚಿಕೊಳ್ಳಿ

ಧಾರವಾಡ ಜನತಾ ಶಿಕ್ಷಣ ಸಮಿತಿ(ಜೆಎಸ್‌ಎಸ್‌)ಯ ನೂತನ ಆಡಳಿತ ಮಂಡಳಿ 54ನೇ ವರ್ಷಕ್ಕೆ ಪಾದಾರ್ಪಣೆ ಸಮಾರಂಭ

ಧಾರವಾಡ
ಜೆಎಸ್‌ಎಸ್‌ನ ನೂತನ ಆಡಳಿತ ಮಂಡಳಿ ೫೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಕೇವಲ ಒಂದು ಸಂಭ್ರಮವಲ್ಲ ಇದು ನಂಬಿಕೆ, ಪರಿಶ್ರಮ, ತ್ಯಾಗ, ಸೇವೆ ಮತ್ತು ಸಾಧನೆಯ ಸುದೀರ್ಘ ಪಯಣದ ಪ್ರತೀಕವಾಗಿದೆ. ಒಂದು ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭವಾಗಿರಬಹುದು. ಆದರೆ, ಅದನ್ನು ನಿರಂತರವಾಗಿ ಮುನ್ನಡೆಸುವುದು, ಸಮಾಜದ ವಿಶ್ವಾಸವನ್ನು ಗಳಿಸುವುದು, ಸಾವಿರಾರು ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವುದು ನಿಜವಾದ ಸಾಧನೆಯಾಗಿದೆ. ಅಂತಹ ಸಾರ್ಥಕ ಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಜೆ.ಎಸ್.ಎಸ್. ನೂತನ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಧಾರವಾಡ ಜೆಎಸ್‌ಎಸ್‌ ಸನ್ನಿದ್ಧಿ ಕಲಾಕ್ಷೇತ್ರದಲ್ಲಿ ಭಾನುವಾರ ಜೆ.ಎಸ್.ಎಸ್ ನ ನೂತನ ಆಡಳಿತ ಮಂಡಳಿ ೫೪ನೇ ವರ್ಷದ ಪಾದಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೧೯೪೪ರಲ್ಲಿ ಸ್ವಾತಂತ್ರ‍್ಯ ಹೋರಾಟಗಾರ, ಸಮಾಜಸೇವಕ ಹಾಗೂ ಶಿಕ್ಷಣತಜ್ಞರಾದ ದಿವಂಗತ ಆರ್.ಎಸ್. ಹುಕ್ಕೇರಿಕರ್ ಅವರ ಮಾರ್ಗದರ್ಶನದಲ್ಲಿ ಧಾರವಾಡದ ವಿದ್ಯಾಗಿರಿ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯು ಆರಂಭವಾಯಿತು ಎಂದರು.

ಪ್ರಖ್ಯಾತ ಸಾಹಿತಿ ಹಾಗೂ “ಕನ್ನಡದ ಕಣ್ವ” ಎಂದೇ ಪ್ರಸಿದ್ಧರಾದ ಡಾ. ಬಿ.ಎಂ. ಶ್ರೀಕಂಠಯ್ಯ ಅವರು ಆರಂಭಿಕ ಹಂತದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಕಾಲಕ್ರಮೇಣ ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಹೊಸ ಶೈಕ್ಷಣಿಕ ವಿಭಾಗಗಳನ್ನು ಆರಂಭಿಸಲಾಯಿತು. ೭೦ರ ದಶಕದಲ್ಲಿ ಸಂಸ್ಥೆ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ೧೯೭೩ರ ಅಕ್ಟೋಬರ್ ೧೮ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಂಸ್ಥೆಯ ಆಡಳಿತ ಮುಂದುವರಿಯಿತು. ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಜೆ.ಎಸ್.ಎಸ್ ನ ಬೆಳವಣಿಗೆ ಪ್ರಾರಂಭವಾಯಿತು ಎಂದರು.

ನಂತರದ ವರ್ಷಗಳಲ್ಲಿ ಸಂಸ್ಥೆಯು ತಾಂತ್ರಿಕ ಶಿಕ್ಷಣ, ವೃತ್ತಿಪರ ಶಿಕ್ಷಣ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿತು. ಈ ಬೆಳವಣಿಗೆಯಲ್ಲಿ ದೀರ್ಘಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಡಾ. ನ. ವಜ್ರಕುಮಾರ ಅವರ ಕೊಡುಗೆಯೂ ಗಮನಾರ್ಹವಾಗಿದೆ. ಇಂದು ಧಾರವಾಡದ ವಿದ್ಯಾಗಿರಿಯು ಶಿಕ್ಷಣದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಜೆ.ಎಸ್.ಎಸ್ ನಲ್ಲಿ ವಿವಿಧ ಹಂತಗಳ ಶಿಕ್ಷಣ ನೀಡುವ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕಲೆ, ವಾಣಿಜ್ಯ, ವಿಜ್ಞಾನ, ತಾಂತ್ರಿಕ ಶಿಕ್ಷಣ, ಕ್ರೀಡೆ ವೃತ್ತಿಪರ ತರಬೇತಿ ಮತ್ತು ಸಂಶೋಧನೆಯಂತಹ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಒದಗಿಸುತ್ತಿವೆ ಎಂದರು.

ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಸ್ವಾಸ್ಥ್ಯ ಸಮಾಜಕ್ಕಾಗಿ, ಉದ್ಯೋಗ ಮೇಳಗಳು, ಕೌಶಲ್ಯ ತರಬೇತಿಗಳ ಮುಖಾಂತರ ಮಹಿಳೆಯರು ಹಾಗೂ ಬಡಜನರ ಸ್ವಾವಲಂಬಿ ಜೀವನಕ್ಕಾಗಿ ಶ್ರಮಿಸುತ್ತಿದೆ. ಪೂಜ್ಯರು ಜೆ.ಎಸ್.ಎಸ್ ನ ಜೊತೆಗೆ ಎಸ್.ಡಿ.ಎಂ ಇಂಜಿನಿಯರಿಂಗ್, ಡೆಂಟಲ್, ವೈದ್ಯಕೀಯ, ನರ್ಸಿಂಗ್, ಫಿಜಿಯೋಥೆರಪಿ, ಐ.ಟಿ.ಐ, ರುಡ್‌ಸೆಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಿ ಧಾರವಾಡವನ್ನು ರಾಜ್ಯದ ನಕಾಶೆಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರೆ. ಅಷ್ಷೆ ಅಲ್ಲದೇ ಬೆರಳೆನಿಕೆಯಷ್ಟಿದ್ದ ಸಂಸ್ಥೆಗಳು ೨೫ ಸಂಸ್ಥೆಗಳಾಗಿ ಬೆಳೆದವು. ಉತ್ತಮ ಗುಣಮಟ್ಟದ ಕಟ್ಟಡಗಳು, ಕಾಂಕ್ರೀಟ್ ರಸ್ತೆ ನಿರ್ಮಾಣ, ವಿದ್ಯಾ ಸಂಸ್ಥೆಯ ಮೇಲ್ಚಾವಣಿಗಳ ಮೇಲೆ ಸೋಲಾರ ಪ್ಯಾನೆಲ್‌ಗಳ ಅಳವಡಿಕೆ, ಜೆ.ಎಸ್.ಎಸ್ ಸಂಸ್ಥೆಯ ಸುತ್ತಮುತ್ತಲಿನ ಹೆಚ್ಚಿನ ಕಡೆಗಳಳ್ಲಿ ಕಂಪೌಂಡ ಗೋಡೆ ನಿರ್ಮಾಣ ಮಾಡಲಾಗಿದೆ‌ ಎಂದರು.

ಕ್ರೀಡಾಂಗಣಗಳ ಅಭಿವೃದ್ಧಿ, ದೂರದಿಂದ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಅನುಕೂಲವಾಗಲು ವಸತಿ ನಿಲಯಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಪುರಕವಾಗಿ ಕೊಠಡಿಗಳು, ಪ್ರಯೋಗಾಲಯಗಳು, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ನುರಿತ ಶಿಕ್ಷಕರನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ. ಇದು ಜೆ.ಎಸ್.ಎಸ್ ಸುಸ್ಥಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಿದ ಎಲ್ಲಾ ಹಿರಿಯರು, ಮಾರ್ಗದರ್ಶಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಿತೈಷಿಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.

೫೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ನಮ್ಮೆಲ್ಲರ ಸಂಕಲ್ಪ ಒಂದೇ ಆಗಿರಲಿ ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸೋಣ, ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸೋಣ ಮತ್ತು ಸಮಾಜದ ಅಭಿವೃದ್ಧಿಗೆ ನಮ್ಮ ಕೈಲಾದ ಕೊಡುಗೆಯನ್ನು ನೀಡೋಣ ಎಂದು ಹೇಳಿದರು.

ಜೆ.ಎಸ್.ಎಸ್ ಆಡಳಿತ ಮಂಡಳಿ ಸದಸ್ಯ ಶ್ರಿಕಾಂತ ಕೆಮ್ತೂರ ಮಾತನಾಡಿ, ಜೆ.ಎಸ್.ಎಸ್. ಸಂಸ್ಥೆಯು ಶಿಕ್ಷಣ, ಸಂಸ್ಕಾರ, ಶಿಸ್ತು ಮತ್ತು ಸೇವೆಯ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಡಾ. ನ. ವಜ್ರಕುಮಾರವರ ಹಾಗೂ ಅಜಿತ ಪ್ರಸಾದರ ಸೇವೆ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವೇ ಜೆ.ಎಸ್.ಎಸ್ ಸಂಸ್ಥೆಯ ಸಾಧನೆಗೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೆ.ಎಸ್.ಎಸ್ ನ ಹಳೆಯ ವಿದ್ಯಾರ್ಥಿ ಹಾಗೂ ಶಾಸಕ ವಿನಯ ಕುಲಕರ್ಣಿಯವರು ಆಗಮಿಸಿ ಶುಭ ಕೋರಿ ಡಾ. ಅಜಿತ ಪ್ರಸಾದರವರನ್ನು ಸನ್ಮಾನಿಸಿದರು. ಐಟಿಐ ಕಾಲೇಜ ಪ್ರಾಚಾರ್ಯ ಮಹಾವೀರ ಉಪಾದ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲನಯನ ಮೆಹತಾ, ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜೆ.ಎಸ್.ಎಸ್ ನ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಸಮಾರಂಭದ ಪೂರ್ತಿ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಲಿಂಕ್ ನೋಡಿ…


ಹಂಚಿಕೊಳ್ಳಿ

Leave a Reply

Your email address will not be published. Required fields are marked *