ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಜಮಖಂಡಿ
ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿ ದೀಪ. ನ್ಯಾಯ ನೀತಿಗಳ ನಟನೆಯಾಗದೆ ನಡೆಯಲಿ ಬೆಳೆದು ಬರಬೇಕು. ಮನುಷ್ಯ ಧರ್ಮದಿಂದ ವಿಮುಖನಾದರೆ ಶಾಂತಿ ನೆಮ್ಮದಿ ದೊರಕದು. ಭೌತಿಕ ಬದುಕಿನಲ್ಲಿ ಆಧ್ಯಾತ್ಮಿಕ ಅರಿವು ಅನುಸಂಧಾನ ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಭಾನುವಾರ ನಗರದದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ೮ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಹೊಸತನದ ಜೊತೆಗೆ ಹಿರಿತನದ ಕಳೆ ಮೇಳೈಸಿದಾಗ ಬದುಕಿಗೆ ಬೆಲೆ ಮತ್ತು ಬಲ ಬರುತ್ತದೆ. ಕೆಡುಕುಗಳನ್ನು ಮೆಟ್ಟಿನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿ ಆಗುತ್ತದೆ. ಅದರಂತೆ ಮನುಷ್ಯನಿಗೆ ಬರುವ ಕಷ್ಟಗಳಿಂದ ಜೀವನದ ಮೌಲ್ಯಗಳು ಸಂವರ್ಧಿಸುತ್ತವೆ ಎಂದರು.

ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ಮತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಬೆಳಗುವ ದೀಪಕ್ಕೆ ಎಣ್ಣೆ ಮುಖ್ಯ ಇದ್ದಂತೆ ಸರ್ವ ಚಟುವಟಿಕೆಗಳಿಗೆ ಆತ್ಮವಿಶ್ವಾಸವೇ ಮೂಲ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಹಿರಿಯರ ಮೌಲ್ಯಾಧಾರಿತ ಚಿಂತನೆಗಳು ಬಾಳಿನ ಆಶಾದೀಪಗಳು. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿ ಕೊಡಬಾರದು. ದೇವರು ಎಲ್ಲೆಡೆಯಲ್ಲಿ ತುಂಬಿದ್ದರೂ ಮನುಷ್ಯನ ಅಂತರಂಗದಲ್ಲಿ ನೆಲೆಗೊಂಡಿದ್ದಾನೆ. ವೀರಶೈವ ಧರ್ಮದ ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ೨೦೨೭ನೇ ಸಾಲಿನ ದಸರಾ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ಜರುಗಿಸಲು ವಿನಂತಿಸಿ ಬಳ್ಳಾರಿ ಜಿಲ್ಲಾ ವೀರಶೈವ ಮುಖಂಡರು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಹಲವಾರು ನಗರಗಳಲ್ಲಿ ೨೦೨೭ನೇ ಸಾಲಿನ ಶರನ್ನವರಾತ್ರಿ ದಸರಾ ಮಹೋತ್ಸವ ಆಚರಿಸಲು ಬೇಡಿಕೆಗಳು ಬಂದಿದ್ದು ಸಮಾರಂಭದ ಕೊನೆಗೆ ಅಂದರೆ ಅಕ್ಟೋಬರ್ 20ರ ಸಮಾರಂಭದಲ್ಲಿ ಮುಂದಿನ ವರ್ಷ ದಸರಾ ಆಚರಿಸುವ ಸ್ಥಳದ ಅಂತಿಮ ಆಯ್ಕೆಯನ್ನು ಪ್ರಕಟಿಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಲೋಕಸಭಾ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾರತೀಯ ಆಧ್ಯಾತ್ಮಿಕ ಸಂಪತ್ತು ಬಹಳ ದೊಡ್ಡದು. ಪೂರ್ವದ ಆಚಾರ್ಯರು ಋಷಿಮುನಿಗಳು ಸತ್ಪುರುಷ ಸಜ್ಜನರು ಉತ್ಕೃಷ್ಟ ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣರಾಗಿದ್ದಾರೆ. ಜೀವನದ ಶ್ರೇಷ್ಠ ಮತ್ತು ಉನ್ನತಿಗೆ ಆದರ್ಶ ಚಿಂತನೆಗಳು ಮತ್ತು ಅವುಗಳ ಆಚರಣೆ ಮುಖ್ಯವಾಗಿದೆ. ವೀರಶೈವ ಧರ್ಮದಲ್ಲಿ ಅರುವಿನ ಆಧ್ಯಾತ್ಮ ಚಿಂತನೆ ನಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಕರೆತಂದಿರುವುದನ್ನು ಕಾಣುತ್ತೇವೆ. ವೀರಶೈವ ಧರ್ಮದ ಪಂಚಪೀಠಗಳು ಸಕಲರಿಗೂ ಒಳಿತನ್ನು ಬಯಸಿ ಧಾರ್ಮಿಕ ಬೋಧನೆ ಸಮಾಜದಲ್ಲಿ ಸಾಮರಸ್ಯ ಮತ್ತು ಭಾವೈಕ್ಯತೆ ಬೆಳೆಸುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ಜಮಖಂಡಿ ದಸರಾಹೋತ್ಸವ ಈ ಪ್ರಾಂತ ಪ್ರದೇಶದ ಜನತೆಗೆ ಅಷ್ಟೇ ಅಲ್ಲ ನಾಡಿನ ಸಮಸ್ತ ಜನತೆಗೆ ಸನ್ಮಾರ್ಗದ ಬೆಳಕನ್ನು ತೋರುತ್ತಿದೆ ಎಂದು ಹರುಷ ವ್ಯಕ್ತಪಡಿಸಿದರು.

ಪ್ರಶಸ್ತಿ: ಜಮಖಂಡಿ ನಗರದ ಯುವಧುರೀಣ ಸಿದ್ದಪ್ಪ ಬಸಪ್ಪ ಕವಟಗಿ ಅವರ ಕ್ರಿಯಾಶೀಲ ಬದುಕನ್ನು ಕಂಡು ಶ್ರೀ ರಂಭಾಪುರಿ ಜಗದ್ಗುರುಗಳು ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿಯನ್ನು ಅನುಗ್ರಹಿಸಿ ಶುಭ ಹಾರೈಸಿದರು. ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು. ಗುರುಸಿದ್ಧೇಶ್ವರ ಸ್ವಾಮಿಗಳು ಬ್ರಹ್ಮಾನಂದ ಆಶ್ರಮ ರಬಕವಿ ಸಮ್ಮುಖ ವಹಿಸಿದ್ದರು.

ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಮಾತ್ಮನು ಕೇವಲ ದೇವಾಲಯಗಳಲ್ಲಿ ಇಲ್ಲ. ಭಕ್ತನ ಹೃದಯ ದೇವರದಲ್ಲಿ ನೆಲೆಸಿದ್ದಾನೆ ಎಂಬ ಆಧ್ಯಾತ್ಮಿಕ ಚಿಂತನೆಗೆ ಬಹಳಷ್ಟು ಮಹತ್ವವಿದೆ. ದೇವರು ಎಲ್ಲೆಡೆ ತುಂಬಿ ಹೊಮ್ಮಿ ಜೀವಸಂಕುಲವನ್ನು ಕಾಪಾಡುತ್ತಿದ್ದಾನೆ. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಣ್ಣೂರು ಹೊರಗಿನ ಮಠದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯ ಸ್ವಾಮಿಗಳು ಮಾನವ ಜೀವನದಲ್ಲಿ ಧರ್ಮ ಮತ್ತು ಗುರುವಿನ ಪಾತ್ರ ಅತ್ಯಂತ ಮಹತ್ವದ್ದು. ಆದರ್ಶ ಬದುಕಿಗೆ ಇವೆರಡನ್ನು ಸರಿಯಾಗಿ ಅರಿತು ಆಚರಿಸಿ ಬಾಳಿದರೆ ಜೀವನದಲ್ಲಿ ಸುಖ ಶಾಂತಿ ಪಡೆಯಲು ಸಾಧ್ಯವಾಗುತ್ತದೆ. ಜಮಖಂಡಿ ದಸರಾ ಮಹೋತ್ಸವ ಜನಮನದ ಕೊಳೆಯನ್ನು ಕಳೆದು ಶ್ರೇಯಸ್ಸನ್ನು ಉಂಟು ಮಾಡಲೆಂದರು.

ಉಪನ್ಯಾಸ: ಬಂಡಿವಾಡದ ಸಾಹಿತ್ಯ ಸಂಶೋಧಕರಾದ ಡಾ. ಎ.ಸಿ. ವಾಲಿಯವರು ಮಾತನಾಡಿ ಇಂದಿನ ಆಧುನಿಕ ವೈಚಾರಿಕ ಕಾಲದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಬರುವುದು ಸುಲಭದ ಮಾತಲ್ಲ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಅರಿವಿನ ಕೊರತೆಯಿಂದಾಗಿ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ತಂತ್ರಜ್ಞಾನ ಮಾನವನಿಗೆ ಜ್ಞಾನ ವೇಗ ಮತ್ತು ಸೌಲಭ್ಯಗಳನ್ನು ನೀಡಬಹುದು. ಆದರೆ ಪ್ರೀತಿ ಕರುಣೆ ಸತ್ಯ ನ್ಯಾಯ ಮತ್ತು ಸೇವೆಯಂಥ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ತಂತ್ರಜ್ಞಾನ ಬೆಳೆದರೂ ಮನುಷ್ಯನ ನಡುವಿನ ಪ್ರೀತಿ ಕಾಳಜಿ ಕಡಿಮೆಯಾಗಬಾರದು. ತಂತ್ರಜ್ಞಾನವನ್ನು ಶಿಕ್ಷಣ ಆರೋಗ್ಯ ಬಡವರಿಗೆ ಸಹಾಯ ಮತ್ತು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು. ತಂತ್ರಜ್ಞಾನದ ಬೆಳವಣಿಗೆ ಜೊತೆಗೆ ಪರಿಸರದ ರಕ್ಷಣೆಯನ್ನು ಮಾಡಬೇಕು. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಮಾನವೀಯ ಆದರ್ಶ ಮೌಲ್ಯಗಳ ಸಂರಕ್ಷಣೆ ಮಾಡಿಕೊಂಡು ಬರುವುದು ಅತ್ಯವಶ್ಯಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ನವೀನರವರು ಆಗಮಿಸಿದ್ದರು. ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಜಮಖಂಡಿಯ ಪ್ರಕಾಶ ಮೀಶಿ, ದಿಲೀಪ ಜೋಗದಂಡೆ, ವಿವೇಕ ಪತಂಗೆ, ವಿನಾಶ ರಜಪೂತ, ನಿಲೇಶ ಹಜಾರೆ, ತೌಫೀಕ ಎಂ.ಪಾರ್ಥನಳ್ಳಿ ಪಾಲ್ಗೊಂಡಿದ್ದರು.
ಹಲವಾರು ಗಣ್ಯ ಮಾನ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಗೀತಾ ಸೂರ್ಯವಂಶಿ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ಶ್ರೀ ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು. ಸಮಾರಂಭದ ಕೊನೆಗೆ ಆಕರ್ಷಕ ನಜರ್ ಸಮರ್ಪಣೆ ನಡೆಯಿತು. ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು ನಿರೂಪಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *