ಬದುಕಿಗೆ ನೆರವಾಗುವ ಸಾಧನಗಳನ್ನು ಗೌರವಿಸುವುದೇ ಆಯುಧ ಪೂಜೆಯ ವೈಶಿಷ್ಠ್ಯತೆ: ಶ್ರೀ ರಂಭಾಪುರಿ ಜಗದ್ಗುರುಗಳು
ಜಮಖಂಡಿ
ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಣ್ಯ ನಗರವಾಗಿರುವ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಅಲ್ಲಿಯ ಶಿಷ್ಯ ಭಕ್ತರ ಪ್ರಾರ್ಥನೆಯಂತೆ ೨೦೨೭ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಸಲು ಅನುಮತಿಯನ್ನು ನಾವಿಂದು ಘೋಷಿಸುತ್ತಿದ್ದೇವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಹತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಿರುವ ಮುಂದಿನ ವರ್ಷ ದಸರಾ ಮಹೋತ್ಸವ ಒಂದು ಹೊಸ ದಾಖಲೆಯನ್ನು ನಿರ್ಮಿಸುವುದೆಂಬ ಆತ್ಮವಿಶ್ವಾಸ ತಮಗಿದೆ ಎಂದರು.
ನವರಾತ್ರಿಯ ಕೊನೆಯ ಹಂತದಲ್ಲಿ ಆಚರಿಸುವ ಆಯುಧ ಪೂಜೆಯು ಮನುಷ್ಯನ ಬದುಕಿನಲ್ಲಿ ವಿಶೇಷವಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿದೆ. ಆಯುಧವೆಂದರೆ ಕೇವಲ ಕತ್ತಿ ಬಿಲ್ಲು ಬಾಣಗಳಲ್ಲ. ಇಂದಿನ ಯುಗದಲ್ಲಿ ರೈತನ ನೇಗಿಲು ಕಾರ್ಮಿಕರ ಉಪಕರಣ ಶಿಕ್ಷಕನ ಪುಸ್ತಕ ವೈದ್ಯನ ವೈದ್ಯಕೀಯ ಸಾಧನಗಳು ಸೈನಿಕನ ಶಸ್ತ್ರಾಸ್ತ್ರಗಳು ಚಾಲಕನ ವಾಹನ ಕಲಾವಿದನ ಕುಂಚ ವಿದ್ಯಾರ್ಥಿಯ ಲೇಖನಿ ವಿಜ್ಞಾನಿಯ ಸಂಶೋಧನಾ ಉಪಕರಣ ಇವೆಲ್ಲವೂ ಆಯುಧಗಳೇ ಆಗಿವೆ. ಏಕೆಂದರೆ ಇವೆಲ್ಲವುಗಳು ಮಾನವನ ಬದುಕನ್ನು ಕಟ್ಟುವ ಸಮಾಜವನ್ನು ಬೆಳೆಸುವ ಮತ್ತು ರಾಷ್ಟ್ರದ ಪ್ರಗತಿಗೆ ನೆರವಾಗುವ ಸಾಧನಗಳಾಗಿವೆ ಎಂದರು.
ಆಯುಧ ಪೂಜೆ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಜವಾಬ್ದಾರಿ ಕಾಯಕದ ಗೌರವ ಮಾನವೀಯ ಮೌಲ್ಯಗಳನ್ನು ನೆನಪಿಸುವ ಸಾಂಸ್ಕೃತಿಕ ಸಂದೇಶವಾಗಿದೆ. ಸಾಧನೆಗಳನ್ನು ಗೌರವಿಸಿ ಕಾಯಕವನ್ನು ಪವಿತ್ರಗೊಳಿಸಿ, ದುರ್ಗುಣಗಳನ್ನು ಜಯಿಸಿ ಸಮಾಜದಲ್ಲಿ ಪ್ರೀತಿ ಸಮಾನತೆ ಮತ್ತು ಸಾಮರಸ್ಯ ಬೆಳೆಸಲು ಸಹಕಾರಿಯಾಗುತ್ತವೆ. ಆಯುಧ ಪೂಜೆಯು ನಮ್ಮ ಕೈಗಳಿಗೆ ಶಕ್ತಿ ಮನಸ್ಸಿಗೆ ವಿವೇಕ ಕಾಯಕಕ್ಕೆ ಗೌರವ ಮತ್ತು ಸಮಾಜಕ್ಕೆ ಸಾಮರಸ್ಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಮನುಷ್ಯನ ಕೈಯಲ್ಲಿರುವ ಆಯುಧಕ್ಕಿಂತ ಅವನ ಮನಸ್ಸಿನಲ್ಲಿರುವ ವಿವೇಕ ದೊಡ್ಡದು. ಕೈಯಲ್ಲಿರುವ ಶಸ್ತ್ರಕ್ಕಿಂತ ಹೃದಯದಲ್ಲಿರುವ ಕರುಣೆ ಶ್ರೇಷ್ಠ. ಹೊರಗಿನ ಶಕ್ತಿಗಿಂತ ಅಂತರಂಗದ ಶುದ್ಧತೆ ಮಹತ್ವದ್ದು. ಆದ್ದರಿಂದ ಆಯುಧ ಪೂಜೆಯು ನಮಗೆ ಶಕ್ತಿಯ ಜೊತೆಗೆ ಸಂಯಮವನ್ನು ಸಾಮರ್ಥ್ಯದ ಜೊತೆಗೆ ಸನ್ನಡತೆಯನ್ನು ಅಧಿಕಾರದ ಜೊತೆಗೆ ಜವಾಬ್ದಾರಿಯನ್ನು ಕಲಿಸುತ್ತದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ವಸ್ತುವಿನಲ್ಲಿಯೂ ಉಪಯುಕ್ತತೆಯನ್ನು ಮಾತ್ರವಲ್ಲ ಕೃತಜ್ಞತೆಯ ಭಾವವನ್ನು ಕಾಣುತ್ತೇವೆ. ನಮ್ಮ ಬದುಕಿಗೆ ನೆರವಾಗುವ ಸಾಧನಗಳನ್ನು ಗೌರವಿಸುವುದು, ಪ್ರಕೃತಿಗೆ ಕೃತಜ್ಞರಾಗಿರುವುದು ಶ್ರಮಕ್ಕೆ ಮಾನ್ಯತೆ ನೀಡುವುದು ಜ್ಞಾನವನ್ನು ಪವಿತ್ರವೆಂದು ಭಾವಿಸುವುದು ಸಂಸ್ಕೃತಿಯ ವೈಶಿಷ್ಠ್ಯವಾಗಿದೆ. ಯಾವ ಕೆಲಸವೂ ಕೀಳಲ್ಲ ಯಾವ ಕಾರಣಕ್ಕೂ ನಿಕೃಷ್ಟವಲ್ಲ ಎಂಬ ಅರಿವನ್ನು ಮೂಡಿಸುತ್ತದೆ. ರೈತನ ಶ್ರಮದಿಂದ ಅನ್ನ ದೊರೆಯುತ್ತದೆ ಎಂದರು.
ಕಾರ್ಮಿಕನ ದುಡಿಮೆಯಿಂದ ಕಟ್ಟಡಗಳು ನಿರ್ಮಾಣವಾಗುತ್ತವೆ. ಶಿಕ್ಷಕರ ಜ್ಞಾನದಿಂದ ಸಮಾಜ ಬೆಳೆಯುತ್ತದೆ. ವೈದ್ಯನ ಸೇವೆಯಿಂದ ಜೀವಗಳು ಉಳಿಯುತ್ತವೆ. ಮನುಷ್ಯ ಬಳಸುವ ಪ್ರತಿಯೊಂದು ವಸ್ತುವಿನಲ್ಲಿ ಗೌರವ ಭಾವನೆಯನ್ನು ಹೊಂದಿ, ಮುನ್ನಡೆಯುವುದರಿಂದ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವೇ ಕಳಾ ಚೈತನ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಆಚರಣೆಯಲ್ಲಿ ಪುರುಷರಿಗೆ ಕೊಟ್ಟಷ್ಟೇ ಅವಕಾಶವನ್ನು ಮಹಿಳೆಯರಿಗೂ ಕೂಡ ಕೊಟ್ಟಿದ್ದು ಮತ್ತೊಂದು ವಿಶೇಷ ಎಂದ ಜಗದ್ಗುರುಗಳು ಹತ್ತು ದಿನಗಳ ಕಾಲ ನಡೆದ ಸಮಾರಂಭ ತಮಗೆ ಸಮಾಧಾನ ಸಂತೃಪ್ತಿ ತಂದಿವೆ ಎಂದು ಹರುಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉದಯವಾಣಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಶಾಸಕ ಸಿ.ಸಿ. ಪಾಟೀಲರು ದಸರಾ ಧರ್ಮ ಸಮ್ಮೇಳನ ನಮ್ಮೆಲ್ಲರ ಬಾಳಿಗೆ ಹೊಸಬೆಳಕು ಮೂಡಿಸುವ ಸಮಾರಂಭವಾಗಿದೆ. ಆತ್ಮ ಪರಿವರ್ತನೆ ದೃಢಸಂಕಲ್ಪ ಮತ್ತು ಒಳ್ಳೆಯ ಮಾರ್ಗದರ್ಶನದಿಂದ ಉತ್ತಮ ಜೀವನ ಪಡೆಯಲು ಸಾಧ್ಯವಾಗುತ್ತದೆ. ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದೆ. ಗುರುವಿನಲ್ಲಿ ವಿಶ್ವಾಸವಿಟ್ಟು ನಡೆದವರೆಲ್ಲರೂ ಜೀವನದಲ್ಲಿ ಉನ್ನತಿ ಹೊಂದಿದ್ದಾರೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಮುನ್ನಡೆದವರೆಲ್ಲರೂ ಇಂದು ಅತ್ಯಂತ ಕ್ರಿಯಾಶೀಲರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಶ್ರೀ ಜಗದ್ಗುರುಗಳವರ ದರ್ಶನ ಪಾದಸ್ಪರ್ಶನದಿಂದ ತಾವೂ ಸಹ ಪುನರ್ಜನ್ಮ ಪಡೆದಿರುವುದಾಗಿ ತಿಳಿಸಿದರು.
ಪ್ರಶಸ್ತಿ: ಶಾಸಕರಾದ ನಾಡೋಜ ಶ್ರೀ ಜಗದೀಶ ಗುಡಗುಂಟಿಮಠ ಇವರಿಗೆ ‘ವೀರಶೈವ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗುರುಪಾದಯ್ಯ ವೀ. ಸಾಲಿಮಠ ಸವಣೂರು ಪ್ರಶಸ್ತಿ ವಾಚನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಶಾಸಕ ಜಗದೀಶ ಗುಡಗುಂಟಿಯವರು ಮಾತನಾಡಿ, ಸಾಮರಸ್ಯ ಮತ್ತು ಭಾವೈಕೈತೆ ಮೂಡಿಸುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ಸರ್ವರ ಸಹಕಾರವನ್ನು ಸ್ಮರಿಸಿದರು. ಪ್ರಕೃತಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಹೆಚ್ಚುತ್ತಿರುವ ಉಷ್ಣತೆ ನಿಯಂತ್ರಣಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಣ್ಣ ಪುಟ್ಟ ಕಾರ್ಯಗಳಿಗೆ ಬಳಸುತ್ತಿರುವ ಬೈಕಗಳ ಬಳಕೆ ಕಡಿಮೆಯಾಗಬೇಕು. ಬದಲಾಗಿ ಸೈಕಲ್ ಬಳಕೆ ಹೆಚ್ಚಬೇಕು ಎಂದರು. ಇದೇ ಸಂದರ್ಭದಲ್ಲಿ ಉದಯವಾಣಿ ವಿಶೇಷ ಪುರವಣಿಗೆ ಬಿಡುಗಡೆಗೊಳಿಸಲಾಯಿತು.
ಮರುಳಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ನರಸಾಪುರ ನೇತೃತ್ವ ವಹಿಸಿ ವೀರಶೈವ ಧರ್ಮ ಕೇವಲ ಭಾರತದಲ್ಲಿ ಮಾತ್ರವಲ್ಲ. ವಿದೇಶಗಳಲ್ಲಿಯೂ ಈ ಧರ್ಮದ ಆಚರಣೆ ನಡೆಯುತ್ತಿದೆ. ಧರ್ಮದ ಏಳಿಗೆಗಾಗಿ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದರು. ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಶಿಲಾಮಠ ತಾವರೆಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವ ಧರ್ಮದ ಸಮನ್ವಯತೆಯ ಪೀಠವಾಗಿ ಶ್ರೀ ರಂಭಾಪುರಿ ಪೀಠ ಮಾರ್ಗದರ್ಶನ ನೀಡುತ್ತ ಬಂದಿದೆ. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಮ್ಮುಖದ ನುಡಿಗಳನ್ನಾಡಿದರು.
ಗುರುರಕ್ಷೆ: ಹಲವಾರು ಗಣ್ಯರಿಗೆ ದಾನಿಗಳಿಗೆ ಸೇವಾ ಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಕುಮಾರಿ ಸಾನಿಯಾ ಹುನಗುಂದ ಹಾಗೂ ಸಹ ಕಲಾವಿದರು ಭರತ ನಾಟ್ಯ ಪ್ರದರ್ಶನ ನೀಡಿದರು. ಡಾ. ವಾಯ್.ವಾಯ್. ಕೊಕ್ಕನವರ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ವೀರೇಶ ಕಿತ್ತೂರ ಗದಗ ಮತ್ತು ಹುಬ್ಬಳ್ಳಿಯ ಶಿವಸ್ವಾಮಿ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.
ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ಶಿವಾಚಾರ್ಯರಿಂದ, ಸಿಬ್ಬಂದಿ ವರ್ಗದವರಿಂದ, ಖಡ್ಗಧಾರಿಗಳಿಂದ, ದಂಡಧಾರಿಗಳಿಂದ, ಈಟಿಧಾರಿಗಳಿಂದ, ವಾರ್ತಾ ವಿಭಾಗದಿಂದ, ದಸರಾ ಸಮಿತಿಯವರಿಂದ, ಧರ್ಮಾಭಿಮಾನಿಗಳಿಂದ ಕೊನೆಗೆ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರಿಂದ ಆಕರ್ಷಕ ನಜರ್ ಸಮರ್ಪಣೆ ನಡೆಯಿತು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು ನಿರೂಪಿಸಿದರು.
ಆಯುಧ ಪೂಜೆಯ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಸಿಂಹಾಸನ ಪೂಜೆ, ಶ್ರೀ ಪೀಠದ ಆಯುಧಗಳ ಪೂಜೆ ನೆರವೇರಿಸಿ ಕಡಪಟ್ಟಿ ದೊಡ್ಡಬಸವೇಶ್ವರ ಹಾಗೂ ಪವಾಡ ಬಸವೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಶಾಸಕ ಜಗದೀಶ ಗುಡಗುಂಟಿ ಹಾಗೂ ಗಣ್ಯರು ಇದ್ದರು.

