ಬೆಂಗಳೂರು
ಕರ್ನಾಟಕ ಹಾಗೂ ಸೌರಾಷ್ಟ್ರಗಳ ನಡುವೆ ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿದ್ದ ಎಲೀಟ್ ಗುಂಪಿನ ನಾಲ್ಕು ದಿನಗಳ ಲೀಗ್ ಪಂದ್ಯ ಬುಧವಾರ ನೀರಸ ಡ್ರಾನಲ್ಲಿ ಮುಕ್ತಾಯಗೊಂಡಿದೆ.
ಮೊದಲ ಸರದಿಯಲ್ಲಿ ೭ ರನ್ಗಳ ಮಹತ್ವದ ಮುನ್ನಡೆ ಸಂಪಾದಿಸಿದ್ದಕ್ಕಾಗಿ ಸೌರಾಷ್ಟ್ರ ೩ ಪಾಯಿಂಟ್ ಗಳಿಸಿಕೊಂಡಿತು. ಮಹತ್ವದ ಹಂತಗಳಲ್ಲಿ ಕೆಲವು ಕ್ಯಾಚ್ಗಳನ್ನು ನೆಲಕ್ಕೆ ಹಾಕಿದ ಆತಿಥೇಯ ಕರ್ನಾಟಕ ಕೇವಲ ಒಂದೇ ಒಂದು ಪಾಯಿಂಟ್ಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಎಲೀಟ್ `ಬಿ’ ಗುಂಪಿನಲ್ಲಿರುವ ಕರ್ನಾಟಕ ಇದರೊಂದಿಗೆ ತಾನಾಡಿರುವ ಎರಡು ಪಂದ್ಯಗಳಿಂದ ಕೇವಲ ಎರಡೇ ಎರಡು ಪಾಯಿಂಟ್ ಸಂಪಾದಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ೬ನೇ ಸ್ಥಾನಕ್ಕೆ ಕುಸಿದಿದೆ. ಮೊದಲಿನೆರಡು ಸ್ಥಾನಗಳಿಗೆ ಏರಿ ನಾಕೌಟ್ ಪ್ರವೇಶಿಸಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಅದಕ್ಕೆ ಕೆಲವು ನಿಚ್ಚಳ ಗೆಲುವುಗಳ ಅವಶ್ಯಕತೆಯಿದೆ.
ಪಂದ್ಯದ ಕೊನೆಯ ದಿನ ಕರ್ನಾಟಕ ತನ್ನ ಎರಡನೇ ಸರದಿಯಲ್ಲಿ ೭ ವಿಕೆಟ್ಗಳಿಗೆ ೨೪೩ ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ನಂತರ ಉಳಿದ ಅವಧಿಯಲ್ಲಿ ನಿಚ್ಚಳ ಗೆಲುವಿಗಾಗಿ ೨೩೭ ರನ್ ಗಳಿಸಬೇಕಿದ್ದ ಸೌರಾಷ್ಟ್ರ ಅದಕ್ಕಾಗಿ ಯಾವ ಪ್ರಯತ್ನವನ್ನೂ ಮಾಡದೇ ೪೨ ಓವರ್ಗಳಲ್ಲಿ ೨ ವಿಕೆಟ್ಗಳಿಗೆ ೧೩೭ ರನ್ ಗಳಿಸಿ ಪಂದ್ಯ ಮುಕ್ತಾಯಗೊಳಿಸಿತು.
ಸೌರಾಷ್ಟ್ರದ ಪರ ಮೊದಲ ಸರದಿಯಲ್ಲಿ ಕೇವಲ ೧ ರನ್ ಗಳಿಸಿದ್ದ ಚಿರಾಗ್ ಜಾನಿ(ಔಟಾಗದೇ ೬೩, ೧೧೭ ಎಸೆತ, ೭ ಬೌಂಡರಿ, ೨ ಸಿಕ್ಸರ್) ಅಜೇಯ ಅರ್ಧ ಶತಕದೊಂದಿಗೆ ಮಿಂಚಿದರು. ಮನ್ವಂತ್ ಕುಮಾರ ಹಾಗೂ ಶ್ರೇಯಸ್ ಗೋಪಾಲ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಕೆ.ವಿ. ಅನೀಶ(೭೯, ೧೫೯ ಎಸೆತ, ೫ ಬೌಂಡರಿ, ೧ ಸಿಕ್ಸರ್) ಹಾಗೂ ಕೆ.ಎಲ್. ಶ್ರೀಜಿತ್(೫೨, ೭೬ ಎಸೆತ, ೫ ಬೌಂಡರಿ) ಅವರುಗಳ ಬಿರುಸಿನ ಅರ್ಧ ಶತಕ ಮತ್ತು ಪ್ರಾರಂಭಿಕ ಬ್ಯಾಟರ್ ರೋಹನ್ ಪಾಟೀಲ(೩೮), ಕರುಣ ನಾಯರ್(೩೩) ಹಾಗೂ ಮನ್ವಂತ್ ಕುಮಾರ(೩೧) ಅವರುಗಳ ಉಪಯುಕ್ತ ಕಾಣಿಕೆಗಳ ನೆರವಿನಿಂದ ಕರ್ನಾಟಕ ೭ ವಿಕೆಟ್ಗಳಿಗೆ ೨೪೩ ರನ್ ಗಳಿಸಿ ತನ್ನ ಎರಡನೇ ಸರದಿಯನ್ನು ಡಿಕ್ಲೇರ್ ಮಾಡಿಕೊಂಡಿತು.
ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಆಡಿದ ಎಡಗೈ ಸ್ಪಿನ್ನರ್ ಪಾರ್ಥ ಭುತ್(೩/೮೦) ಹಾಗೂ ಸಮಾರ್ ಗಜ್ಜರ್(೨/೫೩) ಸೌರಾಷ್ಟ್ರ ಪರ ಯಶಸ್ವಿ ಬೌಲರ್ಗಳು.
ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: ೧೧೧.೩ ಓವರ್ಗಳಲ್ಲಿ ೩೪೨ ಹಾಗೂ ೬೪.೧ ಓವರ್ಗಳಲ್ಲಿ ೭ ವಿಕೆಟ್ಗಳಿಗೆ ೨೪೩ ಡಿಕ್ಲೇರ್ಡ್, ಸೌರಾಷ್ಟ್ರ: ೧೦೮.೩ ಓವರ್ಗಳಲ್ಲಿ ೩೪೯ ಹಾಗೂ ೪೨ ಓವರ್ಗಳಲ್ಲಿ ೨ ವಿಕೆಟ್ಗಳಿಗೆ ೧೩೭. ಫಲಿತಾಂಶ: ಪಂದ್ಯ ಡ್ರಾ. ಪಾಯಿಂಟ್ಗಳು: ಸೌರಾಷ್ಟ್ರ-೩, ಕರ್ನಾಟಕ

