ನಮನ್ ‘ಧೀರ’ ಆಟ, ಶ್ರೇಯಸ್ ಬಳಗಕ್ಕೆ ಮಣಿದ ಕೀವೀಸ್ ದಂಡು, ಭಾರತದ ಯಶಸ್ವಿ ರೆಕಾರ್ಡ್ ಚೇಸ್’

ಹಂಚಿಕೊಳ್ಳಿ

ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್)
ಪ್ರಾರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಬ್ಬರದ ಅರ್ಧ ಶತಕ ಹಾಗೂ ಹೊಸ ಹುಡುಗ’ ನಮನ್ ಧೀರ್ ಅವರ ಸಮಯೋಚಿತ, ಅಷ್ಟೇ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಗುರುವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ’ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ೪ ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೧-೦ ಯಿಂದ ಮುನ್ನಡೆಯಿತು.

ಭಾರತದ ಪಾಲಿಗೆ ಇದು ದಾಖಲೆಚೇಸ್’. ಇದಕ್ಕೂ ಮೊದಲು ಭಾರತ ೨೦೨೩ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾದ ಎದುರು ಹಾಗೂ ಇದೇ ವರ್ಷ ರಾಯಪುರದಲ್ಲಿ ನ್ಯೂಜಿಲೆಂಡ್ ಎದುರು ತಲಾ ೨೦೯ ರನ್‌ಗಳ ಗುರಿಯ ಬೆನ್ನಟ್ಟಿ ಯಶ ಕಂಡಿತ್ತು.

ಸಂಜು-ನಮನ್ ಅಬ್ಬರ:
ಪಂದ್ಯದ ಆಟಗಾರ’ನ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್ ೩೩ ಎಸೆತಗಳಲ್ಲಿ ೮ ಬೌಂಡರಿ ಹಾಗೂ ೪ ಸಿಕ್ಸರ್‌ಗಳಿದ್ದ ೬೭ ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯೆನಿಸಿದರೆ, ವೆಸ್ಟ್ ಇಂಡೀಸ್ ಎದುರಿನ ಇತ್ತೀಚಿನ ಸರಣಿಯಶೋಧ’ ಎಂದೇ ಎನಿಸಿಕೊಂಡಿರುವ ನಮನ್ ಧೀರ್ ಮಹತ್ವದ ಹಂತದಲ್ಲಿ ಕೇವಲ ೧೫ ಎಸೆತಗಳಲ್ಲಿ ೫ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ಮಿಂಚಿನ ಅಜೇಯ ೪೨ ರನ್ ಹಣಿದು ಎರಡೇ ಎರಡು ಎಸೆತಗಳಿದ್ದಾಗ ಭಾರತಕ್ಕೆ ಸ್ಮರಣೀಯ ಗೆಲುವು ತಂದಿತ್ತರು.

ಹ್ಯಾಗ್ಲೆ ಓವಲ್‌ನಲ್ಲಿ ಗೆಲ್ಲಲು ದಾಖಲೆಯ ೨೨೬ ರನ್ ಗಳಿಸಬೇಕಿದ್ದ ಭಾರತಕ್ಕೆ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ(೨೯, ೧೨ ಎಸೆತ, ೨ ಬೌಂಡರಿ, ೩ ಸಿಕ್ಸರ್) ಭರ್ಜರಿ ಆರಂಭವನ್ನೇ ನೀಡಿದರು. ಕೀವೀಸ್ ಬೌಲರ್‌ಗಳನ್ನು ಚೆಂಡಾಡಿದ ಸಂಜು-ಅಭಿ ಜೋಡಿ ಮೊದಲ ವಿಕೆಟ್‌ಗೇ ಕೇವಲ ೫.೫ ಓವರ್‌ಗಳಲ್ಲಿ ೯೩ ರನ್ ಪೇರಿಸಿಕೊಟ್ಟಿತು.

ಅಭಿಷೇಕ ನಿರ್ಗಮನದ ನಂತರ ಕೇವಲ ೭ ರನ್‌ಗಳ ಅಂತರದಲ್ಲಿ ಭಾರತ ತಂಡ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ(೬) ಹಾಗೂ ಇಶಾನ್ ಕಿಶನ್(೧) ವಿಕೆಟ್‌ಗಳನ್ನು ಕಳೆದುಕೊಂಡಾಗ ಪಂದ್ಯ ಆತಿಥೇಯರ ಕಡೆ ವಾಲಿತ್ತು. ಆದರೆ ಆರನೇ ಕ್ರಮಾಂಕದಲ್ಲಿ ಆಟಕ್ಕಿಳಿದ ಅಕ್ಸರ್ ಪಟೇಲ್(೨೪, ೧೪ ಎಸೆತ, ೩ ಬೌಂಡರಿ, ೧ ಸಿಕ್ಸರ್) ಸಹ ಮಹತ್ವದ ಕಾಣಿಕೆ ನೀಡಿ ಭಾರತ ಪಂದ್ಯದಲ್ಲುಳಿಯುವಂತೆ ನೋಡಿಕೊಂಡರು.
ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಪತನದ ನಂತರವೂ ಎದೆಗುಂದದೇ ದಿಟ್ಟ ಆಟವಾಡಿದ ನಮನ್ ಧೀರ್ ಕೊನೆಯ ಓವರ್ ಎಸೆದ ಮ್ಯಾಟ್ ಹೆನ್ರಿ ಅವರ ೪ನೇ ಎಸೆತದಲ್ಲಿ ಸಿಕ್ಸರ್ ಗಿಟ್ಟಿಸುವ ಮೂಲಕ ಗೆಲುವಿನ ಕೇಕೆ ಹಾಕಿದರು.

ಮೈಕಲ್ ಬ್ರೇಸ್‌ವೆಲ್(೨/೩೭) ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್(೨/೩೯) ನ್ಯೂಜಿಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್‌ಗಳು.

ಕೀವೀಸ್ ಉತ್ತಮ ಮೊತ್ತ:
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೀವೀಸ್ ತಂಡ ಗ್ಲೆನ್ ಫಿಲಿಪ್ಸ್(೮೨, ೪೦ ಎಸೆತ, ೮ ಬೌಂಡರಿ, ೩ ಸಿಕ್ಸರ್) ಅವರ ಅಬ್ಬರದ ಅರ್ಧ ಶತಕ ಹಾಗೂ ಪ್ರಾರಂಭಿಕ ಬ್ಯಾಟರ್ ಫಿನ್ ಆ್ಯಲೆನ್(೪೫, ೨೪ ಎಸೆತ, ೫ ಬೌಂಡರಿ, ೨ ಸಿಕ್ಸರ್), ಬೆವಾನ್ ಜಾಕೊಬ್ಸ್(೩೧, ೧೬ ಎಸೆತ, ೩ ಸಿಕ್ಸರ್), ಡೆರಿಲ್ ಮಿಚೆಲ್(೨೮, ೧೯ ಎಸೆತ, ೨ ಬೌಂಡರಿ, ೧ ಸಿಕ್ಸರ್) ಮತ್ತು ಟಿಮ್ ಸೈಫರ್ಟ್(೨೪, ೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್) ಅವರುಗಳ ಉಪಯುಕ್ತ ಕೊಡುಗೆಗಳ ನೆರವಿನಿಂದ ೪ ವಿಕೆಟ್‌ಗಳಿಗೆ ೨೨೫ರ ಮೊತ್ತ ದಾಖಲಿಸಿತು.

ಭಾರತದ ಪರ ವೇಗಿ ಮಯಾಂಕ ಯಾದವ(೧/೪೦), ಅರ್ಷದೀಪ್ ಸಿಂಗ್(೧/೪೫) ಹಾಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್(೧/೫೧) ಬೌಲಿಂಗ್ ಗೌರವ ಹಂಚಿಕೊಂಡರು. ಎರಡೂ ತಂಡಗಳ ನಡುವಿನ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯ ಶನಿವಾರ(ಅಕ್ಟೋಬರ್ ೨೪) ನಡೆಯಲಿದೆ.

ಸಂಕ್ಷಿಪ್ತ ಸ್ಕೋರುಗಳು: ನ್ಯೂಜಿಲೆಂಡ್: ೨೦ ಓವರ್‌ಗಳಳ್ಲಿ ೪ ವಿಕೆಟ್‌ಗಳಿಗೆ ೨೨೫, ಭಾರತ: ೧೯.೪ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೨೩೦. ಫಲಿತಾಂಶ: ಭಾರತಕ್ಕೆ ೪ ವಿಕೆಟ್‌ಗಳ ಗೆಲುವು ಹಾಗೂ ಸರಣಿಯಲ್ಲಿ ೧-೦ ಮುನ್ನಡೆ. ಪಂದ್ಯದ ಆಟಗಾರ: ಸಂಜು ಸ್ಯಾಮ್ಸನ್(ಭಾರತ).


ಹಂಚಿಕೊಳ್ಳಿ

Leave a Reply

Your email address will not be published. Required fields are marked *