ಬದುಕಿನ ಸಾರ್ಥಕತೆ ಆಯುಷ್ಯದಲ್ಲಿಲ್ಲ ಅರಿವಿನಲ್ಲಿದೆ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಶಿಕಾರಿಪುರ
ಮನುಷ್ಯನಾಗಿ ಹುಟ್ಟುವುದು ನಮ್ಮ ಕೈಯಲ್ಲಿಲ್ಲ. ಆದರೆ, ಉತ್ತಮ ಮನುಷ್ಯನಾಗಿ ಬದುಕುವುದು ನಮ್ಮ ಕೈಯಲ್ಲಿದೆ. ಧರ್ಮವನ್ನು ಅರಿತು ಆ ಮಾರ್ಗದಲ್ಲಿ ನಡೆದು ಬದುಕನ್ನು ಬಲಗೊಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಬದುಕಿನ ಸಾರ್ಥಕತೆ ಆಯುಷ್ಯದಲ್ಲಿಲ್ಲ ಅರಿವಿನಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಂಗಳವಾರ ತಾಲೂಕಿನ ದಿಂಡದಹಳ್ಳಿ ಹಿರೇಮಠದ ಲಿಂ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ 24ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜನ್ಮವು ಕೇವಲ ಹುಟ್ಟಿ ಬದುಕಿ ಮರೆಯಾಗುವುದಕಲ್ಲ. ಪರೋಪಕಾರ ದಯೆ ಧರ್ಮ ನಿಷ್ಠೆ ಸತ್ಯ ಸೇವೆ ಮತ್ತು ಶಿವಭಕ್ತಿಯ ಮೂಲಕ ಬದುಕನ್ನು ಪವಿತ್ರಗೊಳಿಸುವುದಕ್ಕಾಗಿದೆ. ಮನುಷ್ಯನ ನಿಜವಾದ ಹಿರಿಮೆ ಅವನ ಅಧಿಕಾರದಲ್ಲಾಗಲಿ ಸಂಪತ್ತಿನಲ್ಲಾಗಲಿ ಇಲ್ಲ. ಅವನ ಸತ್ಕಾರ್ಯಗಳಲ್ಲಿ ಸನ್ನಡೆಯಲ್ಲಿ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಲ್ಲಿ ಅಡಗಿದೆ. ನಾವು ಎಷ್ಟು ಕಾಲ ಬದುಕಿದ್ದೇವೆ ಎಂಬುದಕ್ಕಿಂತ ಬದುಕಿದ ಕಾಲದಲ್ಲಿ ಎಷ್ಟು ಒಳ್ಳೆಯತನವನ್ನು ಬೆಳೆಸಿದ್ದೇವೆ ಎಂಬುದು ಮುಖ್ಯ. ಹುಟ್ಟು ಸಹಜ ಆದರೆ, ಮೃತ್ಯು ನಿಶ್ಚಿತ. ಹುಟ್ಟು ಮತ್ತು ಮೃತ್ಯುವಿನ ಮಧ್ಯದ ಬದುಕು ಶ್ರೀಮಂತಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿಯಾಗಿದೆ ಎಂದರು.

ಲಿಂಗೈಕ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳವರ ಆದರ್ಶಗಳನ್ನು ಸ್ಮರಿಸುವುದಷ್ಟೇ ನಮ್ಮ ಕರ್ತವ್ಯವಲ್ಲ. ಅವರು ತೋರಿದ ಸನ್ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಶಿವಾನಂದ ಶಿವಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿಯನ್ನು ಮತ್ತು ಆಚಾರ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಿದ ಶ್ರೇಯಸ್ಸು ಅವರದು. ಗುರು ಪೀಠಗಳಲ್ಲಿ ಅಪಾರಭಕ್ತಿ ಶ್ರದ್ಧೆ ಇಟ್ಟುಕೊಂಡ ಶ್ರೀಗಳು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ದಶಧರ್ಮ ಸೂತ್ರಗಳನ್ನು ಪರಿಪಾಲಿಸಿ ಭಕ್ತ ಸಂಕುಲಕ್ಕೆ ದಿಕ್ಸೂಚಿಯಾಗಿದ್ದರು. ಅಂತಹ ಶ್ರೀಗಳ ಪುಣ್ಯ ಸ್ಮರಣೋತ್ಸವ ಸಮಾರಂಭವನ್ನು ಇಂದಿನ ಪಟ್ಟಾಧ್ಯಕ್ಷರಾದ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಷ್ಮೆ ಶಾಲು ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿದ ಬಿ.ಜೆ.ಪಿ.ರಾಜ್ಯಾಧ್ಯಕ್ಷ-ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಲಿಂ.ಶಿವಾನಂದ ಶಿವಾಚಾರ್ಯರನ್ನು ಸ್ಮರಿಸುವುದು ಎಂದರೆ ನೆನಪಿಸಿಕೊಳ್ಳುವುದಲ್ಲ. ಅವರ ಧರ್ಮನಿಷ್ಠೆ ಸನ್ನಡತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಅರಿತುಕೊಳ್ಳುವುದಾಗಿದೆ. ಮಾತು ಹೇಳುವುದು ಸುಲಭ. ಆದರೆ ಆ ಮಾತಿನಂತೆ ನಡೆದು ತೋರಿಸುವುದು ಕಷ್ಟ. ಧರ್ಮದ ಬಗ್ಗೆ ಮಾತನಾಡುವುದು ಮಾತ್ರವಲ್ಲ. ಧರ್ಮವನ್ನು ಬದುಕಿನಲ್ಲಿ ಆಚರಿಸುವುದೇ ನಿಜವಾದ ಧರ್ಮನಿಷ್ಠೆ. ಅಂತಹ ಆದರ್ಶ ಜೀವನವನ್ನು ಶ್ರೀಗಳವರು ಹೊಂದಿದ್ದರು. ಅವರು ಬೋಧಿಸಿದ ಸತ್ಯ ಪ್ರಾಮಾಣಿಕತೆ ಕರುಣೆ ಶಿವ ಮನೋಭಾವ ಎಲ್ಲರಲ್ಲೂ ಬೆಳೆದು ಬರಬೇಕು. ನಮ್ಮ ಜೀವನದಲ್ಲಿ ಮಾತು ಮುತ್ತಿನಂತಿರಲಿ. ನಡೆ ಇನ್ನೊಬ್ಬರಿಗೆ ಮಾದರಿಯಾಗಿರಲಿ. ಮನಸ್ಸು ನಿರ್ಮಲವಾಗಿದ್ದು ಸಮಾಜಕ್ಕೆ ಬೆಳಕಾಗಿರಲಿ ಎಂದರು.

ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ಮಾತನಾಡಿ, ಲಿಂಗೈಕ್ಯ ಶ್ರೀ ಶಿವಾನಂದ ಶಿವಾಚಾರ್ಯರನ್ನು ಸ್ಮರಿಸಿಕೊಳ್ಳುವುದೇ ನಮ್ಮೆಲ್ಲರ ಸೌಭಾಗ್ಯ. ಮಲೆನಾಡಿನ ಪ್ರಾಂತದಲ್ಲಿ ಕೊಟ್ಟ ಸಂಸ್ಕಾರ ತೋರಿದ ದಾರಿ ನಮ್ಮೆಲ್ಲರಿಗೆ ಸದಾ ದಾರಿದೀಪ. ಶ್ರೀಗಳ ಸ್ಮರಣೆ ಮಾಡಿದರೆ ಸಾಲದು. ಆದರ್ಶಗಳನ್ನು ಪರಿಪಾಲಿಸಿಕೊಂಡು ಬರುವುದು ನಮ್ಮೆಲ್ಲರ ಧ್ಯೇಯವಾಗಬೇಕು. ಪ್ರತಿಯೊಬ್ಬ ಜೀವಿಯಲ್ಲಿಯೂ ಶಿವತತ್ವವನ್ನು ಕಾಣುವುದು ದುಃಖಿತರ ಕಣ್ಣೀರನ್ನು ಒರೆಸುವುದು. ಅಜ್ಞಾನವನ್ನು ದೂರ ಮಾಡುವುದು ಮತ್ತು ಸಮಾಜದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಸಾಮರಸ್ಯಗಳನ್ನು ಬೆಳೆಸುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ. ಜೀವನ ಎಂಬುದು ದೇವರು ನಮಗೆ ಕರುಣಿಸಿದ ಅಮೂಲ್ಯ ಕೊಡುಗೆ. ಬದುಕಿನ ಮೌಲ್ಯವನ್ನು ಅರಿತು ಸಂಬಂಧಗಳ ಮಹತ್ವವನ್ನು ತಿಳಿದು ಧರ್ಮದ ಹಾದಿಯಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವ ಜೀವನದ ಗುರಿ ಏನು ಎಂಬುದನ್ನು ಅರಿತು ಬಾಳಬೇಕು. ಹಿರಿಯರ ಅನುಭವಗಳನ್ನು ಗೌರವಿಸಿ ಗುರು ಮಾರ್ಗದರ್ಶನ ಪರಿಪಾಲಿಸಿ ನಡೆದಾಗ ಜೀವನ ಸಾರ್ಥಕಗೊಳ್ಳುವುದು. ಆದರೆ ಮನುಷ್ಯ ತನ್ನ ಮೂಲ ಸಂಸ್ಕಾರ ಮತ್ತು ಮಾನವೀಯತೆಯನ್ನು ಮರೆತಾಗ ಬದುಕಿನ ದಾರಿ ತಪ್ಪುತ್ತದೆ. ಅಹಂಕಾರ ಬೆಳೆದಾಗ ಸಂಬಂಧಗಳು ದೂರವಾಗುತ್ತವೆ. ಸ್ವಾರ್ಥ ಹೆಚ್ಚಾದಾಗ ಪ್ರೀತಿ ಕಡಿಮೆಯಾಗುತ್ತದೆ. ವಿವೇಕ ಮರೆಯಾದಾಗ ಜೀವನವೇ ದುರ್ಬಲವಾಗುತ್ತದೆ. ಲಿಂಗೈಕ್ಯ ಶ್ರೀಗಳವರ ಕಠೋರ ನಿಲುವು ಮತ್ತು ಧರ್ಮದ ಆಚರಣೆಯಿಂದಾಗಿ ಅವರ ಸ್ಮರಣೆ ಇಂದಿಗೂ ಜನರ ಮನದಾಳದಲ್ಲಿ ಹಸಿರಾಗಿದೆ ಎಂದರು.

ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗೈಕ್ಯ ಶ್ರೀಗಳ ಆದರ್ಶ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಅವರು ಗುರು ಪೀಠಗಳಲ್ಲಿ ಅಪಾರವಾದ ಶ್ರದ್ಧೆಯನ್ನಿಟ್ಟಿದ್ದರು. ಅವರು ಆಗಲಿ 24 ವರ್ಷಗಳಾದರೂ ಅವರು ಮಾಡಿದ ಸತ್ಕಾರ್ಯಗಳು ಎಂದೆಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿದೆ ಎಂದರು.

ಸಮಾರಂಭದ ಸಮ್ಮುಖ ವಹಿಸಿದ ಬೀರೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಧರ್ಮದಿಂದ ಬಾಳಿದರೆ ವ್ಯಕ್ತಿತ್ವ ವಿಕಾಸ ಗೊಳ್ಳುವುದು. ವೀರಶೈವ ಧರ್ಮದಲ್ಲಿ ಸಂಸ್ಕಾರ ಸಂಸ್ಕೃತಿಗೆ ಕೊಟ್ಟ ಮಹತ್ವ ದೊಡ್ಡದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರಧಾರೆಗಳನ್ನು ಲಿಂ. ಶ್ರೀ ಶಿವಾನಂದ ಶಿವಾಚಾರ್ಯರು ಪರಿಪಾಲಿಸಿ ಭಕ್ತ ಸಮುದಾಯಕ್ಕೆ ಕಣ್ಮಣಿಗಳಾಗಿದ್ದರು ಎಂದರು.

ಸಮಾರಂಭಕ್ಕೂ ಮುನ್ನ ಸಂಸದ ಬಿ.ವೈ. ರಾಘವೇಂದ್ರ ಅವರು ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ತೊಗರ್ಸಿ ಮಳೇಹಿರೇಮಠದ ಮಹಾಂತದೇಶಿಕೇಂದ್ರ ಶಿವಾಚಾರ್ಯರು ಉಪಸ್ಥಿತರಿದ್ದರು. ರಾಣೆಬೆನ್ನೂರಿನ ಪ್ರಭುಲಿಂಗಸ್ವಾಮಿ ಕರ್ಜಿಗಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಶ್ರೀಮಠದಿಂದ ದಾರುಕಾನಂದ ಶಾಸ್ತ್ರಿಗಳಿಗೆ ಶಿವಾನಂದ ಜ್ಯೋತಿಷ್ಯ ರತ್ನ, ಮಾಜಿ ಸೈನಿಕ ಎಲ್. ಶಾಂತಮೂರ್ತಿ ಇವರಿಗೆ ಶಿವಾನಂದ ಸೇವಾ ಭೂಷಣ, ಹರತಾಳು ಹಾಲಪ್ಪಗೌಡರಿಗೆ ಶಿವಾನಂದ ಜ್ಯೋತಿ, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಇವರಿಗೆ ಶಿವಾನಂದ ಕರುಣೆಯ ಕಂದ, ವರದಿಗಾರ ವಿಜಯಕುಮಾರ ನಾಡಿಗರ್ ಇವರಿಗೆ ಶಿವಾನಂದ ಮಾಧ್ಯಮ ರತ್ನ, ಮುತ್ತಪ್ಪ ದೂದಿಹಳ್ಳಿ ಇವರಿಗೆ ಶಿವಾನಂದ ಕೃಪಾ ಕಾರುಣ್ಯ. ಶಿಲ್ಪಿ ಕಿರಣ ನಾಗವಂದ ಇವರಿಗೆ ಶಿವಾನಂದ ಶಿಲ್ಪ ಶಿಖರ ಪ್ರಶಸ್ತಿಗಳನ್ನು ಕೊಡಲಾಯಿತು.

ಅನೇಕ ಗಣ್ಯರು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ ಕಡೇನಂದಿಹಳ್ಳಿ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಜರುಗಿತು. ನಂತರ ಅನ್ನ ದಾಸೋಹ ನೆರವೇರಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *