• ರಘುಸುತ
ವೆಲ್ಲಿಂಗ್ಟನ್
ಅಭಿಷೇಕ್ ಶರ್ಮಾ ಹಾಗೂ ಹದಿಹರೆಯದ ವೈಭವ್ ಸೂರ್ಯವಂಶಿ ಅವರ ಹೊಸ ಜೋಡಿ ಮಂಗಳವಾರ ನಡೆದ ನ್ಯೂಜಿಲೆಂಡ್ ಎದುರಿನ ಮುರನೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಕ್ಷರಶಃ ರಣಕೇಕೆ ಹಾಕಿದೆ.
ಮೊದಲ ಎಸೆತದಿಂದಲೇ ಕೀವೀಸ್ ಬೌಲರ್ಗಳನ್ನು ಮನಬಂದಂತೆ ಚೆಂಡಾಡಿದ ಈ ಜೋಡಿ ಹಲವು ವಿಶ್ವ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಅದರಲ್ಲೂ ಟಿ೨೦ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿಯ ವಿಶ್ವಪವರ್ ಪ್ಲೇ’ ದಾಖಲೆ ಹೇಳಹೆಸರಿಲ್ಲದಂತೆ ನುಚ್ಚುನೂರಾಗಿದೆ.

ನ್ಯೂಜಿಲೆಂಡ್ ದಾಳಿಯೆದುರು ಮಂಗಳವಾರ ಅಭಿಷೇಕ್-ವೈಭವ್ ಬ್ಯಾಟಿನಿಂದ ಮೊದಲ ೬ ಓವರ್ಗಳಲ್ಲಿ ಹರಿದಿದ್ದು ಬರೋಬ್ಬರಿ ೧೧೮ ರನ್. ಅದೂ ವಿಕೆಟ್ ನಷ್ಟವಿಲ್ಲದೇ ಇದಕ್ಕೂ ಮೊದಲು ಈ ದಾಖಲೆ ರೊಮೇನಿಯಾದ ಹೆಸರಿನಲ್ಲಿತ್ತು. ೨೦೨೧ರಲ್ಲಿ ಸೆರ್ಬಿಯಾ ಎದುರು ರೊಮೇನಿಯಾ ವಿಕೆಟ್ ನಷ್ಟವಿಲ್ಲದೇ ೧೧೬ ರನ್ ಬಾರಿಸಿತ್ತು.
ಈ ಹಂತದಲ್ಲಿ ಅಭಿಷೇಕ್ ೨೦ ಎಸೆತಗಳಲ್ಲಿ ಅಜೇಯ ೫೭ ರನ್ ಸಿಡಿಸಿದ್ದರೆ ವೈಭವ್ ೧೭ ಎಸೆತಗಳಲ್ಲಿ ಔಟಾಗದೇ ೪೪ ರನ್ ಹಣಿದಿದ್ದರು. ಭಾರತ ಕೇವಲ ಐದು ಓವರ್ಗಳಲ್ಲಿ ೧೦೦ರ ಮೊತ್ತ ತಲುಪಿತ್ತು. ಇದು ವಿಶ್ವದಲ್ಲಿ ಎರಡನೇ ಅತಿ ವೇಗದ ಹಂಡ್ರೆಡ್’!! ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಭಾರತವೇ ನಂಬರ್ ೧.

ಭಾರತ ಇಂದು ಮೊದಲ ೫೦ ರನ್ ಗಳಿಸಿದ್ದು ಕೇವಲ ೨.೨ ಓವರ್ಗಳಲ್ಲಿ!! ಇದು ವಿಶ್ವದ ಜಂಟಿ ಅತೀ ವೇಗದ ೫೦!! ಕೊನೆಗೂ ಭಾರತ ಗೆಲ್ಲಲು ಬೇಕಿದ್ದ ೧೯೯ ರನ್ಗಳನ್ನು ಕೇವಲ ೧೩.೨ ಓವರ್ಗಳಲ್ಲಿ ಕಲೆ ಹಾಕಿತು. ಪಂದ್ಯದ ಆಟಗಾರ’ನ ಪ್ರಶಸ್ತಿಗೆ ಭಾಜನರಾದ ಅಭಿಷೇಕ್ ಶರ್ಮಾ ೩೮ ಎಸೆತಗಳಲ್ಲಿ ೯ ಬೌಂಡರಿ ಹಾಗೂ ೧೧ ಸಿಕ್ಸರ್ಗಳಿದ್ದ ೧೧೩ ರನ್ ಹಣಿದರೆ, ಪ್ರಾರಂಭಿಕ ಬ್ಯಾಟರ್ ಆಗಿ `ಬಡ್ತಿ’ ಪಡೆದಿದ್ದ ವೈಭವ್ ಸೂರ್ಯವಂಶಿ ೧೯ ಎಸೆತಗಳಲ್ಲಿ ೪ ಬೌಂಡರಿ ಹಾಗೂ ೪ ಸಿಕ್ಸರ್ಗಳಿದ್ದ ೪೫ ರನ್ ಹಣಿದರು.
ಇನ್ನೂ ೪೦ ಎಸೆತಗಳು ಬಾಕಿಯಿದ್ದಾಗ ಗೆಲುವಿನ ಕೇಕೆ ಹಾಕಿದ್ದು ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ಪಂದ್ಯದಲ್ಲಿ ಇನ್ನೊಂದು ವಿಶ್ವ ದಾಖಲೆ. ಹಳೆಯ ದಾಖಲೆಯೂ ಕೀವೀಸ್ ಎದುರೇ ಇದೇ ವರ್ಷ ರಾಯಪುರದಲ್ಲಿ ಬಂದಿತ್ತು. ಆಗ ಭಾರತ ಗೆಲ್ಲಲು ಬೇಕಿದ್ದ ೨೦೯ ರನ್ಗಳನ್ನು ೨೮ ಎಸೆತಗಳು ಬಾಕಿಯಿದ್ದಾಗ ಸಂಪಾದಿಸಿತ್ತು.

