ವಡೋದರ
ಮೊದಲು ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರ ಚೊಚ್ಚಲ ಫೈಫರ್’, ನಂತರ ಶಫಾಲಿ ವರ್ಮಾ ಅವರ ಬಿರುಗಾಳಿ ವೇಗದ ಅರ್ಧ ಶತಕ…..ಪರಿಣಾಮ ಭಾರತದ ವನಿತೆಯರಿಗೆ ಪ್ರವಾಸಿ ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ೮ ವಿಕೆಟ್ಗಳ ಜಯಭೇರಿ ಹಾಗೂ ಸರಣಿಯಲ್ಲಿ ೩-೦ ಕ್ಲೀನ್ ಸ್ವೀಪ್.
ಇಲ್ಲಿಯ ಬಿಸಿಎ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ೩೯.೫ ಓವರ್ಗಳಲ್ಲಿ ಕೇವಲ ೧೩೧ಕ್ಕೆ ಕುಸಿದ ನಂತರ ಭಾರತ ಇನ್ನೂ ೩೩ ಓವರ್ಗಳ ಆಟ ಬಾಕಿಯಿರುವಂತೆಯೇ ಗುರಿ ತಲುಪಿ ಗೆಲುವಿನ ಕೇಕೆ ಹಾಕಿತು. ವೈಷ್ಣವಿ ಶರ್ಮಾಪಂದ್ಯದ ಆಟಗಾರ್ತಿ’ ಎನಿಸಿದರೆ ಪ್ರತಿಕಾ ರಾವಲ್ ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಭಾರತದ ವನಿತೆಯರು ಇದಕ್ಕೂ ಮೊದಲು ನಡೆದ ಮೂರು ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನೂ ೩-೦ ಅಂತರದಿಂದಲೇ ಬಾಚಿಕೊಂಡಿದ್ದರು. ಗೆಲ್ಲಲು ೧೩೨ ರನ್ಗಳ ಗುರಿಯ ಬೆನ್ನು ಹತ್ತಿದ ಭಾರತ ಯಾಸ್ತಿಕಾ ಭಾಟಿಯಾ(೦) ಹಾಗೂ ಹರ್ಲೀನ್ ಡಿಯೋಲ್(೧೯) ವಿಕೆಟ್ಗಳನ್ನು ಬೇಗನೇ ಕಳೆದುಕೊಂಡಿತಾದರೂ ಮೂರನೇ ವಿಕೆಟ್ಗೆ ಜೊತೆಗೂಡಿದ ಪ್ರತಿಕಾ ರಾವಲ್ ಹಾಗೂ ಶಫಾಲಿ ವರ್ಮಾ ನೋಡನೊಡುತ್ತಿದ್ದಂತೆಯೇ ಪಂದ್ಯವನ್ನು ಮುಗಿಸಿಯೇ ಬಿಟ್ಟರು.

ಪ್ರತಿಕಾ ರಾವಲ್ ೫೬ ಎಸೆತಗಳಲ್ಲಿ ೪ ಬೌಂಡರಿ ಹಾಗೂ ೩ ಸಿಕ್ಸರ್ಗಳಿದ್ದ ೫೯ ರನ್ ಹಣಿದು ಔಟಾಗದೇ ಉಳಿದರೆ ಅಭಿಷೇಕ್ ಶರ್ಮಾಸ್ಟೆöÊಲ್’ನಲ್ಲೇ ಅಬ್ಬರಿಸಿ ಬೊಬ್ಬಿರಿದ ಶಫಾಲಿ ವರ್ಮಾ ಕೇವಲ ೨೬ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೩ ಸಿಕ್ಸರ್ ಸಹಿತದ ೫೧ ರನ್ ಸಿಡಿಸಿ ಅಜೇಯರಾಗುಳಿದರು. ಇವರಿಬ್ಬರೂ ಮುರಿಯದ ೩ನೇ ವಿಕೆಟ್ ಜೊತೆಯಾಟದಲ್ಲಿ ೫೦ ಎಸೆತಗಳಲ್ಲಿ ೭೪ ರನ್ ಪೇರಿಸಿದರು.
ಶಫಾಲಿ ವರ್ಮಾ ಅವರ ಈ ಆರ್ಧ ಶತಕ ಭಾರತದ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತೀ ವೇಗದ ಅರ್ಧ ಶತಕವಾಗಿದೆ. ಇದಕ್ಕೂ ಮೊದಲು ರಿಚಾ ಘೋಷ್ ೨೦೨೨ರಲ್ಲಿ ನ್ಯೂಜಿಲೆಂಡ್ ಎದುರು ೨೬ ಎಸೆತಗಳಲ್ಲಿ ೫೦ ರನ್ ಬಾರಿಸಿದ್ದರು. ಶಫಾಲಿ ಆ ದಾಖಲೆಯನ್ನು ಬುಧವಾರ ಸರಿಗಟ್ಟಿದರು.
ಅತೀ ವೇಗದ ಅರ್ಧ ಶತಕದ ದಾಖಲೆ ನಾಯಕಿ ಸ್ಮೃತಿ ಮಂಧಾನ ಅವರ ಹೆಸರಿನಲ್ಲಿದೆ. ೨೦೨೫ರಲ್ಲಿ ಸ್ಮೃತಿ ಆಸ್ಟ್ರೇಲಿಯಾ ಎದುರು ಕೇವಲ ೨೩ ಎಸೆತಗಳಲ್ಲಿ ಅರ್ಧ ಶತಕ ಚಚ್ಚಿದ್ದರು. ಶಪಾಲಿ ಸಹ ಪ್ರಸಕ್ತ ಸರಣಿಯಲ್ಲಿ ತಮ್ಮ ಹಳೆಯ ದಾಖಲೆ ಮುರಿದಿದ್ದಾರೆ. ಈ ಹಿಂದೆ ಇದೇ ಸರಣಿಯಲ್ಲಿ ಅವರು ೨೯ ಎಸೆತಗಳಲ್ಲಿ ಫಿಪ್ಟಿ’ ಬಾರಿಸಿದ್ದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ(೫/೩೯) ಅವರ ಚೊಚ್ಚಲಫೈಫರ್’ ಹಾಗೂ ವೇಗಿಗಳಾದ ಸಯಾಲಿ ಸತ್ಘರೆ(೨/೧೧) ಮತ್ತು ಕ್ರಾಂತಿ ಗೌಡ(೨/೨೩) ಅವರ ಮಾರಕ ದಾಳಿಯೆದುರು ಕುಸಿದು, ಮೊಡೆಸ್ಟರ್ ಮುಪಚಿಕ್ವಾ(೩೭) ಹಾಗೂ ಜೊಸೆಫಿನ್ ನಕೊಮೊ(೩೫) ಅವರ ಹೋರಾಟದ ಸರದಿಗಳ ಹೊರತಾಗಿಯೂ ೧೩೧ಕ್ಕೆ ಸರ್ವಪತನ ಕಂಡಿತು.
ಅಂತಿಮ ಸ್ಕೋರುಗಳು: ಜಿಂಬಾಬ್ವೆ: ೩೯.೫ ಓವರ್ಗಳಲ್ಲಿ ೧೩೧, ಭಾರತ: ೧೭ ಓವರ್ಗಳಲ್ಲಿ ೨ ವಿಕೆಟ್ಗಳಿಗೆ ೧೩೩. ಫಲಿತಾಂಶ: ಭಾರತಕ್ಕೆ ೮ ವಿಕೆಟ್ಗಳ ಜಯ ಹಾಗೂ ಸರಣಿಯಲ್ಲಿ ೩-೦ ಗೆಲುವು. ಪಂದ್ಯದ ಆಟಗಾರ್ತಿ: ವೈಷ್ಣವಿ ಶರ್ಮಾ(ಭಾರತ) ಹಾಗೂ ಸರಣಿ ಶ್ರೇಷ್ಠ: ಪ್ರತಿಕಾ ರಾವಲ್(ಭಾರತ).

