ನಾದಮೋದವೈಭವಂನಲ್ಲಿ ಕಲಾಸೇವೆಯ ವೈಭವ

ಹಂಚಿಕೊಳ್ಳಿ

ಧಾರವಾಡ

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ಆಯೋಜಿಸಲಾಗಿರುವ ‘ನಾದಮೊದವೈಭವಂ’ ಕಾರ್ಯಕ್ರಮವು ಭಾನುವಾರ ದಾಸವಾಣಿ, ಭಜನೆ ಹಾಗೂ ಭರತನಾಟ್ಯದ ಅಪೂರ್ವ ಸಂಗಮದೊಂದಿಗೆ ಭಕ್ತರ ಮನಸೂರೆಗೊಂಡಿತು.


ಬೆಳಗ್ಗೆಯಿಂದಲೇ ದಾಸರ ಪದಗಳ ಮಧುರ ನಾದ ಮೊಳಗುವ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು. ಧಾರವಾಡದ ಶ್ರೀಮತಿ ರಶ್ಮಿ ದೇಶಪಾಂಡೆ ಹಾಗೂ ಶ್ರೀಮತಿ ವಾಣಿ ಸೂಳಿಭಾವಿ ಅವರ ದಾಸವಾಣಿ ಸೇವೆಯಿಂದ ಕಾರ್ಯಕ್ರಮಕ್ಕೆ ಭಕ್ತಿಪೂರ್ಣ ಆರಂಭ ದೊರೆಯಿತು.


ಬಳಿಕ ಬೆಂಗಳೂರಿನ ಗಾಯಿತ್ರಿ ರವೀಂದ್ರ, ಹಾವೇರಿಯ ವಾಣಿ ಸುರೇಶ್ ಕಣೇಕಲ್ ಹಾಗೂ ಬೆಂಗಳೂರಿನ ಸುಮಾ ಸಂಜೀವ ಕಂದಕೂರ ಅವರು ದಾಸವಾಣಿ ಮೂಲಕ ದಾಸಸಾಹಿತ್ಯದ ಭಕ್ತಿ, ತತ್ತ್ವ ಮತ್ತು ಸಂದೇಶವನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು.
ಕೆರೂರಿನ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿಯ ಭಜನಾ ಸೇವೆ ನಾಮಸ್ಮರಣೆಯ ಕಂಪನವನ್ನು ಮೂಡಿಸಿ ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿತು.


ಮಧ್ಯಾಹ್ನದ ಕಾರ್ಯಕ್ರಮದಲ್ಲೂ ಕಲಾಸೇವೆಯ ಸರಣಿ ಮುಂದುವರಿಯಿತು. ಮೈಸೂರಿನ ಸುಮಂತ ವಸಿಷ್ಠ ಅವರ ದಾಸವಾಣಿ ಹಾಗೂ ಹುಬ್ಬಳ್ಳಿಯ ಶ್ರೀ ಯಾದವರ್ಯ ಭಜನಾ ಮಂಡಳಿಯ ಭಜನಾ ಸೇವೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.


ಉಡುಪಿಯ ಕುಮಾರಿ ಶ್ರದ್ಧಾ ಕುಲ್ಕರ್ಣಿ ಅವರ ಭರತನಾಟ್ಯ ಪ್ರದರ್ಶನದಲ್ಲಿ ಲಯ, ತಾಳ ಮತ್ತು ಭಾವಗಳ ಸೊಗಸಾದ ಸಮನ್ವಯ ಕಂಡುಬಂದಿತು. ಧಾರವಾಡ ಸಾರಸ್ವತ್ಪುರದ ಸರಸ್ವತೀ ಮಹಿಳಾ ಮಂಡಳಿಯ ಕಲಾಸೇವೆಯೂ ಭಕ್ತಿಭಾವವನ್ನು ಮತ್ತಷ್ಟು ಹೆಚ್ಚಿಸಿತು.


ದಿನದ ಅಂತಿಮ ಘಟ್ಟದಲ್ಲಿ ಬೆಂಗಳೂರಿನ ಕುಮಾರಿ ಅಪರ್ಣಾ ಹಿಪ್ಪರಗಿ ಅವರ ಭರತನಾಟ್ಯ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು. ನೃತ್ಯದ ಮೂಲಕ ಭಕ್ತಿ ಮತ್ತು ಭಾವವನ್ನು ಕಟ್ಟಿಕೊಟ್ಟ ಅವರು ಕಾರ್ಯಕ್ರಮಕ್ಕೆ ಕಲಾತ್ಮಕ ಸಮಾಪ್ತಿ ನೀಡಿದರು.


ದಾಸವಾಣಿಯ ಮಧುರತೆ, ಭಜನೆಯ ನಾದ ಮತ್ತು ನೃತ್ಯದ ಭಾವಾಭಿವ್ಯಕ್ತಿ ಒಂದೇ ವೇದಿಕೆಯಲ್ಲಿ ಸಂಗಮಗೊಂಡ ಪರಿಣಾಮ ‘ನಾದಮೊದವೈಭವಂ’ ಭಾನುವಾರ ಭಕ್ತಿಯ ಜೊತೆಗೆ ಕಲೆಯ ಹಬ್ಬವಾಗಿ ಮೂಡಿಬಂದಿತು. ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಕಲಾಸೇವೆಯು 31ನೇ ಚಾತುರ್ಮಾಸ್ಯದ ಭಕ್ತಿಮಯ ವಾತಾವರಣಕ್ಕೆ ಮತ್ತಷ್ಟು ಮೆರುಗು ತಂದಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *