ಪದವೀಧರ-ಶಿಕ್ಷಕರ ಕ್ಷೇತ್ರಗಳ ಪರಿಷತ್ ಚುನಾವಣೆ ಘೋಷಣೆ

ಹಂಚಿಕೊಳ್ಳಿ

ಅ.23ರಂದು ಮತದಾನ; ನ.11ರಂದು ನಿವೃತ್ತಿಯಾಗಲಿರುವ ಕರ್ನಾಟಕದ ನಾಲ್ವರು ಸದಸ್ಯರ ಸ್ಥಾನಗಳಿಗೆ ಚುನಾವಣೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದೆ.

ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ಕರ್ನಾಟಕದ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕರ್ನಾಟಕದಲ್ಲಿ ದಕ್ಷಿಣ-ಪೂರ್ವ ಪದವೀಧರರ ಕ್ಷೇತ್ರದಿಂದ ಚಿದಾನಂದ ಎಂ. ಗೌಡ (ಅಧ್ಯಕ್ಷರು), ಪಶ್ಚಿಮ ಪದವೀಧರರ ಕ್ಷೇತ್ರದಿಂದ ಎಸ್.ವಿ. ಸಂಕನೂರು, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಅವರ ಸದಸ್ಯತ್ವದ ಅವಧಿ ನವೆಂಬರ್ 11, 2026ರಂದು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯಂತೆ ಸೆಪ್ಟೆಂಬರ್ 29ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನವಾಗಿದ್ದು, ಅಕ್ಟೋಬರ್ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನವಾಗಿದೆ.

ಅಕ್ಟೋಬರ್ 23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 27ರಂದು ಮತ ಎಣಿಕೆ ನಡೆಯಲಿದ್ದು, ಅಕ್ಟೋಬರ್ 31ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಆಯೋಗ ಪ್ರಕಟಿಸಿದೆ.

ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *