ರೇಬಿಸ್ ನಿಯಂತ್ರಣಕ್ಕೆ ಜನಜಾಗೃತಿಯೇ ಅಸ್ತ್ರ!

ಹಂಚಿಕೊಳ್ಳಿ

ಧಾರವಾಡ

ರೇಬಿಸ್‌ನಂತಹ ಮಾರಣಾಂತಿಕ ಕಾಯಿಲೆ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ರೇಬಿಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಪಶುವೈದ್ಯರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ ಹೇಳಿದರು.


ಧಾರವಾಡದ ರಾಯಾಪುರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿ ತರಬೇತಿ ಕೇಂದ್ರದಲ್ಲಿ ವಿಶ್ವ ರೇಬಿಸ್ ದಿನಾಚರಣೆ–2026ರ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಜಿಲ್ಲಾ ಶಾಖೆ ಧಾರವಾಡದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಜಂಟಿ ನಿರ್ದೇಶಕ ಡಾ. ಹೆಚ್. ನಾಗರಾಜ್ ಅವರು, ರೇಬಿಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪ್ರಾಣಿಗಳ ಲಸಿಕಾಕರಣ ಹಾಗೂ ಇಲಾಖೆಯಿಂದ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹೇಶ್ ಚಿತ್ತರಗಿ ಅವರು ರೇಬಿಸ್‌ನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ನಾಯಿ ಕಚ್ಚಿದ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, 2030ರೊಳಗೆ ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಸಾವುಗಳನ್ನು ಶೂನ್ಯಗೊಳಿಸುವ ಗುರಿ ಸಾಧಿಸಲು ಪಶುವೈದ್ಯರು, ಮಾನವ ವೈದ್ಯರು, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಮನ್ವಯ ಅಗತ್ಯವಿದೆ ಎಂದರು.

ಎಚ್‌ಡಬ್ಲುಎಐ ಸಂಸ್ಥೆಯ ಡಾ. ಮನೀಶ್ ಹಾಗೂ ಸೀಮಂತಿನಿ ಅವರು ರೇಬಿಸ್ ನಿಯಂತ್ರಣ, ಬೀದಿ ನಾಯಿಗಳ ನಿರ್ವಹಣೆ, ಪ್ರಾಣಿಗಳ ಲಸಿಕಾಕರಣ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತು ಮಾಹಿತಿ ನೀಡಿದರು.


ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದು ಹಾಗೂ ನಾಯಿ ಕಚ್ಚಿದ ಸಂದರ್ಭದಲ್ಲಿ ಯಾವುದೇ ವಿಳಂಬವಿಲ್ಲದೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರೇಬಿಸ್ ರೋಗನಿರೋಧಕ ಲಸಿಕೆ ನೀಡಲಾಯಿತು.


ತಹಶೀಲ್ದಾರ್‌ಗಳಾದ ಧಾರವಾಡ ಹಾಗೂ ಅಳ್ನಾವರ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಶುವೈದ್ಯರು, ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಶೀಲವಂತಮಠ ಸ್ವಾಗತಿಸಿದರು. ಡಾ. ಬಣಕರ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಆನಂದ ಪಡಿಯಪ್ಪನವರ ವಂದನಾರ್ಪಣೆ ಸಲ್ಲಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *