ಯಲಬುರ್ಗಾ
ಭಾರತೀಯ ಸಂಸ್ಕೃತಿಯ ಮೂಲವೇ ಧರ್ಮ. ಆಧ್ಯಾತ್ಮ ಸತ್ಯ ಸಂಸ್ಕಾರ. ನಮ್ಮ ನಾಡಿನ ನೆಲದಲ್ಲಿ ಅನೇಕ ಆಚಾರ್ಯರು ಋಷಿಮುನಿಗಳು ಮತ್ತು ಸತ್ಪುರುಷರು ತಮ್ಮ ಜ್ಞಾನ ಮತ್ತು ಅನುಭಾವದ ಮೂಲಕ ಸಕಲರನ್ನು ಉದ್ಧರಿಸಿದ್ದಾರೆ. ಧರ್ಮದಿಂದ ಸಂಸ್ಕೃತಿ ಉಳಿವು ಮತ್ತು ಸಂಸ್ಕೃತಿಯಿಂದ ಸಮಾಜಕ್ಕೆ ಬಹು ದೊಡ್ಡ ಶಕ್ತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಶಿಲಾ ಮಂಟಪದ ಉದ್ಘಾಟನಾ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನಮ್ಮ ನಾಡಿನ ಮಣ್ಣು ಕೇವಲ ಭೌಗೋಳಿಕ ನೆಲವಲ್ಲ. ಅದು ಆಚಾರ್ಯರ ಋಷಿಮುನಿಗಳ ಸತ್ಪುರುಷರ ಸಂಸ್ಕಾರ ಮತ್ತು ಪಾದ ವಿನ್ಯಾಸದಿಂದ ಪಾವನಗೊಂಡ ಪುಣ್ಯ ಭೂಮಿ. ಗುರು ಮಠಗಳು ಧರ್ಮ ಸಂಸ್ಕೃತಿ ಸದಾಚಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣಗಳು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯ ರಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದ್ದನ್ನು ಮರೆಯಲಾಗದು.
ಕಲ್ಲೂರು ಹಿರೇಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳು ವೀರಶೈವ ಧರ್ಮ ಸಂಸ್ಕೃತಿಯ ಬೆಳವಣಿಗೆಗಾಗಿ ಬಹಳಷ್ಟು ಶ್ರಮಿಸಿದ್ದನ್ನು ಎಲ್ಲರೂ ಸ್ಮರಿಸುತ್ತಾರೆ. ಇಂದಿನ ಹಿರೇಮಠದ ವೀರಯ್ಯ ಸ್ವಾಮಿಗಳು ತಮ್ಮ ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಭವ್ಯವಾದ ಶಿಲಾಮಂಟಪ ನಿರ್ಮಿಸಿ ಲೋಕಾರ್ಪಣೆ ಮಾಡುತ್ತಿರುವುದು ಅವರ ಧರ್ಮ ಶ್ರದ್ಧೆಗೆ ಈ ಕಾರ್ಯ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ರೇಶ್ಮೆ ಪೀತಾಂಬರ, ಸ್ಮರಣಿಕೆ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಮೈಸೂರು ಡಾ.ಮುಮ್ಮುಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ರಾಜೂರು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಮತ್ತು ಗುರು ಪರಂಪರೆಯ ಆದರ್ಶ ಮೌಲ್ಯಗಳ ಬಗೆಗೆ ಉಪದೇಶಾಮೃತವನ್ನಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರೇಮಠದ ವೀರಯ್ಯಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ನಿಮಿತ್ಯ ನಡೆದುಕೊಂಡು ಬಂದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನವನ್ನು ಕಲ್ಲೂರು ರಾಚಯ್ಯ ಶಾಸ್ತಿçಗಳು ಮಂಗಲಗೊಳಿಸಿದರು. ಸೇವೆ ಸಲ್ಲಿಸಿದ ಕಲ್ಲೂರು ಅಡಿವೆಪ್ಪ ಕ್ಯಾದಗುಂಪಿ, ಶ್ರೀಮತಿ ಶಿವರತ್ನಮ್ಮ ಮೃತ್ಯುಂಜಯ ಹಿರೇಮಠ, ಹೊಸಪೇಟೆ ಶ್ರೀಮತಿ ರಾಜೇಶ್ವರಿ ಶಶಿಧರಸ್ವಾಮಿ ಹಿರೇಮಠ ಹಾಗೂ ಅನೇಕ ಸೇವಾ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಶಿರಕೋಳ ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳವರು ಕಲ್ಲೂರ ಗ್ರಾಮದ ಸುಪ್ರಸಿದ್ಧ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತು ಪೂಜೆ ಸಲ್ಲಿಸಿದರು. ನಂತರ ಕಲ್ಲೂರು ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ವೈಭವದಿಂದ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

