ಜಮಖಂಡಿ
ದೇಶದ ಪ್ರಗತಿ ಕೇವಲ ಸರಕಾರದಿಂದ ಸಾಧ್ಯವಿಲ್ಲ. ಸೈನಿಕರು ರೈತರು ಶಿಕ್ಷಕರು ಕಾರ್ಮಿಕರು ವಿಜ್ಞಾನಿಗಳು ವೈದ್ಯರು ಮತ್ತು ಉದ್ಯಮಿಗಳ ಶ್ರಮ ಸಾಧನೆ ಮುಖ್ಯ. ರಾಷ್ಟ್ರ ನಿರ್ಮಾಣದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದು. ಅದರಲ್ಲಿ ವಿಶೇಷವಾಗಿ ಯೋಧರ ಮತ್ತು ರೈತರ ಕೊಡುಗೆ ಅಮೂಲ್ಯವಾದದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಐದನೇ ದಿನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಮನುಷ್ಯ ಜೀವನದಲ್ಲಿ ದೊಡ್ಡ ಸ್ಥಾನವನ್ನು ಗಳಿಸುವುದು ಉತ್ತಮ ಸಂಗತಿ. ಆದರೆ ಆ ಸ್ಥಾನವನ್ನು ತಲುಪುವಾಗ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ಸಾಧನೆ ಎಂದರೆ ಕೇವಲ ಹಣ ಸಂಪಾದಿಸುವುದಲ್ಲ. ನಮ್ಮ ಗುರಿ ನಿರ್ಧರಿಸಿ ಶಿಸ್ತು ಜ್ಞಾನ ಆತ್ಮವಿಶ್ವಾಸದ ಮೂಲಕ ಅದನ್ನು ಸಾಧಿಸುವುದೇ ನಿಜವಾದ ಸಾಧನೆ. ಸಾಧನೆಯ ಶ್ರೇಯಸ್ಸಿಗೆ ಪರಿಶ್ರಮ ಶಿಸ್ತು ತಾಳ್ಮೆ ಜ್ಞಾನ ಆತ್ಮವಿಶ್ವಾಸ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವನೆ ಮುಖ್ಯ ಎಂದರು.
ಯಶಸ್ಸು ಒಂದು ದಿನದಲ್ಲಿ ದೊರೆಯುವುದಿಲ್ಲ. ಅದಕ್ಕೆ ನಿರಂತರ ಪ್ರಯತ್ನ ಅನುಭವ ಮತ್ತು ತಾಳ್ಮೆ ಅಗತ್ಯ. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮವಹಿಸಿ ಶ್ರಮಿಸುತ್ತಿರುವ ಸೈನಿಕರ ಸೇವೆ ಎಂದೆಂದಿಗೂ ಮರೆಯಲಾಗದು. ಸೈನಿಕರ ಧೈರ್ಯ ಶಿಸ್ತು ಪ್ರಾಮಾಣಿಕತೆ ಮತ್ತು ದೇಶಭಕ್ತಿ ನಮ್ಮೆಲ್ಲರಿಗೂ ಆದರ್ಶವಾದುದು. ಕೃಷಿ ಪ್ರಧಾನವಾದ ಭಾರತ ರಾಷ್ಟ್ರದಲ್ಲಿ ರೈತ ದೇಶದ ಜನರಿಗೆ ಆಹಾರವನ್ನು ಒದಗಿಸುವ ಮಹತ್ವದ ವ್ಯಕ್ತಿ. ರೈತರ ಪರಿಶ್ರಮದಿಂದಲೇ ನಮಗೆ ಅನ್ನ ತರಕಾರಿ ಹಣ್ಣುಗಳು ಮತ್ತು ಇತರ ಕೃಷಿ ಉತ್ಪನ್ನಗಳು ತಲುಪುತ್ತವೆ. ಆದ್ದರಿಂದ ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಆಹಾರ ಉತ್ಪಾದನೆ ಆರ್ಥಿಕ ಅಭಿವೃದ್ಧಿ ಉದ್ಯೋಗ ಸೃಷ್ಟಿ ಪರಿಸರ ಸಂರಕ್ಷಣೆ ಗ್ರಾಮೀಣ ಜೀವನದ ಆಧಾರ. ಇವೆಲ್ಲ ಜೀವನೋಪಾಯ ಮತ್ತು ಅಭಿವೃದ್ಧಿಗೆ ನೆರವಾಗುತ್ತವೆ. ಯೋಧರ ನಿಷ್ಠೆ ಮತ್ತು ರೈತರ ಶ್ರಮ ಎಷ್ಟು ಕೊಂಡಾಡಿದರೂ ಕಡಿಮೆ ಎಂದರು.
ಪ್ರಶಸ್ತಿ: ಶಿವಮೊಗ್ಗ ಆಸರೆ ಟ್ರಸ್ಟಿನ ಅಧ್ಯಕ್ಷರೂ ಮತ್ತು ಡಿಟೆಕ್ಟಿವ್ ಮುಖ್ಯ ಸಂಪಾದಕ ಕೆ.ಎಂ. ಸತೀಶಗೌಡರ ಶ್ರಮ ಸಾಧನೆಯನ್ನು ಕಂಡು ಈ ಅಪೂರ್ವ ಸಮಾರಂಭದಲ್ಲಿ ಅವರಿಗೆ ಸಾಧನ ಸಿರಿ ಪ್ರಶಸ್ತಿ ಪ್ರಧಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿ-ಸಂಸದ ಬಸವರಾಜ ಬೊಮ್ಮಾಯಿ ಇವರು ರಂಭಾಪುರಿ ಪೀಠದ ಮಹಾಚೇತನ, ಪರಿಸರ ಪ್ರೇಮಿ ನಾಡೋಜ ಜಗದೀಶ ಗುಡಗುಂಟಿ ಕೃತಿ ಸೇರಿದಂತೆ ಪಾಕ್ಷಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಭಾರತೀಯ ಪುಣ್ಯಭೂಮಿಯಲ್ಲಿ ಹಲವಾರು ಮತ ಧರ್ಮಗಳು ಬೆಳೆದು ಬಂದಿವೆ. ಅವೆಲ್ಲವುಗಳು ಮಾನವನ ಶ್ರೇಯಸ್ಸಿಗೆ ಮತ್ತು ಉತ್ಕರ್ಷತೆಗಾಗಿ ಶ್ರಮಿಸುತ್ತಾ ಬಂದಿವೆ. ವೀರಶೈವ ಧರ್ಮ ಸಂಸ್ಥಾಪಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡಿದ ವೀರಶೈವ ಧರ್ಮದ ಆದರ್ಶ ಸಂಸ್ಕೃತಿ ಸಕಲರ ಬಾಳಿನಲ್ಲಿ ಸಂಸ್ಕಾರ ಸಭ್ಯತೆ ಕ್ರಿಯಾಶೀಲ ಬದುಕು ರೂಪಿಸುವಲ್ಲಿ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಗುರುಪೀಠ ಪರಂಪರೆಯ ಪಂಚಪೀಠಗಳು ಭಕ್ತ ಸಮುದಾಯಕ್ಕೆ ಧರ್ಮ ನಿಷ್ಠೆ ಶ್ರದ್ಧೆ ಸಂಸ್ಕಾರ ಕೊಟ್ಟಿರುವುದನ್ನು ಮರೆಯಲಾಗದು. ಶ್ರೀ ರಂಭಾಪುರಿ ಧರ್ಮಪೀಠದ ಕೊಡುಗೆ ಸಮಾಜಕ್ಕೆ ದೊಡ್ಡ ಶಕ್ತಿ ಎಂದರು.
ಮಾಜಿ ಸಚಿವ ಮುಗುಗೇಶ ನಿರಾಣಿ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಮಲ್ಲಿಕಾರ್ಜುನ ಅಕ್ಕಿ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಯೋಧ ಮತ್ತು ರೈತ ದೇಶದ ಬೆನ್ನೆಲುಬು ಎಂಬ ವಿಚಾರದಲ್ಲಿ ಸುಧೀರ್ಘವಾದ ಉಪದೇಶಾಮೃತ ನೀಡಿದರು. ಬಂಕಾಪುರ ಕುಂದರಗಿ ಬದಾಮಿ ಕಮತಗಿ ತುಂಗಳ ಶ್ರೀಗಳನ್ನು ಮೊದಲು ಮಾಡಿ ಹಲವಾರು ಗಣ್ಯರಿಗೆ ಗುರು ರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವೀರಶೈವ ಧರ್ಮ ಪಂಚಪೀಠಗಳ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ನುಡಿ ನಮನ ಸಲ್ಲಿಸಿದರು. ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಜಗದೀಶ್ ಗುಡಗುಂಟಿ ಮತ್ತು ದಸರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೊಡ್ಡವಾಡದ ಅಜ್ಜಯ್ಯ ಪೂಜಾರ ಇವರು ಹೆಳವನ ಪಾತ್ರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಚರಿತ್ರೆಯನ್ನು ಹೇಳಿದ್ದು ಜನಮನ ಸೂರೆಗೊಂಡಿತು. ದಾನಮ್ಮ ಪಂಚಕಟ್ಟಿಮಠ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ವೀರೇಶ ಕಿತ್ತೂರ ಅವರಿಂದ ಭಕ್ತಿ ಪ್ರಾರ್ಥನಾ ಗೀತೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ನಜರ್ ಸಮರ್ಪಣೆ: ಸಮಾರಂಭದ ಕೊನೆಯ ಹಂತದಲ್ಲಿ ಶ್ರೀ ಶಿವಾಚಾರ್ಯರಿಂದ ಸಿಬ್ಬಂದಿ ವರ್ಗದವರಿಂದ ಮತ್ತು ಧರ್ಮಾಭಿಮಾನಿಗಳಿಂದ ಆಕರ್ಷಕ ನಜರ್ (ಗೌರವ) ಸಮರ್ಪಣೆ ಜರುಗಿತು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಜರ್ ನಿರೂಪಿಸಿದರು.
