ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿ ಆರಾಧನೆ : ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಜಮಖಂಡಿ
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಆಧ್ಯಾತ್ಮದ ಸಂಪತ್ತು ಶಾಶ್ವತ. ಅಜ್ಞಾನವನ್ನು ತೊರೆದು ಜ್ಞಾನವನ್ನು ಸಂಪಾದಿಸುವುದು ಅನ್ಯಾಯದ ವಿರುದ್ಧ ನಿಲ್ಲುವುದು ಸತ್ಯದ ಮಾರ್ಗದಲ್ಲಿ ನಡೆಯುವುದು ಮತ್ತು ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿಯ ಆರಾಧನೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಭಾನುವಾರ ಜಮಖಂಡಿ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದ ಮಾನವ ಧರ್ಮ ಮಂಟಪದಲ್ಲಿ ಜರುಗಿದ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನವರಾತ್ರಿ ಮತ್ತು ದಸರಾ ಉತ್ಸವಗಳು ಈ ಶಕ್ತಿ ತತ್ವವನ್ನು ನಮಗೆ ಸ್ಮರಿಸುತ್ತದೆ. ದೇವಿಯ ಒಂಭತ್ತು ರೂಪಗಳ ಆರಾಧನೆಯ ಮೂಲಕ ಮನುಷ್ಯನು ತನ್ನೊಳಗಿನ ಭಕ್ತಿ ಜ್ಞಾನ ಧೈರ್ಯ ಸಹನೆ ಕರುಣೆ ವಿವೇಕ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸಬೇಕೆಂಬ ಸಂದೇಶವನ್ನು ಉತ್ಸವಗಳು ಸಾರುತ್ತವೆ. ಪುರಾಣಗಳಲ್ಲಿ ವರ್ಣಿಸಲ್ಪಟ್ಟ ಮಹಿಷಾಸುರನ ಸಂಹಾರವು ಕೇವಲ ಒಬ್ಬ ಅಸುರನ ಅಂತ್ಯದ ಕಥೆಯಲ್ಲ. ಅದು ಅಹಂಕಾರದ ಮೇಲೆ ವಿನಯದ ವಿಜಯ ಅನ್ಯಾಯದ ಮೇಲೆ ನ್ಯಾಯದ ವಿಜಯ ಅಜ್ಞಾನದ ಮೇಲೆ ಜ್ಞಾನದ ವಿಜಯ ಮತ್ತು ಅಧರ್ಮದ ಮೇಲೆ ಧರ್ಮದ ವಿಜಯವಾಗಿದೆ ಎಂದರು.

ದುಷ್ಟ ಶಕ್ತಿಗಳ ಧಮನ ಸಾತ್ವಿಕ ಶಕ್ತಿಗಳ ಸಂರಕ್ಷಣೆ ದೇವಿಯ ಅವತಾರದ ಮೂಲ ಉದ್ದೇಶ. ಶಕ್ತಿ ಆರಾಧನೆಯ ನಾಡಹಬ್ಬವನ್ನು ಶ್ರೀ ರಂಭಾಪುರಿ ಪೀಠ ಪ್ರಾಚೀನ ಕಾಲದಿಂದ ಆಚರಿಸುತ್ತಾ ಬಂದಿದೆ. ಗುರು ಪೀಠದಲ್ಲಿ ಆಚರಿಸುವಂತಹ ನವರಾತ್ರಿ ನಾಡಹಬ್ಬ ಭಕ್ತರ ಕಲ್ಯಾಣಕ್ಕಾಗಿ ಜನಮನದ ಶಾಂತಿ ಸಾಮರಸ್ಯಕ್ಕಾಗಿ ನಾಡಿನ ನಾನಾ ಭಾಗಗಳಲ್ಲಿ ವಿಧಿವತ್ತಾಗಿ ಆಚರಿಸುತ್ತ ಬಂದಿರುವ ಇತಿಹಾಸವಿದೆ. ಜಮಖಂಡಿ ನಗರದಲ್ಲಿ ಅದ್ದೂರಿಯಾಗಿ ದಸರಾ ಧರ್ಮ ಸಮ್ಮೇಳನ ಜರುಗುತ್ತಿರುವುದು ತಮಗೆ ಅಪಾರ ಹರುಷ ತಂದಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಕೇಂದ್ರ ಶಿಕ್ಷಣ ಮತ್ತು ಆಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಶಾಂತಿ ಸಾಮರಸ್ಯದ ಬದುಕಿಗೆ ಧರ್ಮ ಅಡಿಪಾಯವಾಗಿದೆ. ಆಧ್ಯಾತ್ಮದ ಅರಿವಿನ ತಂಗಾಳಿಯನ್ನು ಬೀರಿದ ಆಚಾರ್ಯರ ಮತ್ತು ಋಷಿ ಮುನಿಗಳ ವಿಚಾರಧಾರೆಗಳನ್ನು ಮರೆಯುವಂತಿಲ್ಲ. ಧರ್ಮಾಚರಣೆಗಳು ಮಾನವ ಜೀವನದ ಉನ್ನತಿಗೆ ಕಾರಣವಾಗಿವೆ. ಪ್ರತಿಯೊಬ್ಬರೂ ಸರಿಯಾದ ಮಾರ್ಗದಲ್ಲಿ ನಡೆಯುವುದಕ್ಕಾಗಿಯೇ ಆಯಾ ಧರ್ಮ ಇದೆ.
ಹೊಸ ಭಕ್ತಿಯ ಜೊತೆಗೆ ಆಧ್ಯಾತ್ಮಿಕ ವಾತಾವರಣ ಹೊಂದಿದವರು ಹಾಗೂ ಧರ್ಮದ ದಾರಿಯಲ್ಲಿ ನಡೆಸುವುದಕ್ಕಾಗಿ ಶ್ರಮಿಸುತ್ತಿರುವವರಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.

ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳು ನಾಡಿನಾದ್ಯಂತ ಸಂಚರಿಸಿ ಜನ ಸಮುದಾಯದಲ್ಲಿ ಧರ್ಮ ಶ್ರದ್ಧೆ ರಾಷ್ಟ್ರಭಕ್ತಿ ಸಾಮರಸ್ಯ ಬದುಕಿನ ಆದರ್ಶ ಚಿಂತನೆಗಳನ್ನು ಬೋಧಿಸಿ ಉದ್ಧರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಕಾಯಕ ದಾಸೋಹ ಷಟ್ಸ್ಥಲಗಳ ಸಾಧನೆಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ರಂಭಾಪುರಿ ಪೀಠ ಆಧ್ಯಾತ್ಮದ ಮೂಲಕ ಮತ್ತೊಬ್ಬರಿಗೆ ನೆಮ್ಮದಿ ಮೂಡಿಸುವ ಕೆಲಸ ಈ ದೇಶದಲ್ಲಿ ನಡೆದಿದೆ. ಜಮಖಂಡಿ ನಗರದಲ್ಲಿ ಜರುಗುತ್ತಿರುವ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸುವ ಸೌಭಾಗ್ಯ ಒದಗಿ ಬಂದಿರುವುದು ನನ್ನ ಪೂರ್ವಜನ್ಮದ ಸುಕೃತವೆಂದು ಭಾವಿಸುತ್ತೇನೆ. ಹತ್ತು ದಿನಗಳ ಕಾಲ ನಡೆಯುವ ದಸರಾ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಲೆಂದು ಜಗನ್ಮಾತೆಯಲ್ಲಿ ಪ್ರಾರ್ಥಿಸಿದರು.

ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಜಮಖಂಡಿ ನೇತೃತ್ವ ವಹಿಸಿದ್ದರು. ಡಾ.ನಿರುಪಾಧೀಶ ಸ್ವಾಮಿಗಳು ಅಡವಿ ಸಿದ್ಧೇಶ್ವರಮಠ ಮರೇಗುದ್ದಿ ಸಮ್ಮುಖ ವಹಿಸಿದ್ದರು. ಹಿಪ್ಪರಗಿಯ ಪ್ರೊ. ಸಿ.ಜಿ. ಮಠಪತಿ ಮಾತನಾಡಿ, ಶಕ್ತಿ ಎಂದರೆ ಅಧಿಕಾರದ ಪ್ರದರ್ಶನವಲ್ಲ. ಅದು ರಕ್ಷಣೆಗೆ ಬಳಕೆಯಾಗುವ ಸಾಮರ್ಥ್ಯ. ಶಕ್ತಿ ಎಂದರೆ ದ್ವೇಷವನ್ನು ಹರಡುವದಲ್ಲ. ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮನೋಬಲ ಕುಗ್ಗಿದವರನ್ನು ಮೇಲೆತ್ತುವ ಉದಾತ್ತ ಗುಣ. ಇಂತಹ ಸಾತ್ವಿಕ ಶಕ್ತಿಯೇ ವ್ಯಕ್ತಿಯನ್ನು ಮತ್ತು ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತವೆ. ನವರಾತ್ರಿಯಲ್ಲಿ ನವಶಕ್ತಿಯರ ಆರಾಧನೆ ನಡೆಯುತ್ತದೆ. ಶೈಲ ಪುತ್ರಿ ಬ್ರಹ್ಮಚಾರಿಣಿ ಚಂದ್ರಘಂಟಾ ಕುಷ್ಮಾಂಡ ಸ್ಕಂದಮಾತೆ ಕಾತ್ಯಾಯನಿ ಕಾಳರಾತ್ರಿ ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಿಂದ ದೇವಿಯನ್ನು ಪೂಜಿಸಿ ಪವಿತ್ರರಾಗುವ ನಾಡಹಬ್ಬವಿದು. ನಮ್ಮೆಲ್ಲರ ಬಾಳಿಗೆ ಜ್ಞಾನದ ಜ್ಯೋತಿ ಸನ್ಮಾರ್ಗವನ್ನು ತೋರಲಿ ಎಂದರು.

ಅತಿಥಿಗಳಾಗಿ ಶಿವಪುತ್ರಯ್ಯ ಸಿದ್ದಗಿರಿಮಠ, ಕಲ್ಲಪ್ಪ ಕೆ ತುಪ್ಪದ, ಶಂಕರ ಜಿರಲಿ, ಅಪ್ಪಾಸಾಹೇಬ ಪರಪ್ಪ ಚೌಗಲಾ,ಮಾಳಿ ಸಮಾಜ ಅಧ್ಯಕ್ಷ ಸಿದ್ದಪ್ಪ ಮೆಂಡಿಗೇರಿ ಪಾಲ್ಗೊಂಡಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಸರ್ವರನ್ನು ಸ್ವಾಗತಿಸಿ ಮಾತನಾಡಿ, ದಸರಾ ಧರ್ಮ ಸಮ್ಮೇಳನ ಸಕಲರ ಬಾಳಿನಲ್ಲಿ ಉದಾತ್ತ ಮೌಲ್ಯಗಳನ್ನು ಬೋಧಿಸುವುದರ ಮೂಲಕ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಗುರುರಕ್ಷೆ: ಶರಣಬಸವ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬನಹಟ್ಟಿ, ಜಮಖಂಡಿಯ ವೇದಾಂತಾಚಾರ್ಯ ಸಹಜಾನಂದ ಅವಧೂತರು, ರುದ್ರಾವಧೂತ ಮಠ, ಜಿ.ಕೆ. ಮಠದ ಹಿರಿಯ ನ್ಯಾಯವಾದಿಗಳು, ನಾಗಪ್ಪ ಗದಿಗೆಪ್ಪ ಸನದಿ ದೇವಲ ಅಪ್ಪಾಸಾಹೇಬ ದೇಸಾಯಿ, ಸುಶೀಲ ಕುಮಾರ ಬೆಳಗಲಿ ಸಾವಳಗಿ, ವೇ. ಅನ್ನದಾನ ಸ್ವಾಮಿಗಳು ಗುಡೂರ-ಇಳಕಲ್, ಸುನಂದಮ್ಮತಾಯಿ ಸಾರಂಗಮಠ ಶೂರ್ಪಾಲಿ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಗದುಗಿನ ಗಾನಭೂಷಣ ವೀರೇಶ್ ಕಿತ್ತೂರ ಅವರಿಂದ ಪ್ರಾರ್ಥನಾ ಭಕ್ತಿಗೀತೆ ಜರುಗಿತು. ಶಿವಮೊಗ್ಗದ ಶ್ರೀಮತಿ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಜರುಗಿ ಬಂದ ಭಕ್ತರಿಗೆ ಅನ್ನ ದಾಸೋಹ ಜರುಗಿತು.

ಬೆಳಿಗ್ಗೆ ಮೈಗೂರ ರಸ್ತೆಯಲ್ಲಿರುವ ಕಲೂತಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿ ಗಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಮಧ್ಯಾಹ್ನ ಶ್ರೀ ಜಗದ್ಗುರುಗಳು ವೀರಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *