ವಿಧಾನ ಪರಿಷತ್ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ

ಹಂಚಿಕೊಳ್ಳಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ; ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಗದಗ
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಸಂಕನೂರು ಅವರ ಪರವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ವೈಖರಿ, ವಿದ್ಯುತ್ ಸಮಸ್ಯೆ, ಬರ ನಿರ್ವಹಣೆ, ಬೆಲೆ ಏರಿಕೆ ಹಾಗೂ ಇತ್ತೀಚಿನ ಸ್ಟಿಂಗ್ ಆಪರೇಷನ್ ವಿವಾದ ಕುರಿತು ಸಚಿವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿದ್ಯುತ್, ಬರ ನಿರ್ವಹಣೆಯಲ್ಲಿ ವಿಫಲ:
ಈ ಹಿಂದೆ ಕರ್ನಾಟಕ ವಿದ್ಯುತ್‌ ಉತ್ಪಾದನೆಯಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದ ರಾಜ್ಯವಾಗಿತ್ತು. ಆದರೀಗ ರೈತರು ಮತ್ತು ಗ್ರಾಮೀಣ ಭಾಗದ ಜನರು ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಸಮರ್ಪಕ ವಿದ್ಯುತ್ ಖರೀದಿ ಮತ್ತು ನಿರ್ವಹಣೆ ರಾಜ್ಯ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ವಿದ್ಯುತ್ ಖರೀದಿಸಿ ಜನರಿಗೆ ಪೂರೈಸುವ ಸಾಮರ್ಥ್ಯವೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲವಾಗಿದೆ ಎಂದು ಟೀಕಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹8,000, ಒಣಭೂಮಿ ಕೃಷಿಗೆ ₹13,000 ಹಾಗೂ ನೀರಾವರಿ ಭೂಮಿಗೆ ₹25,000 ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಕೇವಲ ರೈತ ಕುಟುಂಬಕ್ಕೆ ಬರೀ 2500 ಘೋಷಿಸಿ ಕೈ ತೊಳೆದುಕೊಳ್ಳುತ್ತಿದೆ. ಸಮರ್ಪಕ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಸ್ಟಿಂಗ್ ಆಪರೇಷನ್ ತನಿಖೆಗೆ ಆಗ್ರಹ:
ರಾಜ್ಯದಲ್ಲಿ ಎದ್ದಿರುವ ಸ್ಟಿಂಗ್ ಆಪರೇಷನ್ ವಿವಾದದ ಕುರಿತಂತೆ ಪ್ರತಿಕ್ರಿಯಿಸಿ, ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು. ಇದರಲ್ಲಿ ಸತ್ಯ ಹೊರಬರಬೇಕು ಎಂದರು.

ಎಸ್‌ಐಟಿ ತನಿಖೆ ನಡೆಸಲಿ: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಲಿ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ವಿವಾದದ ಚರ್ಚೆಯಲ್ಲಿ ತನಿಖೆಗಿಂತ ಚಿತ್ರೀಕರಣ ಮಾಡಿದವರು ಯಾರೆಂಬ ವಿಚಾರಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದ ಸಚಿವರು, ಸಿದ್ದರಾಮಯ್ಯ ಅವರೊಂದಿಗೆ ಹಲವು ರೀತಿ ಭಿನ್ನಾಭಿಪ್ರಾಯಗಳಿವೆ. ಆದರೆ, ನ್ಯಾಯ ಸಮ್ಮತ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದರು.

ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರೇ ಆಗಲಿ ಆರೋಗ್ಯದ ವಿಚಾರದಲ್ಲಿ ರಾಜಕೀಯ ವಿರೋಧ ಬದಿಗಿಡಬೇಕು. ಆರೋಗ್ಯದ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯ ತೋರಬೇಕು ಎಂದು ಅಭಿಪ್ರಾಯಪಟ್ಟರು.

ಬೆಲೆ ಏರಿಕೆ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಹಾಲು, ಡಿಸೇಲ್, ಸಾರಿಗೆ ಹಾಗೂ ವಿವಿಧ ಪ್ರಮಾಣ ಪತ್ರಗಳ ಶುಲ್ಕ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರ ನೀಡುತ್ತಿರುವ ಆರ್ಥಿಕ ನೆರವಿನ ಲಾಭವನ್ನು ಬೆಲೆ ಏರಿಕೆ ಮೂಲಕ ಜನರಿಂದಲೇ ವಸೂಲಿ ಮಾಡುತ್ತಿದೆ ಈ ಸರ್ಕಾರ ಎಂದು ಕಿಡಿ ಕಾರಿದರು. ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ನಿರ್ವಹಣೆ ಮತ್ತು ಬಿಡಿ ಭಾಗಗಳ ಕೊರತೆ ಬಗ್ಗೆ ಪ್ರಸ್ತಾಪಿಸಿ ಆಕ್ಷೇಪಿಸಿದ ಸಚಿವರು, ಸಾರಿಗೆ ವ್ಯವಸ್ಥೆ ನಿರ್ವಹಣೆಯಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದರು.

ಕಾಂಗ್ರೆಸ್ ಗೆ ಪ್ರಾದೇಶಿಕ ಪಕ್ಷಗಳೇ ಮುಳುವು:
ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳಲು ಪ್ರಾದೇಶಿಕ ಪಕ್ಷಗಳೂ ಕಾರಣವಾಗಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿ ಈಗ ಅದೇ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾರೇ ಆಗಲಿ ಒಂದು ಸಂವಿಧಾನಾತ್ಮಕ ವ್ಯವಸ್ಥೆಗೆ ಗೌರವ ನೀಡಬೇಕು ಎಂದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರದ ಹಿತಾಸಕ್ತಿಗೆ ಒತ್ತು ನೀಡುತ್ತಿದ್ದು, ದೇಶದಲ್ಲಿ ಪಕ್ಷ ಸಂಘಟನೆಯು ಬಲಗೊಂಡಿದೆ ಎಂದು ಪ್ರತಿಪಾದಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಮಿತಿ:
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕಬ್ಬಿನ ಬೆಲೆ, ತೂಕದಲ್ಲಿನ ವ್ಯತ್ಯಾಸ, ರಿಕವರಿ ಪ್ರಮಾಣ ಹಾಗೂ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿಯೇ ಪ್ರೊ. ರಮೇಶ ಚಂದ್ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ. ರೈತರು ಸಮಿತಿ ಅಧ್ಯಯನ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ನೀತಿಯಿಂದ ಕಬ್ಬು ಬೆಳೆಗಾರರಿಗೆ ಹಣ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ. ದೇಶದಲ್ಲಿ ಎಥೆನಾಲ್ ಖರೀದಿ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಕಬ್ಬಿನ ಉತ್ಪನ್ನಗಳನ್ನೂ ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ ಸಕ್ಕರೆ ಉದ್ಯಮಕ್ಕೆ ಮತ್ತು ರೈತರಿಗೆ ನೆರವಾಗಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರವೂ ಮುಂದಾಗಲು:
ಕರ್ನಾಟಕದಲ್ಲಿ ಕಬ್ಬಿಗೆ ರಾಜ್ಯ ಸಲಹಾ ಬೆಲೆ(ಎಸ್‌ಎಪಿ) ನಿಗದಿಪಡಿಸುವುದು ಸೇರಿದಂತೆ ರೈತರ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಈಗಾಗಲೇ ಅಧಿಕಾರಿಗಳನ್ನು ನಿಯೋಜಿಸಿದ್ದು, ಸಮಿತಿಯು ಶೀಘ್ರ ಅತ್ಯಂತ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಂಕನೂರು ಗೆಲುವಿನ ವಿಶ್ವಾಸ:
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರು ಅವರು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಪದವೀಧರರು ಸೇರಿದಂತೆ ಮತದಾರರಲ್ಲಿ ಬಿಜೆಪಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ವಿಧಾನಪರಿಷತ್ ಚುನಾವಣೆ ಮುಂದಿನ ಚುನಾವಣೆಗಳಿಗೆ ಡಿಕ್ಸುಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *