ಧರ್ಮದ ಬೆಳಕು ನಮ್ಮೆಲ್ಲರ ಬದುಕನ್ನು ಪಾವನಗೊಳಿಸಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಜಮಖಂಡಿ
ಪ್ರತಿಯೊಂದು ಮನೆಯಲ್ಲೂ ಸಂಸ್ಕಾರದ ಬೆಳಕು ಮೂಡಬೇಕು. ಪ್ರತಿಯೊಬ್ಬ ಯುವಕರಲ್ಲೂ ಆತ್ಮವಿಶ್ವಾಸ ಬೆಳೆಯಬೇಕು. ಧರ್ಮವು ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಶಾಂತಿ ಸೇವೆ ಮತ್ತು ಸತ್ಯದ ರೂಪದಲ್ಲಿ ಕಾಣುವಂತಾಗಬೇಕು. ಧರ್ಮದ ಬೆಳಕು ನಮ್ಮೆಲ್ಲರ ಬಾಳ ಬದುಕನ್ನು ಪಾವನಗೊಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶನಿವಾರ ಜಮಖಂಡಿ ನಗರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 7ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಧರ್ಮವೆಂದರೆ ಕೇವಲ ಆಚರಣೆಯಲ್ಲ. ಅದು ಜೀವನದ ನಡವಳಿಕೆಯಾಗಿದೆ. ದೇವಸ್ಥಾನಕ್ಕೆ ಹೋಗುವ ಪೂಜೆ ಮಾಡುವ ಮಂತ್ರ ಪಠಿಸುವ ಆಚರಣೆ ನಾವು ಮಾಡುತ್ತೇವೆ. ಇವೆಲ್ಲವೂ ಭಕ್ತಿಯ ಅಭಿವ್ಯಕ್ತಿಗಳಾಗಿವೆ. ಆದರೆ ಧರ್ಮದ ನಿಜವಾದ ಸೌಂದರ್ಯ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು ಎಂದರು.

ಸತ್ಯ ಮಾತನಾಡುವುದು ಧರ್ಮ. ಪರರ ನೋವಿಗೆ ಸ್ಪಂದಿಸುವುದು ಧರ್ಮ. ತಂದೆ ತಾಯಿಗಳನ್ನು ಗುರುಹಿರಿಯರನ್ನು ಗೌರವಿಸುವುದು ಧರ್ಮ. ದುರ್ಬಲರಿಗೆ ಸಹಾಯ ಮಾಡುವದು ಮತ್ತು ತಪ್ಪು ದಾರಿಯಲ್ಲಿ ನಡೆಯುವವನಿಗೆ ಸರಿಯಾದ ದಾರಿ ತೋರಿಸುವುದು ಧರ್ಮ. ಒಬ್ಬ ವ್ಯಕ್ತಿ ದೇವರ ಮುಂದೆ ದೀಪ ಹಚ್ಚಬಹುದು. ಆದರೆ ಆತನು ತಮ್ಮ ಕುಟುಂಬದವರಿಗೆ ನೋವುಂಟು ಮಾಡುತ್ತಾನೆ ಎಂದಾದರೆ ಅದು ಧರ್ಮವಲ್ಲ. ದೇವರ ಮುಂದೆ ಬೆಳಗುವ ದೀಪಕ್ಕಿಂತಲೂ ನಮ್ಮ ಹೃದಯದಲ್ಲಿ ಬೆಳಗುವ ಸತ್ಯ ದೀಪ ಮುಖ್ಯವಾಗಿದೆ. ಕತ್ತಲೆಯ ಕೋಣೆಯಲ್ಲಿ ಒಂದು ಸಣ್ಣ ದೀಪ ಹಚ್ಚಿದರೆ ಸಾಕು ಬೆಳಕು ಮೂಡುತ್ತದೆ. ಅದರಂತೆ ಮನುಷ್ಯ ಜೀವನದಲ್ಲಿ ಅಜ್ಞಾನ ಕಳೆದು ಜ್ಞಾನ ಬೆಳಕಿನ ಹೆಜ್ಜೆ ಹಾಕಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಮೂಲ್ಯವಾದ ಜೀವನ ದರ್ಶನ ಸಂದೇಶವನ್ನು ಸಿದ್ದಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಶ್ರೀ ರಂಭಾಪುರಿ ಜಗದ್ಗುರುಗಳು ನಿರೂಪಿಸಿದ ವಿಚಾರಗಳನ್ನು ಸಿ.ಎಚ್. ಬಾಳನಗೌಡ್ರು ಸಂಗ್ರಹಿಸಿದ ‘ಸುಬೋಧ ಚಿಂತನೆ’ ಕೃತಿಯನ್ನು ಬಿಡುಗಡೆ ಮಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಜೀವನ ಪರಿವರ್ತನೆಗೆ ಪ್ರಾರ್ಥನೆ ಧ್ಯಾನ ಗುರು ಮಾರ್ಗದರ್ಶನ ಸತ್ಸಂಗ ಮತ್ತು ಸತ್ಕರ್ಮಗಳು ಪ್ರೇರಣೆಯಾಗುತ್ತವೆ. ಧರ್ಮ ಮತ್ತು ಚಿಕಿತ್ಸೆ ಪರಸ್ಪರ ವಿರೋಧಿಗಳಲ್ಲ. ಅವು ವ್ಯಕ್ತಿಯ ಚೇತರಿಕೆಗೆ ಪೂರಕವಾಗುತ್ತವೆ. ಅಮೂಲ್ಯ ಸಮಯವನ್ನು ದುಶ್ಚಟಗಳಲ್ಲಿ ಕಳೆಯುವುದಕ್ಕಿಂತ ಸಾರ್ಥಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ದುಡಿಮೆಯ ಫಲವನ್ನು ಕುಟುಂಬದ ಒಳಿತಿಗೆ ಬಳಸುವುದು ಮತ್ತು ಸಮಾಜಕ್ಕೆ ನೆರವಾಗುವುದು ಧರ್ಮದ ಜೀವಂತ ಆಚರಣೆಯಾಗಿದೆ. ಗುರು ಎಂದರೆ ಕೇವಲ ಬೋಧಿಸುವ ವ್ಯಕ್ತಿಯಲ್ಲ. ಅಜ್ಞಾನದಿಂದ ಜ್ಞಾನದ ಕಡೆಗೆ ಗೊಂದಲಗಳಿಂದ ಸ್ಪಷ್ಟತೆಯ ಕಡೆಗೆ ಮತ್ತು ತಪ್ಪು ದಾರಿಯಿಂದ ಸನ್ಮಾರ್ಗದ ಕಡೆಗೆ ನಡೆಸುವ ಮಾರ್ಗದರ್ಶಕನಾಗಿದ್ದಾನೆ. ಸುಬೋಧ ಚಿಂತನೆ ಕೃತಿಯಲ್ಲಿನ ಅತ್ಯಮೂಲ್ಯವಾದ ವಿಚಾರಗಳನ್ನು ಅರಿತು ಬಾಳಿದರೆ ಜೀವನ ಸಾರ್ಥಕಗೊಳ್ಳುವುದೆಂದರು.

ವ್ಯಸನದ ಕತ್ತಲೆಯಿಂದ ವಿವೇಕದ ಬೆಳಕಿನೆಡೆಗೆ ವಿಚಾರವಾಗಿ ಶಿವಗಂಗಾ ಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವ್ಯಸನವು ಮನುಷ್ಯನ ಬದುಕನ್ನು ಹಾಳು ಮಾಡುತ್ತದೆ. ಧರ್ಮವು ಅವನ ಅಂತರಂಗದ ಬೆಳಕನ್ನು ಜಾಗೃತಗೊಳಿಸುತ್ತದೆ. ಜೀವನದಲ್ಲಿ ಬೇಕಾದಷ್ಟು ಸಾಧನೆ ಮಾಡಿದವರು ದುಶ್ಚಟಗಳಿಗೆ ಬಲಿಯಾದರೆ ಜೀವನ ಆದರ್ಶವಾಗಿರಲು ಸಾಧ್ಯವಾಗದು. ಧರ್ಮ ವಿವೇಕ ಆತ್ಮಜ್ಞಾನ ಮತ್ತು ಸತ್ಸಂಗಗಳು ಮನುಷ್ಯನಿಗೆ ಸರಿಯಾದ ದಾರಿಯನ್ನು ತೋರಿಸುವ ದೀಪಗಳಾಗುತ್ತವೆ. ಮಧ್ಯಪಾನ ತಂಬಾಕು ಸೇವನೆ ಮಾದಕ ವಸ್ತುಗಳ ಬಳಕೆ ಜೂಜಾಟ ಹಾಗೂ ನಿಯಂತ್ರಣ ತಪ್ಪಿದ ಬದುಕು ಜೀವನವನ್ನು ಹಾನಿಗೊಳಿಸುತ್ತದೆ. ಸಜ್ಜನರ ಒಡನಾಟದಲ್ಲಿ ಬದುಕಿ ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ಪ್ರಾಸ್ತಾವಿಕವಾಗಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಾಳೆಗೊಂದು ಗೊನೆ ಇರುವಂತೆ ಮನುಷ್ಯನ ಬಾಳಿಗೊಂದು ಗುರಿ ಇರಬೇಕು. ಸತ್ಯಾನ್ವೇಷಣೆಯ ಹಾದಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಯಾಗುತ್ತದೆ. ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟು ಇದೆ. ಮಾನವನ ಮನಸ್ಸು ಬುದ್ಧಿ ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ಜನಮನದಲ್ಲಿ ಜಾಗೃತಿ ಉಂಟುಮಾಡುವ ಅದ್ದೂರಿ ಸಮಾರಂಭ ಇದಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಸಿಂದಗಿ ಸಾರಂಗ ಗಚ್ಚಿನ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದ ಕಡೆಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಸಾವಿನಿಂದ ಸಾವಿಲ್ಲದ ಕಡೆಗೆ ಮುನ್ನಡೆ ಗುರಿ ಮನುಷ್ಯನದಾಗಬೇಕು. ಆತ್ಮ ವಿಶ್ವಾಸ ನಿಶ್ಚಿತವಾದ ಗುರಿ ಮತ್ತು ಸಂಯಮ ಇವು ಯಶದ ಹಾದಿಗೆ ಒಯ್ಯುವ ಪ್ರಮುಖ ಅಂಶಗಳಾಗಿವೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡು ಮುಖ್ಯ. ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವ ಸಿದ್ಧಾಂತಗಳ ವಿಚಾರಧಾರೆ ಮಾನವ ಜೀವನದ ವಿಕಾಸಕ್ಕೆ ಅಡಿಪಾಯ. ಜಮಖಂಡಿಯಲ್ಲಿ ನಡೆದಿರುವ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಯಜ್ಞ ಸಕಲರ ಬಾಳಿಗೆ ಬೆಳಕು ತೋರಲಿದೆ ಎಂದರು.

ಮುತ್ತೂರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ. ಪಟ್ಟಣಶೆಟ್ಟಿ, ಭಾಗವಹಿಸಿದ್ದರು. ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಉಪಸ್ಥಿತರಿದ್ದರು.

ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಹುನ್ನೂರಿನ ಬಸಯ್ಯ ಸಿದ್ದಗಿರಿಮಠ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ಶ್ರೀ ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *