ಪೊಲೀಸ್ ಹೆಡ್ ಕ್ವಾರ್ಟರ್ಸ್ ಸರ್ಕಾರಿ ಹಿ.ಪ್ರಾ. ಉರ್ದು ಶಾಲೆ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ
ಧಾರವಾಡ
ವಿದ್ಯಾರ್ಜನೆಯ ಜ್ಞಾನದ ಜೊತೆಗೆ ಜೀವನ ಮೌಲ್ಯಗಳನ್ನು ಅರಿತು ಯಾವುದಾದರೂ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಮೆರಗು ತರುವ ಸಾಧನೆ ಮಾಡಿ ಉನ್ನತ ವ್ಯಕ್ತಿತ್ವದ ಗೌರವ ಸಂಪಾದಿಸಲು ಶ್ರಮಿಸಬೇಕೆಂದು ಪ್ರೌಢ ಶಾಲಾ ನಿವೃತ್ತ ಅಧ್ಯಾಪಕ ಜಿ.ಎನ್. ಹೊಸಮನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಹಳೆಯ ವಿದ್ಯಾರ್ಥಿಗಳು (1985-2004) ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾವೇಶದಲ್ಲಿ ಶಿಷ್ಯರು ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಸತ್ಯ-ಶುದ್ಧ ಸಜ್ಜನಿಕೆಯ ಸನ್ನಡತೆಗಳು ಮನುಷ್ಯನ ಮೌಲ್ಯವನ್ನು ಹೆಚ್ಚಿಸುತ್ತವೆ ಎಂದರು.
ಸನ್ಮಾನಿತ ಇತರ ಶಿಕ್ಷಕರಾದ ಎಚ್.ವೈ. ಜೋರಮಮ್ಮನವರ, ಎ.ಎಚ್. ಕರ್ಜಗಿ, ಫಾತಿಮಾ ಮೊರಬ, ಹೀನಾಕೌಸರ ಮುಲ್ಲಾ ಮಾತನಾಡಿ, ನಮ್ಮ ಬೋಧನೆಯಡಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ಶ್ರೇಷ್ಠತೆ ಸಂಪಾದಿಸಬೇಕೆಂಬುದೇ ಶಿಕ್ಷಕ-ಶಿಕ್ಷಕಿಯರೆಲ್ಲರ ಮನದಾಳದ ಬಯಕೆ ಎಂದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ನಿಸಾರ್ಅಹಮದ್ ಕರಡಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ ಪರವಾಗಿ ಶಾಹಿನ್ಕೌಸರ್ ಅಡ್ಡೇವಾಲೆ, ಆಸೀಫ್ ಕರಡಿ, ಹಸೀನಾ ಬಾಗಲಕೋಟ, ಕೆ.ಎಂ. ಬಿಸ್ತಿ, ಎ.ಎಂ. ಪೀರಜಾದೆ, ಆಯಿಶಾ ಬಾಗಲಕೋಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಅಕ್ಷರ ಜ್ಞಾನದ ಜೊತೆಗೆ ಶಿಸ್ತು, ಸಮಯ ಪ್ರಜ್ಞೆ, ಲೋಕ ಜ್ಞಾನ ಸಂಪಾದನೆ, ತಂದೆ-ತಾಯಿ ಮತ್ತು ದೇಶ ಸೇವೆ ಮಾಡುವಲ್ಲಿ ಶಿಕ್ಷಕ-ಶಿಕ್ಷಕಿಯರು ನೀಡಿರುವ ಮಾರ್ಗದರ್ಶನ ಸದಾ ಸ್ಮರಣೀಯವಾಗಿದೆ ಎಂದರು.
ಶಾಹಿನ್ ಶಿವಳ್ಳಿ ಸ್ವಾಗತಿಸಿದರು. ಅಂಜುಮ್ ಕಿತ್ತೂರ ಹಾಗೂ ರಿಹಾನಾ ಜಾಗಿರದಾರ ನಿರೂಪಿಸಿದರು. ಶಮೀಮ್ ಮಾಣಿಕ್ ವಂದಿಸಿದರು. ತಮಗೆ ಅಕ್ಷರದ ಬೆಳಕು ನೀಡಿದ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೆ ಮೈಸೂರು ಪೇಟ ಹಾಕಿ ಶಾಲು ಹೊದಿಸಿ ನೆನಪಿನ ಕಾಣಿಕೆ ಮತ್ತು ಫಲ-ಪುಷ್ಪ ನೀಡಿ ವಿದ್ಯಾರ್ಥಿಗಳು ಗೌರವಿಸಿದರು.

