ಆಯುರ್ವೇದ, ಯೋಗದ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಿ: ಸಿದ್ದನಗೌಡರ

ಹಂಚಿಕೊಳ್ಳಿ

ಧಾರವಾಡ
ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಯೋಗಾಭ್ಯಾಸವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಆಯುಷ್ಯ ಅಭಿಯಾನದಡಿ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.

ಆಯುರ್ವೇದವು ಭಾರತ ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಆಯುರ್ವೇದ ಹಾಗೂ ಯೋಗವು ಪುರಾತನ ಕಾಲದಿಂದಲೂ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಒಂದು ಹಂತದಲ್ಲಿ ಭಾರತದಲ್ಲಿಯೇ ಆಯುರ್ವೇದ ಪದ್ಧತಿಗೆ ಸೂಕ್ತವಾದ ಪ್ರಾಮುಖ್ಯತೆ ದೊರೆಯದೆ ಹಿಂದುಳಿಯುವಂತಾಗಿತ್ತು. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಹಾಗೂ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಆಯುಷ್ಯ ಇಲಾಖೆಯ ವತಿಯಿಂದ ಆಯುರ್ವೇದ ಮತ್ತು ಆಯುಷ್ಯ ಚಿಕಿತ್ಸಾ ಪದ್ಧತಿಗಳ ಕುರಿತು ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ದೇಶ ಮಾತ್ರವಲ್ಲದೆ ಜಗತ್ತಿನ ವಿವಿಧ ಭಾಗಗಳಲ್ಲಿಯೂ ಆಯುರ್ವೇದ ಹಾಗೂ ಯೋಗದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ ಎಂದು ತಿಳಿಸಿದರು.

ಆಯುರ್ವೇದ ಮತ್ತು ಆಯುಷ್ಯ ಚಿಕಿತ್ಸಾ ಪದ್ಧತಿಗಳು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಆಯುಷ್ಯ ಇಲಾಖೆಯ ವತಿಯಿಂದ ನಡೆಯುವ ಕಾರ್ಯಕ್ರಮಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ನೌಕರರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇಂದಿನ ದಿನಗಳಲ್ಲಿ ನೌಕರರು ವಿವಿಧ ರೀತಿಯ ಕೆಲಸದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗುವುದರಿಂದ ಹಿಡಿದು ಸಂಜೆವರೆಗೆ ಕೆಲಸ, ಸಭೆಗಳು, ವರದಿಗಳ ಸಲ್ಲಿಕೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಒತ್ತಡದ ನಡುವೆಯೇ ನೌಕರರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯಕ್ಕೆ ಕೊನೆಯ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಉತ್ತಮ ಆರೋಗ್ಯವಿಲ್ಲದೆ ಯಾವುದೇ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಕರ್ತವ್ಯದಷ್ಟೇ ತಮ್ಮ ಆರೋಗ್ಯಕ್ಕೂ ನೌಕರರು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಆಹಾರ ಕ್ರಮ, ವ್ಯಾಯಾಮ, ಯೋಗಕ್ಕೆ ಆದ್ಯತೆ ನೀಡಿ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ, ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಹಾಗೂ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಲು ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಯೋಗಾಭ್ಯಾಸ ಮಾಡುವುದು ಅಗತ್ಯವಾಗಿದೆ. ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯದೊಂದಿಗೆ ಕರ್ತವ್ಯ ನಿರ್ವಹಿಸಿದಾಗ ವೈಯಕ್ತಿಕ ಜೀವನದ ಜೊತೆಗೆ ಇಲಾಖೆಯ ಕೆಲಸಗಳನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಆಯುಷ್ಯ ಹಿರಿಯ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ, ಡಾ. ಎಸ್.ಪಿ. ಕೊಟ್ಟೂರ, ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ರಚನಾ ಯಾದವರಾವ್ ಅಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಆಯುರ್ವೇದ ಸಿದ್ಧಾಂತದ ಮಹತ್ವದ ಬಗ್ಗೆ ಉಪನ್ಯಾಸ ಮತ್ತು ಪ್ರದರ್ಶನ ಕಾರ್ಯಕ್ರಮ ನೀಡಿದರು.

ಆಯುಷ್ಯ ವೈದ್ಯಾಧಿಕಾರಿ ಡಾ. ಆಶಾ ಎನ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಆಯುಷ್ಯ ವೈದ್ಯಾಧಿಕಾರಿ ಡಾ. ಅಮೃತ ಪಾಸ್ತೆ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಸಂಕದಾಳ ವಂದಿಸಿದರು.

ಜಿಲ್ಲಾ ಆಯುಷ್ಯ ವೈದ್ಯಾಧಿಕಾರಿ ಡಾ. ಗಣೇಶ ಎಸ್. ಕಬಾಡೆ, ಸತ್ಯಸಾಯಿ ಹೋಮಿಯೋಪತಿ ಮಹಾವಿದ್ಯಾಲಯದ ಪ್ರಾಂಶುಪಾಲ ಸುಹನ್ ಮುನಗತ್ತಿ, ನವಲಗುಂದ ಆಯುರ್ವೇದ ವೈದ್ಯಾಧಿಕಾರಿ ಡಾ. ಬಿ.ಪಿ. ಪೂಜಾರಿ, ಡಾ. ಸವಿತಾ ಹುಣಸಿಮರದ, ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಹಳೇಪೇಟ್ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಆಯುಷ್ಯ ಮಹಾವಿದ್ಯಾಲಯಗಳ ಸಿಬ್ಬಂದಿಗಳು, ಖಾಸಗಿ ಆಯುಷ್ಯ ಸಂಸ್ಥೆಯವರು ಹಾಗೂ ಕರ್ನಾಟಕ ಸರ್ಕಾರಿ ಆಯುಷ್ಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *