ನರೇಗಲ್
ಇಂದಿನ ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ಮೌಲ್ಯಗಳ ಸಂರಕ್ಷಣೆಯ ಅವಶ್ಯಕತೆಯಿದೆ. ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ನಮ್ಮ ನೆಲದ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅರಿತು ಬಾಳಲು ಮುಂದಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ಅಬ್ಬಿಗೇರಿ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ನೂತನ ರಥದ ಉದ್ಘಾಟನೆ ಹಾಗೂ ಲಿಂ. ಸೋಮಶೇಖರ ಶ್ರೀಗಳವರ 6ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಬಹಳ ಮುಖ್ಯ. ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಮೌಲ್ಯಗಳನ್ನು ನೆನಪಿಸುವ ಜಾಗೃತಿಯ ಕೇಂದ್ರಗಳಾಗಬೇಕು. ಧರ್ಮ ಮತ್ತು ಸಮಾಜದ ನಡುವೆ ಮತ್ತಷ್ಟು ಗಟ್ಟಿಯಾದ ಬಾಂಧವ್ಯವನ್ನು ಹೊಂದುವಂತಾಗಬೇಕು. ಸಂಸ್ಕಾರಯುತ ಮತ್ತು ಸೌಹಾರ್ದಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ತತ್ವ ಸಿದ್ಧಾಂತಗಳು ಸಕಲರಿಗೂ ದಾರಿದೀಪ ಎಂದರು.
ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ರಥಕ್ಕೆ ವಿಶಿಷ್ಟವಾದ ಮಹತ್ವವಿದೆ. ರಥ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ವಾಹನವಲ್ಲ. ಅದು ನಿರಂತರವಾಗಿ ಜನಜೀವನದ ನಡುವೆ ಹರಿಯಬೇಕಾದ ಜೀವಂತ ಚಿಂತನೆಯ ಸಂಕೇತವಾಗಿದೆ. ಶಿವಭಕ್ತಿ, ಸದಾಚಾರ, ಸತ್ಯನಿಷ್ಠೆ, ಕಾಯಕ, ದಾಸೋಹ ಮನೋಭಾವ ಮತ್ತು ಮಾನವೀಯತೆಯನ್ನು ಬೆಳೆಸಲು ಪ್ರೇರಣೆ. ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರು ಆಡಿದ ಮಾತಿನಂತೆ ನಡೆದು ಭಕ್ತರ ಬಾಳಿಗೆ ಬೆಳಕು ತೋರಿದವರು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸ್ಮರಣೆಗೆ ಸಮಾರಂಭ ಸೀಮಿತವಾಗದೇ ಅವರು ನಂಬಿದ ಮೌಲ್ಯಗಳನ್ನು ಅರಿತು ಆ ದಾರಿಯಲ್ಲಿ ನಡೆಯುವ ಸಂಕಲ್ಪವೇ ನಿಜವಾದ ಪುಣ್ಯ ಸ್ಮರಣೆಯೆಂದರು.
ಸಮಾರಂಭ ಉದ್ಘಾಟಿಸಿ ಗೌರವ ಸ್ವೀಕರಿಸಿದ ವಿಧಾನ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ನಮಗೂ ಅಬ್ಬಿಗೇರಿ ಹಿರೇಮಠಕ್ಕೂ ಇರುವ ಸಂಬಂಧ ಎಂದಿಗೂ ಮರೆಯಲಾಗದು. ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣವಾಗಿವೆ. ಸಂಸ್ಕಾರಯುಕ್ತ ಮೌಲಿಕ ಜೀವನಕ್ಕೆ ಧರ್ಮದ-ಆಧ್ಯಾತ್ಮ ಚಿಂತನೆಗಳು ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಆಧ್ಯಾತ್ಮಿಕ ಚಿಂತನಗಳು ಸಮಾಜದ ಸಾಮರಸ್ಯಕ್ಕೆ ಚುಂಬಕ ಶಕ್ತಿಯನ್ನು ಹೊಂದಿವೆ ಎಂದರು.
ನುಡಿ ನಮನ ಸಲ್ಲಿಸಿದ ಅಬ್ಬಿಗೇರಿ-ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಮಾತನಾಡಿ ಧರ್ಮದ ನಿಜವಾದ ಶಕ್ತಿ ಮಠ ದೇವಾಲಯದಲ್ಲಿ ಮಾತ್ರವಲ್ಲ. ಅದು ಮನುಷ್ಯನ ನಡವಳಿಕೆಯಲ್ಲಿ ಸಮಾಜ ಸೇವೆಯಲ್ಲಿ ಪರಸ್ಪರ ಗೌರವದಲ್ಲಿ ಮತ್ತು ಸತ್ಕಾರ್ಯಗಳಲ್ಲಿ ವ್ಯಕ್ತವಾಗಬೇಕು. ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರು ಕಂಡ ನೂತನ ಮಠದ ಸ್ಥಾಪನೆ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರ ರಥ ಎರಡೂ ಕನಸು ನನಸಾದ ಅಪೂರ್ವ ಘಳಿಗೆ. ಅವರ ಕ್ರಿಯಾಶೀಲ ಬದುಕು ನಮ್ಮೆಲ್ಲರ ಪ್ರಗತಿಗೆ ಅಡಿಪಾಯವೆಂದರು.
ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಜಕ್ಕಲಿ ವಿಶ್ವಾರಾಧ್ಯ ಶಿವಾಚಾರ್ಯರು, ಗುಳೇದಗುಡ್ಡದ ಒಪ್ಪತ್ತೇಶ್ವರ ಶಿವಾಚಾರ್ಯರು, ಅಬ್ಬಿಗೇರಿ ಡಾ.ಬಸವರಾಜ ಶರಣರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ನೂತನ ರಥಕ್ಕೆ ಸಹಕರಿಸಿದ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಗದುಗಿನ ವೀರೇಶ ಕೂಗು ಸ್ವಾಗತಿಸಿದರು. ಅಂದಪ್ಪ ಅಬ್ಬಿಗೇರಿ ನಿರೂಪಿಸಿದರು. ಗ್ರಾಮದ ಹಿರೇಮಠದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಲಿಂಗೈಕ್ಯ ಶ್ರೀಗಳವರ ಭಾವಚಿತ್ರ, ನೂತನ ರಥದ ಕಳಸ, ಹಗ್ಗವು ಮೆರವಣಿಗೆ ಮೂಲಕ ಸಾಗಿ ಬೆಳಿಗ್ಗೆ ನೂತನ ರಥಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಚಾಲನೆಯನ್ನಿತ್ತರು. ಸುರೇಶ ಸಂಗಪ್ಪ ನಾಯ್ಕರ ದಾಸೋಹ ಸೇವೆಯನ್ನು ಸಲ್ಲಿಸಿದರು.

