ರಣಜಿ: ಕರುಣ್ ಹೋರಾಟದ ಶತಕ, ಸೋಲಿನಿಂದ ಪಾರಾದ ಹಾಲಿ ರನ್ನರ್-ಅಪ್’ ಕರ್ನಾಟಕ

ಹಂಚಿಕೊಳ್ಳಿ

ಮಲಪಾಡು(ವಿಜಯವಾಡ)
ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಕರ್ನಾಟಕಕ್ಕೆ, ಅನುಭವಿ ಬ್ಯಾಟರ್ ಕರುಣ್ ನಾಯರ್ ಅವರ ಹೋರಾಟದ ಶತಕ ಆಸರೆಯಾಯಿತು.

ಆಂಧ್ರಕ್ಕೆ ಮೊದಲ ಸರದಿಯ ಮುನ್ನಡೆಯ ಆಧಾರದ ಮೇಲೆ ೩ ಪಾಯಿಂಟ್ ಬಿಟ್ಟಕೊಟ್ಟ ರಣಜಿ ಟ್ರೋಫಿ ಪಂದ್ಯಾವಳಿಯ ಕಳೆದ ಸಲದ ರನ್ನರ್-ಅಪ್’ ಕರ್ನಾಟಕ ನಾಲ್ಕು ದಿನಗಳ ಮೊದಲ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡು ೧ ಪಾಯಿಂಟ್‌ನಿಂದ ಸಮಾಧಾನ ಪಟ್ಟುಕೊಂಡಿತು.

ಇಲ್ಲಿಯ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ತನ್ನ ಎರಡನೇ ಸರದಿಯ ಆಟ ಮುಂದುವರಿಸಿದ ಕರ್ನಾಟಕ ನಾಯಕ ಸ್ಮರಣ್ ರವಿಚಂದ್ರನ್(೨೧) ವಿಕೆಟ್ ಕಳೆದುಕೊಂಡಾಗ ಸೋಲು ಕಟ್ಟಿಟ್ಟ ಬುತ್ತಿ ಎಂದೆನಿಸಿತ್ತು. ಆದರೆ ಕರುಣ್ ನಾಯರ್ ಅದಕ್ಕೆ ಆಸ್ಪದ ನೀಡಲಿಲ್ಲ. ೨೪೨ ಎಸೆತಗಳ ಕಾಲ ನಡೆಸಿದ ಹೋರಾಟದಲ್ಲಿ ೧೬ ಬೌಂಡರಿ ಹಾಗೂ ೨ ಸಿಕ್ಸರ್ ಸಹಿತದ ೧೫೫ ರನ್‌ಗಳೊಂದಿಗೆ ಅಜೇಯರಾಗುಳಿದು ಕರ್ನಾಟಕದ ಮಾನ ಕಾಪಾಡಿದರು.

ಕೆಳ ಕ್ರಮಾಂಕದ ಬ್ಯಾಟರ್‌ಗಳಾದ ಮಾಧವ ಬಜಾಜ(೨೭, ೪೩ ಎಸೆತ, ೩ ಬೌಂಡರಿ), ರಿತೇಶ ಭಟ್ಕಳ(೨೩, ೪೪ ಎಸೆತ, ೩ ಬೌಂಡರಿ) ಹಾಗೂ ಕೆ.ಎಲ್. ಶ್ರೀಜಿತ್(೧೯, ೩೧ ಎಸೆತ, ೩ ಬೌಂಡರಿ) ವಿಕೆಟ್ ಮೇಲೆ ಕಾಲ ಕಳೆದಿದ್ದಲ್ಲದೇ ಮಹತ್ವದ ರನ್‌ಗಳನ್ನೂ ಕೂಡಿಹಾಕಿ ತಂಡವನ್ನು ಸೋಲಿನ ಆತಂಕದಿAದ ಪಾರು ಮಾಡಿದರು. ಎಡಗೈ ಸ್ಪಿನ್ನರ್‌ಗಳಾದ ಲಲಿತ್ ಮೋಹನ್(೫/೧೧೭) ಫೈಫರ್’ ಸಾಧನೆ ದಾಖಲಿಸಿದರೆ, ಸೌರಭ್ ಕುಮಾರ(೩/೮೫) ಅವರೂ ಮಿಂಚಿದರು.

ಆಂಧ್ರಕ್ಕೂ ಆತಂಕ:
ಉಳಿದಿದ್ದ ಸುಮಾರು ೪೪ ಓವರ್‌ಗಳ ಆಟದಲ್ಲಿ ನಿಚ್ಚಳ ಗೆಲುವಿಗಾಗಿ ೧೯೪ ರನ್‌ಗಳಿಸಬೇಕಿದ್ದ ಆಂಧ್ರ ಒಂದು ಹಂತದಲ್ಲಿ ೨೫ ಓವರ್‌ಗಳಲ್ಲಿ ೫೩ರ ಮೊತ್ತದೊಳಗೇ ಹೇಮಂತ ರೆಡ್ಡಿ(೦), ಶೇಖ್ ರಶೀದ್(೭), ರಿಕಿ ಭುಯಿ(೧೨) ಹಾಗೂ ಅಭಿಷೇಕ ರೆಡ್ಡಿ(೨೯) ಅವರುಗಳ ವಿಕೆಟ್‌ಗಳನ್ನು ಕಳೆದುಕೊಂಡಾಗ ಆಂಧ್ರದ ಶಿಬಿರದಲ್ಲಿ ಆತಂಕ ಮೂಡಿತ್ತು. ಆದರೆ ಜೊತೆಗೂಡಿದ ಮೊದಲ ಸರದಿಯ ಶತಕ ವೀರ’ ಶ್ರೀರಾಮ ವೆಂಕಟ ರಾಹುಲ್(ಔಟಾಗದೇ ೩೫, ೮೫ ಎಸೆತ, ೫ ಬೌಂಡರಿ) ಹಾಗೂ ರೇವಂತ ರೆಡ್ಡಿ(ಔಟಾಗದೇ ೨೦, ೫೨ ಎಸೆತ, ೪ ಬೌಂಡರಿ) ಹೆಚ್ಚಿನ ಅಪಾಯಕ್ಕೆ ಎಡೆಗೊಡದೇ ಉಳಿದ ಸಮಯ ಕ್ರೀಸ್ ಕಾಯ್ದುಕೊಂಡು ಮಹತ್ವದ ೩ ಪಾಯಿಂಟ್ ಆಂಧ್ರದ ಕೈಬಿಡದಂತೆ ನೋಡಿಕೊಂಡರು.

ಕರ್ನಾಟಕದ ಪರ ಮೊದಲ ಸರದಿಯಲ್ಲಿ ಆರು ವಿಕೆಟ್ ಕಬಳಿಸಿದ್ದ ಎಡಗೈ ಸ್ಪಿನ್ನರ್ ಶಿಖರ ಶೆಟ್ಟಿ(೨/೩೨) ಮತ್ತೆ ಎರಡು ವಿಕೆಟ್ ಗಳಿಸಿಕೊಂಡರೆ ತಮ್ಮ ಚೊಚ್ಚಲ ರಣಜಿ ಪಂದ್ಯವನ್ನಾಡಿದ ಮಾಧವ ಬಜಾಜ ಹಾಗೂ `ಕಾರವಾರದ ಹುಡುಗ’ ರಿತೇಶ ಭಟ್ಕಳ ತಲಾ ಒಂದೊಂದು ವಿಕೆಟ್ ಸಂಪಾದಿಸಿದರು.

ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: ೮೨.೨ ಓವರ್‌ಗಳಲ್ಲಿ ೨೭೪ ಹಾಗೂ ೧೦೩ ಓವರ್‌ಗಳಲ್ಲಿ ೯ ವಿಕೆಟ್‌ಗಳಿಗೆ ೩೩೭ ಡಿಕ್ಲೇರ್ಡ್, ಆಂಧ್ರ: ೧೨೧.೫ ಓವರ್‌ಗಳಲ್ಲಿ ೪೧೮ ಹಾಗೂ ೪೪ ಓವರ್‌ಗಳಲ್ಲಿ ೪ ವಿಕೆಟ್‌ಗಳಿಗೆ ೧೦೪. ಫಲಿತಾಂಶ: ಪಂದ್ಯ ಡ್ರಾ. ಪಾಯಿಂಟ್‌ಗಳು: ಆಂಧ್ರ-೩, ಕರ್ನಾಟಕ-೧.


ಹಂಚಿಕೊಳ್ಳಿ

Leave a Reply

Your email address will not be published. Required fields are marked *