ಜಮಖಂಡಿ
ಶಿವಾಗಮಗಳಲ್ಲಿ ಶಿವತತ್ವ ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ ವಚನಗಳು ಶಿವತತ್ವವನ್ನು ಜೀವನದ ಅನುಭವದೊಂದಿಗೆ ಬೆಸೆಯುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಶ್ರೀ ಗುರುವು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವವನು. ಶಿಷ್ಯನಿಗೆ ಶಿವತತ್ವ ಲಿಂಗದ ಮಹತ್ವ ಆಧ್ಯಾತ್ಮಿಕ ಸಾಧನೆ ಮತ್ತು ನೈತಿಕ ಜೀವನ ಕುರಿತು ಮಾರ್ಗದರ್ಶನ ನೀಡುತ್ತಾನೆ. ಗುರು ಕೃಪೆಯಿಂದ ಶಿಷ್ಯನಲ್ಲಿ ಆತ್ಮವಿಶ್ವಾಸ ವಿವೇಕ ಮತ್ತು ಆತ್ಮ ಪರಿಶೀಲನೆಯ ಗುಣಗಳು ಬೆಳೆಯುತ್ತವೆ. ವೀರಶೈವ ಪರಂಪರೆಯಲ್ಲಿ ಸಿದ್ದಾಂತ ಸಾಧನೆ ಮತ್ತು ಸಂಪ್ರದಾಯಗಳ ಸಂರಕ್ಷಣೆಯಲ್ಲಿ ಗುರುಪೀಠಗಳು ಹಾಗೂ ಮಠಗಳು ಮಹತ್ವದ ಪಾತ್ರವಹಿಸಿವೆ ಎಂದು ತಿಳಿಸಿದರು.
ಗುರು ಪರಂಪರೆಯು ಆಧ್ಯಾತ್ಮಿಕ ಜ್ಞಾನ ಶಿವತತ್ವ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಪರಂಪರೆಯಾಗಿದೆ. ಶಿವಾಗಮಗಳು ಪೂಜೆ ದೀಕ್ಷೆ ಯೋಗ ಮತ್ತು ಸಾಧನೆಗಳಿಗೆ ಮಾರ್ಗದರ್ಶನ ನೀಡಿದರೆ ವಚನಗಳು ಕಾಯಕ ದಾಸೋಹ ಮತ್ತು ಸದಾಚಾರಕ್ಕೆ ಪ್ರೇರಣೆ ನೀಡುತ್ತವೆ. ಶಿವಾಗಮಗಳು ಆಧ್ಯಾತ್ಮಿಕ ಸಾಧನೆಯ ಕ್ರಮಗಳನ್ನು ತಿಳಿಸಿದರೆ ವಚನಗಳು ಆಧ್ಯಾತ್ಮಿಕ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಪಾಲಿಸಲು ತಿಳಿಸುತ್ತದೆ. ಶಿವಾಗಮಗಳು ಪರಂಪರೆಯ ತಾತ್ವಿಕ ಅಡಿಪಾಯ ಒದಗಿಸಿದರೆ ವಚನಗಳು ಅನುಭವದ ಮೂಲಕ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ. ಶಿವಾಗಮಗಳು ಕೇವಲ ಪೂಜಾ ವಿಧಾನಗಳನ್ನು ತಿಳಿಸುವ ಗ್ರಂಥಗಳಲ್ಲ. ನಾವು ಶಿವ ತತ್ವವನ್ನು ಅರಿಯುವ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗದರ್ಶಿಗಳಾಗಿವೆ ಎಂದರು.
ವಚನಗಳು ಪಾಂಡಿತ್ಯದ ಪ್ರದರ್ಶನಕ್ಕಿಂತ ಜೀವನದ ಅನುಭವಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಸರಳವಾದ ಕನ್ನಡ ಭಾಷೆಯ ಮೂಲಕ ಗಹನವಾದ ತತ್ವಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿ 28 ಶಿವಾಗಮಗಳ ಸಾರ ಸರ್ವಸ್ವವನ್ನು ಒಳಗೊಂಡಿದೆ. ಶರಣರ ವಚನಗಳಲ್ಲಿ ಸಿದ್ಧಾಂತ ಶಿಖಾಮಣಿಯ ವಿಚಾರಧಾರೆಗಳು ಮೂಡಿಬಂದಿವೆ. ಈ ಎರಡರಲ್ಲಿ ಭೇದಭಾವ ಕಲ್ಪಿಸುವ ಧರ್ಮ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಕಾರ್ಯವನ್ನು ಯಾರೂ ಕೂಡಾ ಮಾಡಬಾರದು. ಆರೋಗ್ಯಪೂರ್ಣ ಸದೃಢ ಸಮಾಜ ನಿರ್ಮಾಣಕ್ಕೆ ಪೂರ್ವಜರ ಚಿಂತನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ ಎಂದರು.
ಸಣ್ಣ ಕೈಗಾರಿಕೆ ಸಚಿವ ಡಾ. ವಿಜಯಾನಂದ ಕಾಶಪ್ಪನವರ ಮಾತನಾಡಿ, ವೀರಶೈವ ಧರ್ಮಕ್ಕೆ ಸುಧೀರ್ಘವಾದ ಪರಂಪರೆ ಇದೆ. ತನ್ನೊಂದಿಗೆ ಇತರ ಸಮಾಜ ಬಾಂಧವರನ್ನು ಬೆಳೆಸುವಂಥ ವಿಶಾಲ ಗುಣಧರ್ಮಗಳನ್ನು ಈ ಧರ್ಮ ಹೊಂದಿದೆ. ವೀರಶೈವ ಪಂಚಪೀಠಗಳು ರಾಷ್ಟ್ರೀಯ ಗುರು ಪೀಠಗಳಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿವೆ. 12ನೇ ಶತಮಾನದ ಬಸವಾದಿ ಶರಣರು ಈ ಧರ್ಮವನ್ನು ಬೆಳೆಸಲು ಮತ್ತಷ್ಟು ಪ್ರಯತ್ನ ಪಟ್ಟಿರುವುದನ್ನು ಮರೆಯಲಾಗದು. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಭಕ್ತರ ಬಾಳಿನ ಭಾಗ್ಯೋದಯವಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಹಿಂದುತ್ವದಿಂದ ಬೇರ್ಪಡಿಸುವ ಹುನ್ನಾರ ಕೆಲವರಿಂದ ಆಗಾಗ ನಡೆಯುತ್ತಲೇ ಇದೆ. ಇದಕ್ಕೆ ಪ್ರಜ್ಞಾವಂತ ಸಮಾಜ ಎಂದಿಗೂ ಅವಕಾಶ ಕೊಟ್ಟಿಲ್ಲ. ಹಿಂದುತ್ವ ಅಲ್ಲಗಳಿದರೆ ಧರ್ಮ ಸಂಸ್ಕೃತಿ ಪರಂಪರೆ ಒಂದೂ ಉಳಿಯಲಾರವು. ವೀರಶೈವ ಧರ್ಮದ ಉತ್ಕೃಷ್ಟ ಮೌಲ್ಯಗಳು ಎಲ್ಲ ಜಾತಿ ಜನಾಂಗಕ್ಕೆ ಆಶಾಕಿರಣವಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ನಾಡಹಬ್ಬ ಜನಮನವನ್ನು ಪರಿಶುದ್ಧಗೊಳಿಸಲಿ ಎಂದರು.
ಪ್ರಶಸ್ತಿ: ಅಫಜಲ್ಪುರ ತಾಲೂಕಿನ ಚಿಣಮಗೇರಿ ಮಹಾಂತೇಶ್ವರ ಮಠದ ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿಯಿತ್ತು ಶುಭ ಹಾರೈಸಿದರು. ಕನ್ನೂರು-ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು.
ಉಪನ್ಯಾಸ: ಗುಳೇದಗುಡ್ಡದ ಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ ಮಾತನಾಡಿ, ಶಿವಾಗಮಗಳು ತಾತ್ವಿಕ ಮತ್ತು ಆಚರಣಾತ್ಮಕ ಅಡಿಪಾಯವನ್ನು ತಿಳಿಸಿದರೆ ವಚನಗಳು ಆ ತತ್ವಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಿಳಿಸಿವೆ. ವೀರಶೈವ ಪರಂಪರೆಯಲ್ಲಿ ಶಿವಾಗಮಗಳಿಗೆ ವಿಶೇಷ ಮಹತ್ವ ಇದೆ. ಶಿವನನ್ನು ಅರಿತುಕೊಳ್ಳುವ ಮಾರ್ಗವನ್ನು ಮತ್ತು ಧಾರ್ಮಿಕ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಆಚಾರ್ಯರು ತೋರಿದ ದಾರಿಯಲ್ಲಿ ಶರಣರು ಮುನ್ನಡೆದು ಜೀವನದಲ್ಲಿ ಶ್ರೇಯಸ್ಸು ಕಂಡರು. ಶಿವಾಗಮಗಳು ಮತ್ತು ವಚನ ಸಾಹಿತ್ಯ ವೀರಶೈವ ಧರ್ಮದ ಎರಡು ಕಣ್ಣು. ಈ ಎರಡನ್ನು ಸಮನ್ವಯಗೊಳಿಸಿ ಆಚರಿಸಿಕೊಂಡು ಬಂದರೆ ಸದೃಢ ಸಮಾಜ ಕಟ್ಟಲು ಸಾಧ್ಯವಾಗುವುದೆಂದರು.
ನೇತೃತ್ವ ವಹಿಸಿದ ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ತಂತ್ರಜ್ಞಾನ ಮತ್ತು ಆಧುನಿಕತೆ ಯುಗದಲ್ಲಿ ಮನುಷ್ಯನು ಜ್ಞಾನದಲ್ಲಿ ಮುಂದುವರಿದರೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ದೇವರನ್ನು ಕೇವಲ ಹೊರಗೆ ಹುಡುಕದೆ ಅಂತರAಗದಲ್ಲಿ ಅರಿಯಬೇಕೆಂಬುದನ್ನು ವೀರಶೈವ ಧರ್ಮ ಒತ್ತಿ ಹೇಳುತ್ತದೆ. ಜಾತಿ ಮತಗಳ ಹೆಸರಿನಲ್ಲಿ ಭೇದ ಭಾವ ಮಾಡದೆ ಎಲ್ಲರನ್ನೂ ಗೌರವಿಸುವ ಮತ್ತು ಪ್ರಾಮಾಣಿಕ ಜೀವನವನ್ನು ಅಳವಡಿಸಿಕೊಂಡು ಬಾಳಬೇಕೆಂಬುದನ್ನು ವೀರಶೈವ ಧರ್ಮ ಸಾರುತ್ತದೆ. ವೀರಶೈವ ಧರ್ಮದ ಪಂಚಪೀಠಗಳು ಮತ್ತು ಈ ನಾಡಿನ ಶಾಖಾಮಠಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಲೇ ಬಂದಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ಜಮಖಂಡಿ ದಸರಾ ಮಹೋತ್ಸವ ಜನಮನದಲ್ಲಿ ಪರಿಶುದ್ಧತೆಯ ವಾತಾವರಣವನ್ನು ನಿರ್ಮಾಣ ಮಾಡಿದೆ ಎಂದು ಹರುಷಪಟ್ಟರು.
ಜಮಖಂಡಿ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಉಪಸ್ಥಿತರಿದ್ದರು.
ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಿಕಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳು ಸದೃಢ ಸಮಾಜ ನಿರ್ಮಾಣಕ್ಕಾಗಿ ನಾಡಿನಾದ್ಯಂತ ನಿರಂತರ ಸಂಚರಿಸುತ್ತಿದ್ದಾರೆ. ದಸರಾ ಸಮಾರಂಭದ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಗುರುರಕ್ಷೆ: ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಪಂಚಗೃಹ ಹಿರೇಮಠ ಕಲಾದಗಿ, ಶ್ರೀ ಶ್ರೀಕಂಠಗೌಡ್ರು ಹಿರೇಗೌಡರ ಸೇರಿದಂತೆ ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಅತಿಥಿಗಳಾಗಿ ಜಮಖಂಡಿಯ ಭೀಮಶಿ ನಡುವಿನಮನಿ, ಆರ್.ಎಸ್. ಸಿಂಧಿ, ಪ್ರವೀಣ ಝಾಡ, ಗೋಪಾಲ ಕಟಾವಕರ, ಸಿದ್ದು ಪವಾರ ಪಾಲ್ಗೊಂಡಿದ್ದರು. ರಘು ಹಿರೇಮಠ ಇವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ರಕ್ಷಿತಾ ಕರಡಿ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.
ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ಆಕರ್ಷಕ ನಜರ್ ಸಮರ್ಪಣೆ ನಡೆಯಿತು. ಶಿವಾಚಾರ್ಯರಿಂದ, ಸಿಬ್ಬಂದಿ ವರ್ಗದವರಿಂದ, ಖಡ್ಗಧಾರಿಗಳಿಂದ, ದಂಡಧಾರಿಗಳಿಂದ, ಈಟಿಧಾರಿಗಳಿಂದ, ವಾರ್ತಾ ವಿಭಾಗದಿಂದ, ದಸರಾ ಸಮಿತಿಯವರಿಂದ, ಧರ್ಮಾಭಿಮಾನಿಗಳಿಂದ ಕೊನೆಗೆ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರಿಂದ ನಜರ್ ಸಮರ್ಪಣೆ ನಡೆಯಿತು. ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ನಿರೂಪಿಸಿದರು.

