ಕಾಕಮಿಗಹರಾ(ಜಪಾನ)
ಅಂತಿಮ ಕ್ಷಣದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಕಟು ವೈರಿ ಪಾಕಿಸ್ತಾನಕ್ಕೆ ೪-೩ ಗೋಲುಗಳ ಸೋಲಿನ ಶಾಕ್’ ನೀಡಿದ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಸಾಧಿಸಿದ ಈ ಸ್ಮರಣೀಯ ಗೆಲುವಿನೊಂದಿಗೆ ಭಾರತ, ದಿನಾಂಕ ೩ ರಂದು ನಡೆಯುವ ಬಂಗಾರದ ಬೇಟೆ’ಗೆ ಅರ್ಹತೆ ಗಳಿಸಿಕೊಂಡಿತಲ್ಲದೇ, ೨೦೨೮ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಸಂಪಾದಿಸಿಕೊಳ್ಳುವುದರಿಂದ ಇನ್ನೊಂದೇ ಒಂದು ಗೆಲುವಿನ ದೂರದಲ್ಲಿದೆ.
ಅತ್ತ ಮಹಿಳೆಯರ ತಂಡವೂ ಫೈನಲ್ ಪ್ರವೇಶಿಸಿರುವುದರ ಹಿನ್ನೆಲೆಯಲ್ಲಿ ೧೯೯೮ರ ನಂತರ ಮೊದಲ ಬಾರಿಗೆ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳೆರಡೂ ಏಷ್ಯನ್ ಕ್ರೀಡೆಗಳ ಒಂದೇ ಆವೃತ್ತಿಯಲ್ಲಿ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿರುವ ಸಾಧನೆಗೈದಿವೆ.
ಒಂದು ಹಂತದಲ್ಲಿ ೩-೦ ಗೋಲುಗಳ ಮುನ್ನಡೆ ಸಾಧಿಸಿ ಸುಲಭದ ಗೆಲುವಿನತ್ತ ಮುನ್ನುಗಿದ್ದ ಭಾರತಕ್ಕೆ ಪಾಕಿಸ್ತಾನ ಅನಿರೀಕ್ಷಿತ ಆಘಾತ ನೀಡಿ ಪಂದ್ಯವನ್ನು ೩-೩ರ ಸಮಸ್ಥಿತಿಗೆ ತಂದಿತ್ತು. ಆದರೆ ಕೊನೆಯ ನಿಮಿಷದಲ್ಲಿ ಅಭಿಷೇಕ ಗಳಿಸಿದ ಉತ್ಕೃಷ್ಟ ಗೋಲು ಭಾರತದ ಪಾಲಿಗೆ ವರದಾನವಾಯಿತು.
ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ಗಳಿಂದ ೫ ಹಾಗೂ ೧೩ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ ೨೩ನೇ ನಿಮಿಷದಲ್ಲಿ ಸುಖ್ಜೀತ್ ಸಿಂಗ್ ಸ್ಕೋರನ್ನು ೩-೦ಗೆ ಏರಿಸಿದರು. ಆದರೆ ೧೯ ನಿಮಿಷಗಳ ಅಂತರದದಲ್ಲಿ ಪಾಕಿಸ್ತಾನದ ಪರ ಅಬು ಮಹಮೂದ್(೩೦ನೇ ನಿಮಿಷ), ಹನ್ನಾನ್ ಶಾಹಿದ್(೪೫ನೇ ನಿಮಿಷ) ಹಾಗೂ ವಹೀದ್ ರಾಣಾ(೪೯ನೇ ನಿಮಿಷ) ಗಳಿಸಿದ ಗೋಲುಗಳು ಪಂದ್ಯವನ್ನು ೩-೩ ಸಮಸ್ಥಿತಿಗೆ ತಂದವು.
ಪಂದ್ಯ ಸಮಸ್ಥಿತಿಯಲ್ಲಿ ಮುಗಿದು ವಿಜಯಿಗಳ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್’ ಮೊರೆ ಹೋಗಬೇಕಾದೀತು ಎನ್ನುವ ಭೀತಿಯಲ್ಲಿದ್ದಾಗಲೇ ಪಂದ್ಯದ ೬೦ನೇ ನಿಮಿಷದಲ್ಲಿಮ್ಯಾಜಿಕ್’ ಮಾಡಿದ ಅಭಿಷೇಕ ಸರ್ಕಲ್ನ ಬಲ ಭಾಗದಲ್ಲಿ ಸ್ಥಳಾವಕಾಶ ಮಾಡಿಕೊಂಡು ಹೊಡೆದ ಚೆಂಡು `ಡಿಫ್ಲೆಕ್ಷನ್’ ಆಗಿ ಪಾಕ್ ಗೋಲು ಪೆಟ್ಟಿಗೆ ಸೇರಿತು.
ಈ ಗೆಲುವಿನೊಂದಿಗೆ ಭಾರತ ಪಾಕಿಸ್ತಾನದ ಎದುರು ಸತತ ೨೧ ಪಂದ್ಯಗಳಿಂದ ಅಜೇಯವಾಗುಳಿದ ಹೆಗ್ಗಳಿಕೆ ಸಂಪಾದಿಸಿತು.

