ಕಾಕಮಿಗಹರಾ(ಜಪಾನ)
ಮಲೇಷ್ಯಾ ಎದುರು ೫-೧ ಗೋಲುಗಳ ಅಧಿಕಾರಯುತ ಜಯ ದಾಖಲಿಸಿದ ಹರ್ಮನ್ಪ್ರೀತ್ ಸಿಂಗ್ ಸಾರಥ್ಯದ ಭಾರತದ ಪುರುಷರ ಹಾಕಿ ತಂಡ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದೆಯಲ್ಲದೇ, ೨೦೨೮ರಲ್ಲಿ ಲಾಸ್ ಏಂಜೆಲ್ಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಗಳಿಗೆ ನೇರ ಪ್ರವೇಶ ದೊರಕಿಸಿಕೊಂಡಿದೆ.
ಶನಿವಾರ ಇಲ್ಲಿಯ ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಹರ್ಮನ್ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದರೆ, ಜುಗರಾಜ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ಶಿಲಾನಂದ ಲಾಕ್ರಾ ತಲಾ ಒಂದೊಂದು ಯಶ ಕಂಡರು.
ಏಷ್ಯನ್ ಕ್ರೀಡೆಗಳ ಇತಿಹಾಸದಲ್ಲಿ ಭಾರತ ಚಿನ್ನದ ಪದಕವನ್ನು ಉಳಿಸಿಕೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲದೇ ನಾಗೋಯಾ ಎಷ್ಯನ್ ಕ್ರೀಡೆಗಳಲ್ಲಿ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಹೊನ್ನಿನ ಪದಕಕ್ಕೆ ಲಗ್ಗೆಯನ್ನಿಟ್ಟಿವೆ. ಸಲಿಮಾ ಟೆಟೆ ನಾಯಕತ್ವದ ಮಹಿಳಾ ತಂಡವೂ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಚೀನಾ ಎದುರು ಫೈನಲ್ನಲ್ಲಿ ಗೆದ್ದು ಚಿನ್ನದ ಪದಕದೊಂದಿಗೆ ಸಂಭ್ರಮಿಸಿತ್ತು.
ಪಂದ್ಯದ ಪ್ರಾರಂಭದಿAದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತಕ್ಕೆ ೧೧ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ಡ್ಯ್ರಾಗ್ ಫ್ಲಿಕ್ ಮೂಲಕ ಗೋಲು ಗಳಿಸಿ ೧-೦ ಮುನ್ನಡೆ ನೀಡಿದರು. ಆದರೆ ತಕ್ಷಣ ಪ್ರತಿ ದಾಳಿ ನಡೆಸಿದ ಮಲೇಷ್ಯಾ ಪರ ಶೆಲ್ಲೋ ಸಿಲ್ವೇರಿಯಸ್ ಎಡಭಾಗದಿಂದ ಉತ್ತಮ ಗೋಲು ಗಳಿಸಿ ಸ್ಕೋರನ್ನು ಮೊದಲ ಕ್ವಾರ್ಟರ್ ಕೊನೆಗೆ ೧-೧ರ ಸಮಸ್ಥಿತಿಗೆ ತಂದರು.
ಲೀಡ್ ನೀಡಿದ ಜುಗರಾಜ್:
ಎರಡನೇ ಕ್ವಾರ್ಟರ್ನಲ್ಲಿ ಹೆಚ್ಚಿನ ದಾಳಿ ನಡೆಸಿದ ಮಲೇಷ್ಯಾಕ್ಕೆ ಕೆಲವು ಪೆನಾಲ್ಟಿ ಕಾರ್ನರ್ಗಳು ದೊರೆತವಾದವೂ ಯಾವುದೂ ಯಶಸ್ವಿಯಾಗಲಿಲ್ಲ. ಆದರೆ ೨೩ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ನಲ್ಲಿ ಚೆಂಡನ್ನು ಎದುರಾಳಿಗಳ ಗೋಲು ಪೆಟ್ಟಿಗೆ ಸೇರಿಸಿದ ಜುಗರಾಜ ತಂಡಕ್ಕೆ ೨-೧ ಗೋಲುಗಳ ಲೀಡ್ ನೀಡಿದರು.
ಆದರೆ ದ್ವಿತೀಯಾರ್ಧದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಮಲೇಷ್ಯಾದ ಗೋಲಿನಾವರಣದಲ್ಲಿ ಅದರ ರಕ್ಷಣಾ ಆಟಗಾರರೊಬ್ಬರ ದೇಹಕ್ಕೆ ಚೆಂಡು ತಗುಲಿದ್ದರಿಂದ ಭಾರತಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್ ಯಶಸ್ವಿಯಾಗಿಸಿದ ಹಾರ್ದಿಕ್ ಸಿಂಗ್ ಭಾರತದ ಮುನ್ನಡೆಯನ್ನು ೩-೧ಕ್ಕೆ ಏರಿಸಿದರು. ಪಂದ್ಯದ ೫೪ನೇ ನಿಮಿಷದಲ್ಲಿ ಶಿಲಾನಂದ ಲಾಕ್ರಾಡಿಫ್ಲೆಕ್ಷನ್’ ಮೂಲಕ ಭಾರತದ ನಾಲ್ಕನೇ ಗೋಲು ದಾಖಲಿಸಿದರೆ, ನಂತರ ಹರ್ಮನ್ಪ್ರೀತ್ ಸಿಂಗ್ ಮತ್ತೊಂದು ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಗಳಿಸಿ ಗೆಲುವಿನ ಅಂತರವನ್ನು ೫-೧ಕ್ಕೆ ಏರಿಸಿದರು.
ಏಷ್ಯನ್ ಕ್ರೀಡೆಗಳ ಪುರುಷರ ಹಾಕಿಯಲ್ಲಿ ಇದು ಭಾರತಕ್ಕೆ ಐದನೇ ಚಿನ್ನದ ಪದಕ. ಇದಕ್ಕೂ ಮೊದಲು ೧೯೬೬, ೧೯೯೮, ೨೦೧೪ ಹಾಗೂ ೨೦೨೨ರಲ್ಲಿ ಅದು ಚಿನ್ನದ ಪದಕ ಗೆದ್ದುಕೊಂಡಿತ್ತು. ಇದನ್ನು ಹೊರತುಪಡಿಸಿ ೧೯೫೮, ೧೯೬೨, ೧೯೭೦, ೧೯೭೪, ೧೯೭೮, ೧೯೮೨, ೧೯೯೦, ೧೯೯೪ ಹಾಗೂ ೨೦೦೨- ಹೀಗೆ ಒಂಭತ್ತು ಬಾರಿ ಬೆಳ್ಳಿಯ ಪದಕ ಗಳಿಸಿದ್ದ ಭಾರತ ಮೂರು ಸಲ(೧೯೮೬, ೨೦೧೦ ಹಾಗೂ ೨೦೧೮) ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

