ಈಶಾನ್ಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
ಬಿಜೆಪಿ ಅಭ್ಯರ್ಥಿ ನಮೋಶಿಗೆ 1,429 ಮತಗಳ ಮುನ್ನಡೆ
ಕಲಬುರಗಿ
ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಕಲಬುರಗಿಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯುತ್ತಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ.
ಮೊದಲ ಸುತ್ತಿನಲ್ಲಿ ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು 6,726 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 5,297 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ನಮೋಶಿ ಅವರು 1,429 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಸುಮಾರು 14 ಸಾವಿರ ಮತಗಳ ಎಣಿಕೆ ನಡೆದಿದ್ದು, ಫಲಿತಾಂಶವನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಬೇಕಿದೆ. ಒಟ್ಟು 144 ಮತಪೆಟ್ಟಿಗೆಗಳ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದಿಂದ ಸೈಬಣ್ಣ ಜಮಾದಾರ ಹಾಗೂ ಜನತಾ ದಳ (ಸಂಯುಕ್ತ) ಪಕ್ಷದಿಂದ ಶಂಕರೆಡ್ಡಿ ಪಾಟೀಲ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಮುಂದಿನ ಸುತ್ತಿನ ಮತ ಎಣಿಕೆಯತ್ತ ರಾಜಕೀಯ ವಲಯದ ಗಮನ ನೆಟ್ಟಿದೆ. ಎರಡನೇ ಸುತ್ತಿನ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳ ನಡುವಿನ ಮತಗಳ ಅಂತರದ ಕುರಿತು ಮತ್ತಷ್ಟು ಸ್ಪಷ್ಟ ಚಿತ್ರಣ ದೊರೆಯಲಿದೆ.
