ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು: ಸಿದ್ದರಾಮಯ್ಯ

ಹಂಚಿಕೊಳ್ಳಿ

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಿ ತನಿಖೆಗೆ ಆದೇಶಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮಾಜಿ ಮುಖ್ಯಮಂತ್ರಿ ಆಗ್ರಹ

ಬೆಂಗಳೂರು
ಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ಮತದಾನವೇ ಭಾರತದ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅನುಮಾನ ಮೂಡದಂತೆ ಪಾರದರ್ಶಕತೆ ಕಾಪಾಡುವುದು ಅಗತ್ಯ ಎಂದಿದ್ದಾರೆ.

ಇತ್ತೀಚಿನ ಆಂಗ್ಲ ಪತ್ರಿಕೆಯ ತನಿಖಾ ವರದಿಯನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಆಯೋಗದಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ಕೆಲವು ನಿರ್ಧಾರಗಳು ಮತ್ತು ಕ್ರಮಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಯ ಪ್ರಕಾರ, ಈ ಆಕ್ಷೇಪಗಳು ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ-ತೆಗೆದುಹಾಕುವಿಕೆ, ಮತದಾರರ ಡೇಟಾಬೇಸ್ ನಿರ್ವಹಣೆ ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿವೆ.
Form-6ರಲ್ಲಿ ಮಾಡಲಾದ ಕೆಲವು ಬದಲಾವಣೆಗಳು ಹಾಗೂ ಮತದಾರರ ಡೇಟಾಬೇಸ್‌ನ ನಿಯಂತ್ರಣ ಕೇಂದ್ರೀಕರಣದ ಕುರಿತು ಕೂಡ ಆಕ್ಷೇಪಗಳು ವ್ಯಕ್ತವಾಗಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಬೆಳವಣಿಗೆಗಳ ಕುರಿತು ಚುನಾವಣಾ ಆಯೋಗವು ಸ್ಪಷ್ಟನೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಮತದಾರ ಸೇರ್ಪಡೆ ಮತ್ತು ಹೆಸರುಗಳ ತೆಗೆದುಹಾಕುವಿಕೆಗೆ ಸಂಬಂಧಿಸಿದ ಮೇಲ್ಮನವಿಗಳ ಬಗ್ಗೆಯೂ ಸಿದ್ದರಾಮಯ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ವಿಚಾರದಲ್ಲಿ ಚುನಾವಣಾ ಆಯೋಗವು ಸಂಪೂರ್ಣ ಪಾರದರ್ಶಕತೆ ಹಾಗೂ ಸಾರ್ವಜನಿಕ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ..

ಚುನಾವಣಾ ಆಯೋಗವು ಯಾವುದೇ ಸರ್ಕಾರದ ಪರವಾಗಿರದೆ ಸಂವಿಧಾನ ಮತ್ತು ಮತದಾರರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರಬೇಕು. ಚುನಾವಣಾ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಉಳಿಯಲು ಆಯೋಗದ ಸ್ವಾಯತ್ತತೆ ಮತ್ತು ಪಾರದರ್ಶಕತೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಆಯೋಗದ ಇತ್ತೀಚಿನ ಕಾರ್ಯವೈಖರಿ, ಎಸ್‌ಐಆರ್ ಪ್ರಕ್ರಿಯೆ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಟೀಕಿಸಿರುವ ಸಿದ್ದರಾಮಯ್ಯ, ಅವರನ್ನು ಪದಚ್ಯುತಗೊಳಿಸಿ ಅವರ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, ಚುನಾವಣಾ ಆಯೋಗದ ಮೂಲಗಳು ವರದಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ಚಿತ್ರಣವನ್ನು ತಳ್ಳಿಹಾಕಿದ್ದು, ಎಸ್‌ಐಆರ್ ಸೇರಿದಂತೆ ಆಯೋಗದ ಎಲ್ಲ ನಿರ್ಧಾರಗಳಿಗೂ ಮೂವರು ಆಯುಕ್ತರ ಅನುಮೋದನೆ ಇತ್ತು ಎಂದು ಹೇಳಿರುವುದು ಗಮನಾರ್ಹವಾಗಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *