ಜಲಂಧರ್
ಹಾಲಿ ಚಾಂಪಿಯನ್ ಭಾರತ ಇಲ್ಲಿ ನಡೆದಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಲೀಗ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ಚೀನದ ಎದುರು ೫-೨ ಗೋಲುಗಳ ಗೆಲುವು ದಾಖಲಿಸಿ ಮುನ್ನಡೆದಿದೆ.
ಐದು ಬಾರಿಯ ಚಾಂಪಿಯನ್ಸ್ ಭಾರತದ ಪಾಲಿಗೆ ಪ್ರಸಕ್ತ ಟೂರ್ನಿಯಲ್ಲಿ ಇದು ಸತತ ಎರಡನೇ ಗೆಲುವು. ಮೊದಲ ಪಂದ್ಯದಲ್ಲಿ ಅದು ಬಾಂಗ್ಲಾದೇಶದ ಎದುರು ೧೩-೦ ಗೋಲುಗಳ ಭರ್ಜರಿ ಗೆಲುವು ಸಂಪಾದಿಸಿತ್ತು.
ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಕಿ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ತಲಾ ಎರಡೆರಡು ಗೋಲು ಬಾರಿಸಿದ ನಾಯಕ ಹರ್ಮನ್ಪ್ರೀತ್ ಸಿಂಗ್ ಹಾಗೂ ಸುಖ್ಜೀತ್ ಸಿಂಗ್ ಮತ್ತು ಐದನೇ ಗೊಲು ದಾಖಲಿಸಿದ ಜುಗರಾಜ ಸಿಂಗ್ ಗೆಲುವಿನ ರೂವಾರಿಗಳೆನಿಸಿದರು.

ಸುಖ್ಜೀತ್ ಪಂದ್ಯದ ಆಟಗಾರ
ಪಂದ್ಯದ ಆಟಗಾರ’ನ ಪ್ರಶಸ್ತಿಗೆ ಭಾಜನರಾದ ಸುಖ್ಜೀತ್ ಸಿಂಗ್ ೧೩ನೇ ನಿಮಿಷದಲ್ಲಿ ಭಾರತದ ಗೋಲಿನ ಖಾತೆಯನ್ನಾರಂಭಿಸಿದರಾದರೂ, ದ್ವಿತೀಯ ಕ್ವಾರ್ಟರ್ನಲ್ಲಿ ಸುಮಾರು ಮೂರುವರೆ ನಿಮಿಷಗಳ ಆಟ ಬಾಕಿಯಿದ್ದಾಗ ಯಾಂಗ್ ಪೆಂಗ್ ಚೀನಾಕ್ಕೆ ಸಮಗೋಲು ತಂದಿತ್ತರು.
ಮುಂದಿನ ಒಂದು ನಿಮಿಷದಲ್ಲಿಯೇ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ನಲ್ಲಿ ಚೆಂಡನ್ನು ಎದುರಾಳಿ ಗೋಲಿನಲ್ಲಿ ದಬ್ಬಿದ ಹರ್ಮನ್ಪ್ರೀತ್ ಸಿಂಗ್ ತಂಡಕ್ಕೆ ಮಧ್ಯಂತರದ ಹೊತ್ತಿಗೆ ಮತ್ತೆ ೨-೧ ಲೀಡ್ ನೀಡಿದರು.
ಮೂರನೇ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲು ಬಾರಿಸುವಲ್ಲಿ ಯಶ ಕಂಡ ಹರ್ಮನ್ಪ್ರೀತ್ ಸಿಂಗ್ ಭಾರತದ ಮುನ್ನಡೆಯನ್ನು ೩-೧ಕ್ಕೆ ಏರಿಸಿದರು. ಎದುರಾಳಿಗಳ ರಕ್ಷಣಾ ಪಂಕ್ತಿಯ ಮೇಲೆ ತೀವ್ರ ಒತ್ತಡ ಹೇರಿದ ಆತಿಥೇಯರಿಗೆ ಸುಖ್ಜೀತ್ ಸಿಂಗ್ ನಾಲ್ಕನೇ ಗೋಲು ಗಳಿಸಿಕೊಟ್ಟರು.
ಆದರೆ ಪಟ್ಟು ಬಿಡದ ಚೀನ ಚೆನ್ ಚಾಂಗ್ಕಾಂಗ್ ಮೂಲಕ ಇನ್ನೊಂದು ಗೋಲು ದಾಖಲಿಸಿತಲ್ಲದೇ ಭಾರತದ ಮುನ್ನಡೆಯನ್ನು ೪-೨ಕ್ಕೆ ಇಳಿಸಿತು.
ನಂತರ ಪಂದ್ಯದ ೪೬ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನಲ್ಲಿ ಗುರಿ ಕಂಡ ಜುಗರಾಜ್ ಸಿಂಗ್ ಭಾರತದ ಗೆಲುವಿನ ಅಂತರವನ್ನು ೫-೨ಕ್ಕೆ ಏರಿಸಿದರು.
ದಿನದ ಇನ್ನುಳಿದೆರಡು ಪಂದ್ಯಗಳಲ್ಲಿ ಮಲೇಷ್ಯಾ ೩-೧ ರಿಂದ ಕೊರಿಯಾದ ಎದುರು ಜಯಿಸಿದರೆ, ಜಪಾನ ೧-೦ ಅಂತರದಿAದ ಬಾಂಗ್ಲಾದೇಶವನ್ನು ಸೋಲಿಸಿತು.
ಭಾರತ ಅಗ್ರಸ್ಥಾನದಲ್ಲಿ:
ತಲಾ ಎರಡೆರಡು ಪಂದ್ಯಗಳ ನಂತರ, ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ, ಮಲೇಷ್ಯಾ ಹಾಗೂ ಜಪಾನಗಳು ತಲಾ ೬ ಪಾಯಿಂಟ್ ಗಳಿಸಿವೆ. ಆದರೆ ೧೬ ಗೋಲುಗಳ ಅಂತರ(ಪರ-೧೮, ಎದುರು-೨) ಹೊಂದಿರುವ ಭಾರತ ಅಗ್ರಸ್ಥಾನದಲ್ಲಿದ್ದರೆ, ಅನುಕ್ರಮವಾಗಿ ೩ ಹಾಗೂ ೨ ಗೋಲು ಅಂತರ ಹೊಂದಿರುವ ಮಲೇಷ್ಯಾ ಹಾಗೂ ಜಪಾನಗಳು ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ, ಕೊರಿಯಾ, ಚೀನಾ ಹಾಗೂ ಬಾಂಗ್ಲಾದೇಶಗಳು ಆಡಿರುವ ಎರಡಕ್ಕೆ ಎರಡೂ ಪಂದ್ಯಗಳನ್ನು ಸೋತಿದ್ದು ತಮ್ಮ ಪಾಯಿಂಟ್ ಖಾತೆ ತೆರೆಯಬೇಕಿವೆ.

