ಆಕ್ಲಂಡ್
ಪಂದ್ಯದ ಆಟಗಾರ’ ಗ್ಲೆನ್ ಫಿಲಿಪ್ಸ್ ಅವರ ಸ್ಫೋಟಕ ಶತಕ ಹಾಗೂ ಜೇಕಬ್ ಡಫಿ ಅವರ ಮಾರಕ ದಾಳಿಯ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಶುಕ್ರವಾರ ಇಲ್ಲಿ ನಡೆದ ೪ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತಕ್ಕೆ ೮೭ ರನ್ಗಳ ಸೋಲಿನ ಆಘಾತ ನೀಡಿತು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಫಿಲಿಪ್ಸ್ ೪೯ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೧೦ ಸಿಕ್ಸರ್ಗಳಿದ್ದ ೧೦೭ ರನ್ ಸಿಡಿಸುವುದರೊಂದಿಗೆ ಇಲ್ಲಿಯ ಏಡನ್ ಪಾರ್ಕ್ನಲ್ಲಿ ಮೊದಲು ಬ್ಯಾಟ್ ಮಾಡಿದ ಕೀವೀಸ್ ತಂಡ ೨೦ ಓವರ್ಗಳಲ್ಲಿ ೭ ವಿಕೆಟ್ಗಳಿಗೆ ದಾಖಲೆಯ ೨೫೯ರನ್ ಪೇರಿಸಿತು.
೨೫ ಎಸೆತಗಳಲ್ಲಿ ೪ ಬೌಂಡರಿ ಹಾಗೂ ೬ ಸಿಕ್ಸರ್ಗಳಿದ್ದ ೬೫ ರನ್ ಚಚ್ಚಿದ ಮೈಕಲ್ ಬ್ರೇಸ್ವೆಲ್ ಐದನೇ ವಿಕೆಟ್ ಜೊತೆಯಾಟದಲ್ಲಿ ಗ್ಲೆನ್ ಫಿಲಿಪ್ಸ್ ಅವರೊಡನೆ ಕೇವಲ ೪೦ ಎಸೆತಗಳಲ್ಲಿ ೧೧೫ ರನ್ ಪೇರಿಸಿ ಭಾರತದ ಬೌಲರ್ಗಳ ದಿಕ್ಕು ತಪ್ಪಿಸಿದರು.
ವೇಗಿ ಮಯಾಂಕ ಯಾದವ ೪೮ ರನ್ಗಳಿಗೆ ೩ ವಿಕೆಟ್ ಉರುಳಿಸಿದ್ದನ್ನು ಬಿಟ್ಟರೆ ಭಾರತದ ಇನ್ನುಳಿದ ಬೌಲರ್ಗಳು ಹೆಚ್ಚಿಗೆ ಯಶ ಕಾಣದಿದ್ದುದು ಕೀವೀಸ್ನ ಬೃಹತ್ ಸ್ಕೋರಿಗೆ ಕಾರಣವಾಯಿತು.

ಉತ್ತರವಾಗಿ ಹೊಸ ಚೆಂಡಿನೊಡನೆ ದಾಳಿಯನ್ನಾರಂಭಿಸಿದ ಜೇಕಬ್ ಡಫಿ ೨೩ ರನ್ಗಳಿಗೆ ೪ ವಿಕೆಟ್ ಕೆಡವಿ ಆತಿಥೇಯ ಬ್ಯಾಟರ್ಗಳು ಪರದಾಡುವಂತೆ ಮಾಡಿದರು. ಆತಿಥೇಯರು ೨೦ ಓವರ್ಗಳಲ್ಲಿ ೯ ವಿಕೆಟ್ಗಳಿಗೆ ೧೭೨ ರನ್ ಗಳಿಸುವಲ್ಲಿ ಮಾತ್ರ ಸಫಲರಾದರು.
ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತಿಲಕ್ ವರ್ಮಾ(೩೫, ೩೫ ಎಸೆತ, ೧ ಬೌಂಡರಿ, ೩ ಸಿಕ್ಸರ್), ನಮನ್ ಧೀರ್(೨೮, ೧೩ ಎಸೆತ, ೨ ಬೌಂಡರಿ, ೨ ಸಿಕ್ಸರ್), ಅಭಿಷೇಕ ಶರ್ಮಾ(೨೭, ೧೫ ಎಸೆತ, ೩ ಬೌಂಡರಿ, ೧ ಸಿಕ್ಸರ್), ನಾಯಕ ಶ್ರೇಯಸ್ ಅಯ್ಯರ್(೨೨, ೧೧ ಎಸೆತ, ೪ ಬೌಂಡರಿ), ನಿತಿಷ್ ಕುಮಾರ ರೆಡ್ಡಿ(೨೧, ೧೦ ಎಸೆತ, ೨ ಸಿಕ್ಸರ್) ಹಾಗೂ ಪ್ರಿನ್ಸ್ ಯಾದವ್(ಔಟಾಗದೇ ೧೮, ೧೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ಭಾರತದ ಪರ ಎರಡಂಕಿ ತಲುಪಿದ ಬ್ಯಾಟರ್ಗಳು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ೩-೧ ಗೆಲುವಿನ ಮುನ್ನಡೆ ಹೊಂದಿದ್ದು ಐದನೇ ಹಾಗೂ ಕೊನೆಯ ಪಂದ್ಯ ಹ್ಯಾಮಿಲ್ಟನ್ನಲ್ಲಿ ನವೆಂಬರ್ ೧ ರಂದು ನಡೆಯಲಿದೆ.
ಸಂಕ್ಷಿಪ್ತ ಸ್ಕೋರುಗಳು: ನ್ಯೂಜಿಲೆಂಡ್: ೨೦ ಓವರ್ಗಳಲ್ಲಿ ೭ ವಿಕೆಟ್ಗಳಿಗೆ ೨೫೯, ಭಾರತ: ೨೦ ಓವರ್ಗಳಲ್ಲಿ ೯ ವಿಕೆಟ್ಗಳಿಗೆ ೧೭೨. ಫಲಿತಾಂಶ: ನ್ಯೂಜಿಲೆಂಡಿಗೆ ೮೭ ರನ್ಗಳ ಗೆಲುವು. ಪಂದ್ಯದ ಆಟಗಾರ: ಗ್ಲೆನ್ ಫಿಲಿಪ್ಸ್(ನ್ಯೂಜಿಲೆಂಡ್).

