ಶಿಕ್ಷಣ ಸಮಾಜವನ್ನು ಪರಿವರ್ತಿಸುವ ಶಕ್ತಿಯಾಗಿದೆ-ಡಾ. ಅಜಿತ ಪ್ರಸಾದ

ಹಂಚಿಕೊಳ್ಳಿ

ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸ್ವ-ರಚಿತ ಕವನ ರಚಿಸುವ ಸ್ಪರ್ಧೆ

ಧಾರವಾಡ
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಪ್ರೇಮಿ, ಸಮಾಜ ಸುಧಾರಕರು, ಗ್ರಾಮೀಣ ಅಭಿವೃದ್ಧಿಯ ಹರಿಕಾರರು, ಮಹಿಳಾ ಸಬಲೀಕರಣದ ಪ್ರೇರಕರು ಹಾಗೂ ಮಾನವೀಯ ಮೌಲ್ಯಗಳ ಪ್ರತಿಪಾದಕರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಸಮಾಜವನ್ನು ಪರಿವರ್ತಿಸುವ ಶಕ್ತಿಯಾಗಿದೆ ಎಂಬ ನಂಬಿಕೆಯಿಂದ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜದಲ್ಲಿ ನೈತಿಕತೆಯನ್ನು ಬಿತ್ತುವ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೆ ತರಗತಿ ಹಾಗೂ ಪಿ.ಯು ವಿದ್ಯಾರ್ಥಿಗಳಿಗಾಗಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಪೂಜ್ಯ ಹೆಗ್ಗಡೆಯವರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳು ವಿಷಯದ ಮೇಲೆ ಸ್ವ-ರಚಿತ ಕವನ ರಚಿಸುವ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಸಹಾಯ ಸಂಘಗಳ ರಚನೆ ಹಾಗೂ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಬಡವರಿಗೆ ಅನ್ನದಾನ, ಸಾಮೂಹಿಕ ವಿವಾಹ, ಆರೋಗ್ಯ ಸೇವೆ ಮತ್ತು ರುಡ್‌ಸೆಟ್ ಕೇಂದ್ರ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮೂಲಕ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ವಿದ್ಯೆಯಿಂದ ಬೆಳಕು, ಸೇವೆಯಿಂದ ಸಂತೋಷ, ಸಂಸ್ಕಾರದಿಂದ ಸುಂದರ ಸಮಾಜ ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರುತ್ತಿರುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶೈಕ್ಷಣಿಕ ದೂರದೃಷ್ಟಿ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೂಜ್ಯರ ಕೊಡುಗೆಗಳ ಕುರಿತಾದ ನಾಟಕವನ್ನು ಪ್ರದರ್ಶಿಸಿದರು. ಜೆ.ಎಸ್.ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಶಾಲೆಯ ಪ್ರಾಚಾರ್ಯೆ ಡಯಾನಾ ಜೋಗಿನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *