‘ಎಐ’ನಿಂದ ಶೇ. 80ರಷ್ಟು ವ್ಯವಹಾರ

ಹಂಚಿಕೊಳ್ಳಿ

ಧಾರವಾಡ
ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಭಾರತದ ಆರ್ಥಿಕತೆಯ ಪರಿವರ್ತನೆ ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ವಿಷಯ ಕುರಿತು ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳು ಜಂಟಿಯಾಗಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಜೆಎಸ್‌ಎಸ್ ಸನ್ನಿಧಿಯಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು.

ಕಿತ್ತೂರು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಡಾ. ಸಿ.ಎಂ. ತ್ಯಾಗರಾಜ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಸುಮಾರು ೮೦ ಸಂಶೋಧನಾ ಲೇಖನಗಳ ಕೃತಿ ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರ. ಕೃಷಿ, ಮಾರುಕಟ್ಟೆ, ಲೇಬರ್, ಕ್ಯಾಪಿಟಲ್ ಸಂಪನ್ಮೂಲಗಳಲ್ಲಿ ಎ.ಐ. ಇಲ್ಲದೇ ಕಾರ್ಯ ನಡೆಯುವುದು ಅಸಾಧ್ಯ. ಗಾಳಿಯಂತೆ, ನೀರಿನಂತೆ ಎ.ಐ. ನಮ್ಮನ್ನು ಆವರಿಸಿಕೊಂಡಿದೆ. ಶೇಕಡಾ ೮೦% ವ್ಯವಹಾರಗಳು ಎ.ಐ.ಗಳ ಮೂಲಕ ನಡೆಯುತ್ತಿವೆ. ಈ ವಿಚಾರ ಸಂಕಿರಣ ಎ.ಐ. ಕುರಿತು ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ವಿಜ್ಞಾನದ ಬೆಳವಣಿಗೆ ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ, ಉತ್ಪಾದನೆ, ವ್ಯಾಪರ, ಜೀವನ ಶೈಲಿಯೊಂದಿಗೆ ಎ.ಐ. ಜೊತೆಯಾಗಿದೆ ಎಂದರು.

ಈ ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಸಂಶೋಧನಾ ಪ್ರಬಂಧಗಳ ಸಂಗ್ರಹದ ಗ್ರಂಥವಾದ ‘ಎ.ಐ. ಬಿಜಿನೆಸ್ ಆ್ಯಂಡ್ ಎಕೋನಾಮಿಕ್ಸ್ ಟ್ರಾನ್ಸಫಾರ್ಮೆಷನ್’ ಕೃತಿಯನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಲೋಕಾರ್ಪಣೆಗೊಳಿಸಿ ಮಾತನಾಡಿ, ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಾ ನಡೆದಿದೆ. ಎ.ಐ. ಇಂದು ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿಕಾಸದ ಹಂತವನ್ನು ತಲುಪಲು ಎ.ಐ. ಒಂದು ಅತ್ಯುತ್ತಮ ಸಾಧನ ಮಾರ್ಗವಾಗಿದೆ. ಕಲಾ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನದಲ್ಲಿ ಎ.ಐ. ತನ್ನ ಪ್ರಭಾವ ಬೀರಿದೆ. ಮಾನವನ ಜೀವನದ ಎಲ್ಲಾ ಹಂತಗಳಲ್ಲೂ ಎ.ಐ. ಬಳಕೆಯಾಗುತ್ತಿದೆ. ಇದು ಅತ್ಯುತ್ತಮ ಅಭಿವೃದ್ಧಿ ಮಾರ್ಗಕ್ಕೆ ಸಾಧನವಾಗಿದೆ. ತಂತ್ರಜ್ಞಾನವನ್ನು ಭವಿಷ್ಯತ್ತಿನ ಏಳಿಗೆಗಾಗಿ ರೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದರೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಎ.ಐ. ತಿಳುವಳಿಕೆಯ ಸದುಪಯೋಗದೊಂದಿಗೆ ಯಶಸ್ಸಿನತ್ತ ಸಾಗೋಣ ಎಂದರು.

ಬಿರ್ಲಾ ತಾಂತ್ರಿಕ ಮತ್ತು ವಿಜ್ಞಾನ ಪಿಲಾನಿ ಸಂಸ್ಥೆ, ಕೆ.ಕೆ. ಬಿರ್ಲಾ ಗೋವಾ ಕ್ಯಾಂಪಸ್, ಗೋವಾದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡೆಬಸಿಸ್ ಪಟ್ನಾಯಕ ವಿಚಾರ ಸಂಕಿರಣದ ಆಶಯಗಳನ್ನಾಡುತ್ತಾ, ಕೃತಕ ಬುದ್ಧಿಮತ್ತೆ, ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಗಣಿತಶಾಸ್ತ್ರ, ರಚನೆ, ಕೃತಕ ಬುದ್ಧಿಮತ್ತೆಗೆ ಒಳಪಡುತ್ತದೆ. ಇದು ಮನುಕುಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಧನಾತ್ಮಕ ಮತ್ತು ಋಣಾತ್ಮಕವಾಗಿರುವುದು. ಆದರೆ ಇದನ್ನು ಬಳಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತಿರುವುದು ಗಮನಿಸಬೇಕಾದ ಅಂಶ. ಕೃತಕ ಬುದ್ಧಿಮತ್ತೆ ಅಂತರಶಿಸ್ತಿಯ ಬಹುಶಿಸ್ತಿಯ ವಿಷಯಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ ಮತ್ತು ಜಗತ್ತಿನ ಭವಿಷ್ಯದ ಬೆಳವಣಿಗೆಗಳನ್ನು ವೇಗವಾಗಿ ಗುರುತಿಸುತ್ತಿದೆ. ಮುಂದಿನ ೫೦ ರಿಂದ ೧೦೦ ವರ್ಷಗಳಲ್ಲಿ ಈ ಬೆಳವಣಿಗೆ ಇನ್ನು ಹೆಚ್ಚಿನ ವೇಗ ಪಡೆಯಬಹುದು. ಮಾನವನ ಬೌದ್ಧಿಕ ಮಟ್ಟವನ್ನು ವಿಸ್ತರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಭವಿಷ್ಯದ ಸವಾಲುಗಳು, ಮಿಲಿಟರಿ, ಹಣಕಾಸು, ಹವಾಮಾನ, ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೃತ ಬುದ್ಧಿಮತ್ತೆಯ ಅವಲಂಬನೆಯನ್ನು ಹೆಚ್ಚು ಮಾಡುತ್ತಿದೆ ಎಂದರು.

ಪ್ರಾಚಾರ್ಯ ಪ್ರೊ. ವೆಂಕಟೇಶ ಮುತಾಲಿಕ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಈ ರಾಷ್ಟ್ರೀಯ ವಿಚಾರ ಸಂಕಿರಣ ಮುಂದುವರೆಯುತ್ತಿರುವ ಕೃತಕ ಬುದ್ಧಿಮತ್ತೆ ಯುವ ಸಮುದಾಯದ ಚಿಂತನೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿರುವುದು ಅಭಿನಂದನಾರ್ಹ. ಕೃತಕ ಬುದ್ಧಿಮತೆಯ ತಂತ್ರಜ್ಞಾನವನ್ನು ಉತ್ಸಾಹದೊಂದಿಗೆ ಯುವ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಜೆಎಸ್‌ಎಸ್ ಆಡಳಿತಾಧಿಕಾರಿ ಅರಿಂಹತ ಪ್ರಸಾದ, ಸೂರಜ್ ಜೈನ್, ವಿಚಾರ ಸಂಕಿರಣದ ಸಂಯೋಜಕ ಡಾ. ಶೌತಕ ಅಲಿ ಮೇಗಲಮನಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶಿಲ್ಪಾ ದಾನಪ್ಪನವರ, ಪ್ರೊ. ತನುಜಾ ರೋಖಡೆ, ಡಾ. ಶಿಲ್ಪಾ ಆಡೂರ ಅತಿಥಿಗಳನ್ನು ಪರಿಚಯಿಸಿದರು. ಲಲಿತಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಶ್ರೀಕಾಂತ ರಾಗಿಕಲ್ಲಾಪೂರ ವಂದಿಸಿದರು. ಪ್ರೊ. ಪ್ರವೀಣ ಕೊರ್ಲಹಳ್ಳಿ ನಿರೂಪಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *