ಧಾರವಾಡ
ಇಲ್ಲಿನ ಧವಳಗಿರಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಸ್ಡಿಎಂಸಿಇಟಿ) ನವೆಂಬರ್ 2ರಿಂದ 6ರವರೆಗೆ ಆಯೋಜಿಸಿದ್ದ ‘ಗೂಗಲ್ ಕ್ಲೌಡ್ ಡಾಟಾ ಅನಾಲಿಟಿಕ್ಸ್’ ಕುರಿತ ಐದು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಐ. ಶ್ರೀಧರ್ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಅಧ್ಯಾಪಕರು ನಿರಂತರವಾಗಿ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಇಂತಹ ತರಬೇತಿ ಕಾರ್ಯಕ್ರಮಗಳು ಬೋಧನೆಯ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಶೈಕ್ಷಣಿಕ ಸಂಸ್ಥೆಗಳ ಪ್ರಗತಿಗೂ ಸಹಕಾರಿಯಾಗುತ್ತವೆ ಎಂದರು.
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಜೋಶಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಕ್ಲೌಡ್ ಡಾಟಾ ಅನಾಲಿಟಿಕ್ಸ್ ಮಹತ್ವ ಪಡೆದುಕೊಂಡಿದೆ. ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿರುವ ದತ್ತಾಂಶವನ್ನು ಕ್ಲೌಡ್ ತಂತ್ರಜ್ಞಾನದ ಮೂಲಕ ವಿಶ್ಲೇಷಿಸಿ, ಉಪಯುಕ್ತ ಮಾಹಿತಿಯನ್ನು ಪಡೆಯುವುದು ಹಾಗೂ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವ ಕೌಶಲ್ಯ ಇಂದಿನ ವೃತ್ತಿಪರರು ಮತ್ತು ಸಂಶೋಧಕರಿಗೆ ಅಗತ್ಯವಾಗಿದೆ ಎಂದು ತಿಳಿಸಿದರು.
ಐಸಿಟಿ ಸಂಯೋಜಕಿ ಡಾ. ನೀತಾ ಜಿ. ಕುಲಕರ್ಣಿ ಕಾರ್ಯಾಗಾರದ ಐದು ದಿನಗಳ ಚಟುವಟಿಕೆಗಳ ವರದಿ ಮಂಡಿಸಿದರು. ಮೊದಲ ದಿನ ದತ್ತಾಂಶ ವಿಶ್ಲೇಷಣೆ, ಕ್ಲೌಡ್ ಪರಿಸರ ಮತ್ತು ಬಿಗ್ ಡಾಟಾ ಮೂಲತತ್ವಗಳ ಪರಿಚಯ, ಎರಡನೇ ದಿನ ಕ್ಲೌಡ್ನಲ್ಲಿ ದತ್ತಾಂಶ ನಿರ್ವಹಣೆ ಮತ್ತು ಸಂಗ್ರಹಣಾ ವಿಧಾನಗಳು, ಮೂರನೇ ದಿನ ದತ್ತಾಂಶ ರೂಪಾಂತರ, ಶುದ್ಧೀಕರಣ ಹಾಗೂ ಇಟಿಎಲ್ ಪ್ರಕ್ರಿಯೆ, ನಾಲ್ಕನೇ ದಿನ ದತ್ತಾಂಶ ದೃಶ್ಯೀಕರಣ, ಸಂವಾದಾತ್ಮಕ ಡ್ಯಾಶ್ಬೋರ್ಡ್ಗಳು ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಗಳು ಹಾಗೂ ಐದನೇ ದಿನ ಎಂಡ್-ಟು-ಎಂಡ್ ಕ್ಯಾಪ್ಸ್ಟೋನ್ ಪ್ರಾಜೆಕ್ಟ್ ಮೂಲಕ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕಾರ್ಯಾಗಾರದಿಂದ ಅಧ್ಯಾಪಕರಿಗೆ ಗೂಗಲ್ ಕ್ಲೌಡ್ ಪರಿಕರಗಳ ಕುರಿತು ನೈಜ ಪ್ರಾಯೋಗಿಕ ಅನುಭವ ದೊರೆತಿದ್ದು, ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದ ಸಂಯೋಜಕಿ ಪ್ರೊ. ಚೈತಾಲಿ ಚಾಟೆ ಕಾರ್ಯಕ್ರಮ ನಿರ್ವಹಿಸಿ, ಕಾರ್ಯಾಗಾರಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ಕೃತಜ್ಞತೆ ಸಲ್ಲಿಸಿದರು. ಭಾಗವಹಿಸಿದ ಅಧ್ಯಾಪಕರಿಗೆ ಪ್ರಮಾಣಪತ್ರ ವಿತರಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

