ಎಡಿಬಿಯೊಂದಿಗೆ ಕಾಂಗ್ರೆಸ್ ಸರ್ಕಾರದ ಒಪ್ಪಂದ-ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮಾರಣಹೋಮಕ್ಕೆ ಮುನ್ನುಡಿ: ಶಶಿಕಲಾ ಮೇಟಿ
ಧಾರವಾಡ
ಎಡಿಬಿಯೊಂದಿಗೆ ಕಾಂಗ್ರೆಸ್ ಸರ್ಕಾರದ ಒಪ್ಪಂದ, ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಶುಕ್ರವಾರ ಎಐಡಿಎಸ್ಓ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, “ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಉಳಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರವೇ ಇಂದು ಕೆಪಿಎಸ್-ಮ್ಯಾಗ್ನೆಟ್ ನೀತಿ ಹಾಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಾಲದ ಒಪ್ಪಂದದ ಮೂಲಕ ರಾಜ್ಯದ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಿ ಎನ್ಈಪಿ -2020ನ್ನು ಜಾರಿಗೊಳಿಸುತ್ತಿದೆ.ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಖಾಸಗಿ ಶಾಲೆಗಳಿಗೆ ಹಸ್ತಾಂತರಿಸಲು ನವೆಂಬರ್ 4ರಂದು ವಿಧಾನಸೌಧದಲ್ಲಿ ಸಭೆ ನಡೆಸಿದೆ. ಮೊದಲ ಹಂತದಲ್ಲಿ 2000 ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುಲು ಒಪ್ಪಂದ ಮಾಡಿಕೊಂಡಿರುವ ಸರ್ಕಾರದ ನಿರ್ಧಾರ ನಾಡಿನ ಜನತೆಗೆ ಎಸಗಿರುವ ಕಡುದ್ರೋಹವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಮುಂದುವರೆದು ಮಾತನಾಡಿ ನವೆಂಬರ್ 4 ರ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು, ಸರ್ಕಾರಿ ಶಾಲೆ ಶಿಕ್ಷಕರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.ಸರ್ಕಾರಿ ಶಾಲೆಯ ಶಿಕ್ಷಕರಿಗೆ 70 ಸಾವಿರದಿಂದ 1.5 ಲಕ್ಷ ಸಂಬಳ ನೀಡಲಾಗುತ್ತಿದೆ. ಆದರೆ ಗಣಮಟ್ಟ ಇನ್ನೂ ಸುಧಾರಿಸಿಲ್ಲ ಎಂದು ಹೇಳಿರುವ ಅವರು ಗುಣಮಟ್ಟದ ಕುಸಿತದಲ್ಲಿ ಸರ್ಕಾರದ ನೀತಿಗಳ ಪಾತ್ರವನ್ನು ಕಡೆಗಣಿಸಿ ಶಿಕ್ಷಕರ ಮೇಲೆ ದೋಷ ಹೊರೆಸಿದ್ದಾರೆ.
ಪ್ರತಿ ಖಾಸಗಿ ಸಂಸ್ಥೆಯು 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಿದೆ. ಅಭಿವೃದ್ಧಿಪಡಿಸುವ ಶಾಲೆಗಳಿಗೆ ಅವರ ಹೆಸರನ್ನಿಡಲು ಅವಕಾಶ ನೀಡಲಾಗಿದೆ. ಖಾಸಗಿ ಶಾಲೆಯಿಂದ ಶಿಕ್ಷಕರನ್ನು ಕಳುಹಿಸುವುದು. ಹಳೆಯ ಬಸ್ಸನ್ನು ಮಾರುವ ಬದಲು ಸರ್ಕಾರಿ ಶಾಲೆಗೆ ನೀಡುವುದು. ಲ್ಯಾಬ್ ವಸ್ತುಗಳು, ಕಂಪ್ಯೂಟರ್ ಗಳನ್ನು ಕೊಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಖಾಸಗಿ ಮ್ಯಾನೇಜ್ಮೆಂಟ್ ಮುಂದೆ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ ಶಾಲೆ ಅಭಿವೃದ್ಧಿ ಹೆಸರಿನಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರವು ಮುಂದಾಗಿದೆ.
‘ಒಂದೇ ಒಂದು ಸರ್ಕಾರಿ ಶಾಲೆ ಶಾಲೆ ಮುಚ್ಚುವುದಿಲ್ಲ’ ಎಂದು ಸದನದ ಒಳಗೆ ಮತ್ತು ಹೊರಗೆ ಪ್ರತಿಪಾದಿಸುತ್ತಾ ಬಂದಿರುವ ಸರ್ಕಾರವು ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಹೆಗ್ಗನೂರು ಕೆಪಿಎಸ್ಗೆ 14 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಿಹಾಕಿದೆ. ಇದು ನಾಡಿನ ಜನತೆಗೆ ಮಾಡಿರುವ ದ್ರೋಹ! ಎಡಿಬಿಯೊಂದಿಗೆ ಕರಾಳ ಒಪ್ಪಂದ ಮಾಡಿಕೊಂಡಿರುವ ಸರ್ಕಾರವು ನಾಡಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮರಣ ಶಾಸನ ಬರೆದಿದೆ. ಸರ್ಕಾರವು ತನ್ನ ಈ ಶಿಕ್ಷಣ ವಿರೋಧಿ ನೀತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತಾ, ಜಿಲ್ಲೆಯ ಜನತೆಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಈ ಕಾರ್ಪೊರೇಟ್ ದಾಳಿಯ ವಿರುದ್ಧ ಪ್ರಬಲ ಚಳುವಳಿಗೆ ಮುಂಬರಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷೆ ಸಿಂಧೂ ಕೌದಿ, ಜಿಲ್ಲಾ ಸಂಘಟನಕಾರರಾದ ಶಾಂತೇಶ ನಂದಿಕೋಲ್ಮಟ್, ಸಿದ್ದಲಿಂಗಪ್ಪ ಚಿಪ್ಪಲಕಟ್ಟಿ, ರವಿಶಂಕರ್ ಪೋಲಾದಿ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

