ಧಾರವಾಡ
ದೀಪಾವಳಿ ಹಬ್ಬದ ಪ್ರಯುಕ್ತ ಮಾಜಿ ಮಹಾಪೌರರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಈರೇಶ ಅಂಚಟಗೇರಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪೌರಕಾರ್ಮಿಕರ ಜೊತೆಗೂಡಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಭಾನುವಾರ ಆಚರಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆರತಿ ಬೆಳಗಿ, ಸಿಹಿ ತಿನಿಸಿ, ದೀಪಾವಳಿ ಉಡುಗೊರೆಗಳನ್ನು ನೀಡಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಂತರ ಮಾತನಾಡಿದ ಈರೇಶ ಅಂಚಟಗೇರಿ ಅವರು, “ದೀಪಾವಳಿ ಎಂದರೆ ಕೇವಲ ಮನೆ-ಮನೆಯಲ್ಲಿ ದೀಪ ಬೆಳಗಿಸುವ ಹಬ್ಬವಲ್ಲ; ನಮ್ಮ ಮನಸ್ಸಿನ ಕತ್ತಲೆಯನ್ನು ದೂರ ಮಾಡಿ, ಪ್ರೀತಿ, ವಿಶ್ವಾಸ, ಮಾನವೀಯತೆ ಮತ್ತು ಸಹಬಾಳ್ವೆಯ ಬೆಳಕನ್ನು ಎಲ್ಲೆಡೆ ಪಸರಿಸುವ ಹಬ್ಬವಾಗಿದೆ. ನಾವೆಲ್ಲರೂ ಒಂದು ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸುವಂತೆ, ಪರಸ್ಪರ ಪ್ರೀತಿ, ಗೌರವ ಮತ್ತು ಸೌಹಾರ್ದತೆಯಿಂದ ಬದುಕಬೇಕು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಎಲ್ಲರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ” ಎಂದು ತಿಳಿಸಿ ಪೌರಕಾರ್ಮಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ, ಅವರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.
ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಈರೇಶ ಅಂಚಟಗೇರಿ ಅವರು ತಮ್ಮ ಕುಟುಂಬದೊಂದಿಗೆ ಪೌರಕಾರ್ಮಿಕರ ನಡುವೆ ದೀಪಾವಳಿ ಆಚರಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಂಡರು.

