ಧಾರವಾಡ
ಹಳೇ ಹುಬ್ಬಳ್ಳಿಯ ಆಸಾರಖೊಂಡ ಪ್ರದೇಶದಲ್ಲಿರುವ ಪುರಾತನ ಶ್ರೀ ಭವಾನಿ ಶಂಕರ ದೇವಾಲಯದ ಮಷ್ಕರಣೆಗೆ ಸಂಬಂಧಿಸಿದ ವಿಷಯದ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ದುರ್ಗಮ್ಮ ಶಶಿಕಾಂತ ಬೆಜವಾಡ ದಿ. 18-09-2026ರಂದು ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸದರಿ ಸಮಿತಿಯು ಅಧಿಕೃತವಾಗಿ ಕಾರ್ಯಾರಂಭ ಮಾಡಲು ಅಗತ್ಯವಿರುವ ಕಚೇರಿ ಕಾರ್ಯಾದೇಶವನ್ನು ಕೂಡಲೇ ಹೊರಡಿಸಿ, ಸಮಿತಿಯ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಸಮಿತಿಯ ಅಧ್ಯಕ್ಷರಾದ ಮಾಜಿ ಮಹಾಪೌರ ಈರೇಶ ಬಿ. ಅಂಚಟಗೇರಿ ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಸಮಿತಿಯು ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ಥಳ ಪರಿಶೀಲನೆ, ಸಂಬಂಧಪಟ್ಟ ದಾಖಲೆಗಳ ಸಂಗ್ರಹ, ಅಧಿಕಾರಿಗಳೊಂದಿಗೆ ಸಮನ್ವಯ ಹಾಗೂ ಸಭೆಗಳನ್ನು ನಡೆಸಲು ಅಗತ್ಯ ಆಡಳಿತಾತ್ಮಕ ಅನುಮತಿ ಮತ್ತು ಸಹಕಾರ ಒದಗಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಮಿತಿಯೊಂದಿಗೆ ಸಹಕರಿಸುವಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಮಹಾಪೌರರು ಈಗಾಗಲೇ ಸಮಿತಿ ರಚಿಸಿ ಆದೇಶ ಹೊರಡಿಸಿರುವುದರಿಂದ, ವಿಳಂಬವಿಲ್ಲದೆ ಅಧಿಕೃತ ಕಾರ್ಯಾದೇಶ ನೀಡಿ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಬೇಕು. ಸಮಿತಿಯು ಸ್ಥಳೀಯ ವಾಸ್ತವಾಂಶಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಈರೇಶ ಅಂಚಟಗೇರಿ ಆಯುಕ್ತರನ್ನು ಒತ್ತಾಯಿಸಿದ್ದಾರೆ.
