ಕಾನೂನು ಶಿಕ್ಷಣವು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಸಾಧನ: ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ

ಹಂಚಿಕೊಳ್ಳಿ

ಧಾರವಾಡ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಂಗಸಂಸ್ಥೆಯಾದ ಪಿ.ವಿ. ಜೋಶಿ ಕಾನೂನು ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ಮೂರು ವರ್ಷಗಳ ಎಲ್.ಎಲ್.ಬಿ. ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ‘ದೀಕ್ಷಾರಂಭ–2026’ ವಿದ್ಯಾರ್ಥಿ ಪ್ರವೇಶ ಹಾಗೂ ಪರಿಚಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಕಾನೂನು ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮಹತ್ವದ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕಾನೂನಿನ ವಿಧಿಗಳನ್ನು ಅಧ್ಯಯನ ಮಾಡುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಕಾರ್ಯವೈಖರಿ, ಸಂವಿಧಾನದ ಆಶಯಗಳು ಹಾಗೂ ವೃತ್ತಿಪರ ನೈತಿಕತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿರಂತರ ಅಧ್ಯಯನ, ಶಿಸ್ತು ಮತ್ತು ಪ್ರಾಮಾಣಿಕತೆ ಉತ್ತಮ ನ್ಯಾಯವಾದಿಗಳಾಗಲು ಅಗತ್ಯವಾದ ಗುಣಗಳಾಗಿವೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕದ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡಿ, ವಕೀಲ ವೃತ್ತಿ ಕೇವಲ ಹಣ ಸಂಪಾದಿಸುವ ವೃತ್ತಿಯಲ್ಲ; ಅದು ನ್ಯಾಯಕ್ಕಾಗಿ ಹೋರಾಡುವ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಪವಿತ್ರ ಜವಾಬ್ದಾರಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಿಕ ಮೌಲ್ಯಗಳು ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಮೂರು ವರ್ಷಗಳ ಕಾನೂನು ಶಿಕ್ಷಣದ ಅವಧಿಯನ್ನು ಸದುಪಯೋಗಪಡಿಸಿಕೊಂಡು ಸಮರ್ಥ ನ್ಯಾಯವಾದಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯು 1918ರಲ್ಲಿ ಸ್ಥಾಪನೆಯಾಗಿ, ಸಂಸತ್ತಿನ ಕಾಯ್ದೆಯ ಮೂಲಕ ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ ಘೋಷಿಸಲ್ಪಟ್ಟಿದ್ದು, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಈ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪಿ.ವಿ. ಜೋಶಿ ಕಾನೂನು ಮಹಾವಿದ್ಯಾಲಯವು ಗುಣಮಟ್ಟದ ಕಾನೂನು ಶಿಕ್ಷಣದ ಮೂಲಕ ಉತ್ತಮ ನ್ಯಾಯವಾದಿಗಳನ್ನು ರೂಪಿಸುವ ಗುರಿ ಹೊಂದಿದೆ. ಮಹಾವಿದ್ಯಾಲಯದ ಅಭಿವೃದ್ಧಿಗೆ ಆಡಳಿತ ಮಂಡಳಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ವಕೀಲ ಎಸ್.ಎನ್. ಪರಾಂಡೆ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಕಾನೂನು ಪುಸ್ತಕಗಳ ಅಧ್ಯಯನದ ಜೊತೆಗೆ ನ್ಯಾಯಾಲಯದ ಕಲಾಪಗಳು, ಕಾನೂನು ತೀರ್ಪುಗಳು ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಬೇಕು. ಸಮಾಜದಲ್ಲಿ ನ್ಯಾಯ ಮತ್ತು ಕಾನೂನಿನ ಗೌರವವನ್ನು ಎತ್ತಿಹಿಡಿಯುವ ಜವಾಬ್ದಾರಿ ಭವಿಷ್ಯದ ವಕೀಲರ ಮೇಲಿದೆ ಎಂದು ಹೇಳಿದರು.

ಜಗದೀಶ ಮಳಗಿ, ಅಶೋಕ ಶೆಟ್ಟರ, ಶ್ರೀಮತಿ ಉಮಾ ಚವ್ಹಾಣ, ಆಡಳಿತಾಧಿಕಾರಿಗಳಾದ ಡಾ. ವೈಷ್ಣವಿ ಡಿ. ಸತೀಶ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.‌ ಪ್ರಾಂಶುಪಾಲ ಡಾ. ಎಸ್.ಸಿ. ಮಾಳಗಿ ಸ್ವಾಗತಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *